Thursday, July 25, 2013

ಆ ಕಾಡು ಈ ಮಳೆ ಜೋಡಿ ಮದುವೆ



ಆಷಾಢದಲ್ಲಿ ನಮ್ಮ ಮಲೆನಾಡಿನಲ್ಲಿ ಯಾವ ಪರಿ ಮಳೆಯ ಅಬ್ಬರ ಇರುತ್ತದೆಂದು ನಿಮಗೆ ನಾನೇನು ಹೊಸದಾಗಿ ಹೇಳಬೇಕಾದ್ದಿಲ್ಲ. ಒಮ್ಮೆ ಜಿಟಿ ಜಿಟಿ ಮಳೆ. ಇನ್ನೊಮ್ಮೆ ಕಪ್ಪು ಕರಗಪ್ಪು ಮೋಡ. ಕಣ್ಣು ಮುಚ್ಚಿಕೊಂಡು ಮಳೆ ಸುರಿಯಲು ಆರಂಭಿಸಿತೆಂದರೆ ಫುಲ್ ಸ್ಟಾಪ್ ಹಾಕಲು ಒಂದೋ ಮಳೆ ನಕ್ಷತ್ರ ಬದಲಾಗಬೇಕು ಇಲ್ಲ ಮೋಡ ಖಾಲಿಯಾಗಬೇಕ

ಆಷಾಢದ ಮಳೆಗೆ ಬಯಕೆಗಳು ಹೆಚ್ಚು
ಹಬೆಯಾಡುವ ಸಾಂಬಾರು
ಹುರಿದ ಶೇಂಗಾ
ಒಣಸಿಟ್ಟ ಹಲಸಿನ ಬೀಜ
ಬರಣಿಗೆಯ ಅಪ್ಪೆಮಿಡಿ
ಕಟ್ಟಿಟ್ಟ ಹಪ್ಪಳ
ಗೇರುಬೀಜ
ಸಂಡಿಗೆ ಮಂಡಕ್ಕಿ
ಎಲ್ಲವೂ ಮನೆಯಲ್ಲಿ ಇದ್ದರೂ
ದೂರದ ನೆಂಟರ ಮನೆಯಲ್ಲಿ ಆಷಾಢದಲ್ಲೇ ಮದುವೆ
ಹೋಗಲೇ ಬೇಕು
ಇಲ್ಲವೆಂದರೆ ಬೇಜಾರಾಗುತ್ತೆ
ಅವರಿಗಲ್ಲ ನನಗೆ
ಒಂದು ಬಿಸಿ ಬಿಸಿ ಪಾಯಾಸ ಮಿಸ್ ಆಗಿದ್ದಕ್ಕೆ.  

ಆಷಾಢದ ಮಳೆಯಬಗ್ಗೆ ಕುಯ್ತಾ ಇದ್ರೆ ನಿಮಗೆ ನಮಗೆ ಇಬ್ರಿಗೂ ತಂಡಿಯಾಗುತ್ತೆ. ಮೆಣಸಿನ ಕಾಳು ಕಷಾಯ ಕುಡಿಬೇಕಾಗುತ್ತೆ. ವಿಷಯಕ್ಕೆ ಬರೋಣ. ಮೊನ್ನೆ ನಮ್ಮ ಅಪ್ಪಚ್ಚಿ ಮನೆಯಲ್ಲಿ ಮದುವೆ (ಒಹ್ ಅಪ್ಪಚ್ಚಿ ಅಂದ್ರೆ ಚಿಕ್ಕಪ್ಪ ಅಂತ ಕಾಣ್ರಿ)
ಅಷಾಢಮಾಸ ಪಂಚಮಿ ಜುಲೈ ಮಾಸದ 14 ರಂದು. ಜೋಡಿ ಮದುವೆ, ಜೋಡಿ ಮದುವೆ ಅಂದ್ರೆ ಏನು ಅಂತ ವ್ಯಖ್ಯಾನ ಮಾಡುವುದು ಕಷ್ಟ. ಮದುವೆ ಅಂದ್ರೆನೆ ಜೋಡಿ ಆಗೋದು ಅಂತ ಅರ್ಥ. ಮತ್ತೆ ಜೋಡಿ ಮದುವೆ ಅಂದ್ರೆ ಏನು ಅಂತಂದ್ರೆ ಒಂದೇ ಮನೆಯಲ್ಲಿ ಎರಡು ಮದುವೆ.

ಲೊಕೇಶನ್ ಶಿಪ್ಟ್

ಅದು 15 ವರ್ಷದ ಹಿಂದಿನ ನೆನಪು. ಬೈಂದೂರಿನಿಂದ ಎಂಟು ಕಿಲೋಮೀಟರ್ ಕೊರಾಡಿ ಗ್ರಾಮ. ಹೋಗುವದಕ್ಕೆ ದಿನಕ್ಕೆ ಒಂದೇ ಬಸ್ಸು. ಮಣ್ಣು ರಸ್ತೆ. ಮಧ್ಯರಸ್ತೆಯನ್ನ ತುಂಡರಿಸುವ ಒಂದು ದೊಡ್ಡ ಹಳ್ಳ. ಮಳೆಗಾಲದಲ್ಲಿ ಬಸ್ಸು ಹಳ್ಳದತನಕ ಮಾತ್ರ ಹೋಗುತ್ತಿತ್ತು. ಅಲ್ಲಿಂದ ಸಂಕ ದಾಟಿ ಮತ್ತೆ ಕಾಡಿನಲ್ಲಿ ನಾಲ್ಕು ಕಿಲೋಮೀಟರ್ ನಡೆದರೆ ಸಿಗುವದೇ ಕೊರಾಡಿ ಗ್ರಾಮ. ಕೆಲವೊಂದುಸಲ ಅಬ್ಬರದ ಮಳೆಗೆ ಸಂಕವೂ ತೇಲಿಕೊಂಡು ಹೋಗಿ ಮತ್ತೆ ಊರಿನವರು ಒಟ್ಟಾಗಿ ಸಂಕ ಹಾಕುವ ತನಕ ಕೊರಾಡಿ ಗ್ರಾಮ ದ್ವಿಪವೇ ಸರಿ. ಊರಿನಲ್ಲಿರುವ ಬೆರಳೆಣಿಕೆಯ ಮನೆಯವರ ಪಾಡು ಹಾರೋ ಹರ . ಕರೆಂಟಿಲ್ಲ, ಫೋನ್ ಇಲ್ಲ, ವಾಹನ ಇಲ್ಲ, ಸುತ್ತಲೂ ಕಾಡು. ಮನೆಯಿಂದ ಹೊರಗಡೆ ಕಾಲಿಟ್ಟರೆ ರಕ್ತ ಹೀರುವ ಜಿಗಣೆ. ಒಂದು ಕಪ್ ಬಿಸಿ ಚಹಾ ಕುಡಿಯುವದಕ್ಕೆ ಅಂತ ಕಟ್ಟಿಕೊಂಡ ಅಕಳ ಹಾಲು ಕರೆಯಲು ಹೋದರೆ ರಪಕ್ ಅಂತ ಒದೆದು ಮನೆಗೆ ಕಳುಹಿಸುತ್ತಿತ್ತು. ಆಕಳ ಕರುವನ್ನ ಕೊಟ್ಟಿಗೆಗೇ  ಬಂದು ಹುಲಿ ಹೊತ್ತೊಯ್ದರೆ ಯಾವ ಆಕಳು ತಾನೆ ಹಾಲು ಕರೆಯಲು ಸಾಧ್ಯ ಹೇಳಿ. ಅದೆಂತಹ ಕಾಡಾಗಿತ್ತು ಅಂತ ಇನ್ನು ನೀವೇ ಊಹಿಸಿಕೊಳ್ಳಿ.

ಕರಿ ಮೋಡ
ಕಂಬಳಿ ಕೊಪ್ಪೆ
ಕಪ್ಪು ಚಹಾ
ಗಪ್ಪಗೆ ಕುಳಿತ ಕಾಗೆ
ಹಗಲಲ್ಲೇ ಗದ್ದೆಗೆ ಬಿದ್ದ ಹಂದಿ
ಒದ್ದೆ ಪಂಚೆ
ಕೆಸರು ಕಾಲು
ಚಿಮಣಿ ದೀಪ
ಬಿರುಸು ಗಾಳಿ
ಇವೆಲ್ಲವೂ ಮಳೆಯ ಸಂಗಾತಿಗಳು

ಸ್ವಸ್ತಿ ಶ್ರೀ ಶಾಲಿವಾಹನ ಶಕೆ 1913 ಆಷಾಢ  ಶುದ್ಧ ಪಂಚಮಿ ಜುಲೈ 2013 ನೇ ಇಸವಿ

ಬೈಂದೂರು ಪೇಟೆಯಲ್ಲಿ ಇಳಿದಕೂಡಲೇ ಬಾಡಿಗೆಗೆ ಅಟೋ ರಿಕ್ಷಾ,  ಒಮಿನಿ ಕಾರು, ಡಾಂಬರು ರಸ್ತೆ. ಮನೆಗೊಂದು ಬೈಕು ಕಾರು. ಎತ್ತರದ ಬ್ರಿಡ್ಜು. ಎಲ್ಲರ ಕೈಯಲ್ಲೂ ಎರಡೆರಡು ಸಿಮ್ಮು ತುರುಕಿಸುವ ಮೊಬೈಲು. ಜಗಮಗಿಸುವ ಕರೆಂಟು. ಕರೆಂಟು ಕೈಕೊಟ್ಟರೆ ಜನರೇಟರ್, ಹಂಚಿಗೆ ವಿದಾಯಹೇಳಿ ಎದ್ದುನಿಂತ ತಾರಸಿ ಮನೆ, ಊರಿಗೊಂದು ಚಂದದ ದೇವಸ್ಥಾನ. ಸಿಮೆಂಟಿನ ಅಚ್ಚಿನಿಂದ ನಿರ್ಮಾಣವಾದ ಸುಂದರ ಗೋಪುರದ ವಿಗ್ರಹಗಳು. ಕೊಟ್ಟಿಗೆಯಲ್ಲಿ ಜೆರ್ಸಿ ಆಕಳು, ಕಾಡಿನ ಜಾಗದಲ್ಲಿ ಎದ್ದುನಿಂತ ರಬ್ಬರ್ ಮರಗಳು. ಚಪ್ಪರಕ್ಕೆ ಪ್ಲಾಸ್ಟಿಕ್ ತಗಡಿನ ಹೊದಿಕೆ, ಮದುವೆಗೆ ಸಾವಿರದ ಚಿಲ್ಲರೆ ಜನ.

ಕೊನೆ ಹನಿ

ಹದಿನೈದು ವರ್ಷದ ಕೆಳಗೆ ಕಂಡ ಕೊರಾಡಿ ಗ್ರಾಮ ಇದೇನಾ...?  ಅಲ್ಲ ಕಣ್ರೀ ಇದಲ್ಲವೇ ಅಲ್ಲ ,
ಅಲ್ಲಿ ಈಗ ಯಾರೂ ಸಂಕ ಬಳಿದು ಹೋದ ಕಥೆ ಹೇಳುವವರು, ಜಸ್ಟ್  ದಾರಿ ಮಧ್ಯದಲ್ಲಿ ಅಡ್ಡಬಂದ ಹಂದಿ ಕಥೆಹೇಳುವವರು. ಜಿಗಣೆ ಕಚ್ಚಿಸಿಕೊಂಡು ರಕ್ತ ನಿಲ್ಲಲು ಗಾಯಕ್ಕೆ ಸುಣ್ಣ ತಿಕ್ಕಿಕೊಳ್ಳುತ್ತಿರುವವರು. ಹುಲಿ ಆಕಳನ್ನ ಹಿಡಿದುಕೊಂಡು ಹೋದ ಕಥೆಯನ್ನ ಮತ್ತು ನಾನಾತರಹದ ತರಹೇವಾರಿ ಕಾಡಿನ ಬಿಸಿ ಬಿಸಿ ಕಥೆಯನ್ನ ಯಾರು ಹೊಳೋರೆ ಇಲ್ಲ. ಸಾಯಂಕಾಲ ಮಕ್ಳು ಮಳೆಗಾಲದಲ್ಲಿ ಗೇರುಬೀಜ, ಹಲಸಿನ ಬೀಜ ಸುಟ್ಟಿಕೊಂಡು ತಿನ್ನೋದೂ ಇಲ್ಲ. ಅಂಗಡಿಯಿಂದ ಕ್ಯಾಡ್ಬರಿ, ಡೇರಿಮಿಲ್ಕ್, ಕುರ್ಕುರೆ ತರಲಿಲ್ಲ ಅಂದ್ರೆ ಹಟ ಬಿಡೋದಿಲ್ಲ.



Friday, August 17, 2012

ಇಪ್ಪತ್ತು ಪೈಸೆ


ಅತಿ ಚಿಕ್ಕ ರೂಮು. ಸರಿಯಾಗಿ ಕಾಲು ನೀಡಿದರೆ  ಪಾದಗಳೆರಡು  ಕೋಣೆಯ ಹೊರಗಡೆ ಚಾಚುತ್ತವೆ . ಇನ್ನು ಕೈಗಳನ್ನ ಅಗಲಸಿದರೆ ಎರಡೂ ಬದಿಯ ಗೋಡೆಯನ್ನ ಮುಟ್ಟಬಹುದು. ಅಂಗೈಯ್ಯಗಲದ  ಈ ರೂಮಿಗೆ ಇನ್ನೂರು ರುಪಾಯಿ ಬಾಡಿಗೆ. ಅಕಸ್ಮಾತ್ ಒಂದು ಜಿರಳೆ ಒಳಗೆ  ಸೇರಿಕೊಳ್ಳಬೇಕೆಂದರೂ  ಜಾಗವಿಲ್ಲ.

ಅಮ್ಮ ಕಳುಹಿಸುವ ದುಡ್ಡು ಮುನ್ನೂರು ರುಪಾಯಿ ತಿಂಗಳಿಗೆ. ಅದಕ್ಕೂ ಹೆಚ್ಚು ಹಣ ಕಳುಹಿಸು ಅಂತ ಹೇಗೆ ಕೇಳಲಿ ? ಅದೇನೇನು ಬವಣೆಗಳನ್ನ ಪಟ್ಟುಕೊಂಡು ಕಳುಹಿಸುತ್ತಾಳೋ ಆ ಗೋಳಿನ ಕಥೆಯೇ ಒಂದು ಕಾದಂಬರಿ ಆದೀತು. ಅದೆಷ್ಟೇ ಕಷ್ಟವಾದರೂ ತಿಂಗಳ ಕೊನೆಗೆ ಮುನ್ನೂರು ರೂಪಾಯಿಯನ್ನ ಕಳುಹಿಸಲು ಎಂದೂ ಮರೆತವಳಲ್ಲ ಅಮ್ಮ. ಇದ್ದೊಬ್ಬ ಮಗ ಓದಿ ಬುದ್ಧಿವಂತನಾಗಿ ಕೆಲಸ ಹಿಡಿದು ತನ್ನನ್ನ ಮುಪ್ಪಿನಲ್ಲಿ ಸಾಕುತ್ತಾನೆ. ತನ್ನ ಮಗನ ಭವಿಷ್ಯ ಹಸನಾಗುತ್ತದೆ ಅನ್ನುವದು ಅಮ್ಮನ ದೋರಣೆ. ನನ್ನ ಓದು ಅರ್ಧ ಮುಗಿಯುವದರೊಳಗೆ ಅಮ್ಮನ ಮೈಮೇಲಿನ ಆಭರಣ ಒಂದೇ ಅಲ್ಲ ಮನೆಯಲ್ಲಿರುವ ದೊಡ್ಡ ದೊಡ್ಡ ಪತ್ರೆಗಳೂ ಒಂದೊಂದಾಗಿ ಮುಗಿಯುತ್ತ ಬಂದಿತ್ತು. ಮಗನ ಭವಿಷ್ಯವನ್ನ ರೂಪಿಸುವ ನಿಟ್ಟಿನಲ್ಲಿ ಅದೆಲ್ಲವೂ ಗೌಣ ಆಗಿತ್ತು ಅವಳಿಗೆ.
 
ಪ್ರತಿ ತಿಂಗಳ ಕೊನೆಯಲ್ಲಿ ನಮ್ಮೂರಿನಿಂದ ಒಬ್ಬರು ಪರಿಚಯಸ್ಥ ರಾಯರು ಪ್ಯಾಟೆಗೆ ಬರುತ್ತಿದ್ದರು. ಅವರ ಹತ್ತಿರ ಅಮ್ಮ ದುಡ್ಡು ಕಳುಹಿಸಿ ಕೊಡುತ್ತಿದ್ದಳು. ನಾನು ಊರಿಗೆ ಹೋಗುತ್ತಿದ್ದುದು ವರ್ಷದಲ್ಲಿ ಎರಡೇ ಬಾರಿ. ಮಧ್ಯದ ರೆಜೆ ಮತ್ತು ಬೇಸಿಗೆಯ ರಜಾದಲ್ಲಿ ಮಾತ್ರ. ಮಧ್ಯದಲ್ಲಿ ಹೋಗಿ ಬರಲಿಕ್ಕೆ ಹಾದಿ ಖರ್ಚಿಕೆ ಹಣ ಹೊಂದಿಸುವದೇ ಕಷ್ಟ. ದುಡ್ಡು ಕೊಡಲಿಕ್ಕೆ ಅಂತ ರಾಯರು ಬರುತ್ತಿದ್ದರಲ್ಲ ಅವರ ಕೈಯಲ್ಲಿ ಅಮ್ಮನಿಗೆ ಒಂದು ಪತ್ರವನ್ನ ಬರೆದು ಕೊಡುತ್ತಿದ್ದೆ. ಅಕ್ಷರದ ರೂಪದಲ್ಲಿ ಏನನ್ನೂ ಬರೆಯುತ್ತಿರಲಿಲ್ಲ. ಹಾಗೆ ಬರೆದರೆ ಅದನ್ನವಳು ಓದಲು ಪಕ್ಕದಮನೆ ಅಲ್ಪಸ್ವಲ್ಪ ಬರಹ ತಿಳಿದಿರುವ ಪದ್ದುಚಿಕ್ಕಮ್ಮನ ಮೊರೆ ಹೋಗಬೇಕು. ಪತ್ರದ ಒಳಗಡೆ ತಾಯಿ ಬೆಕ್ಕೊಂದು ತನ್ನ ಮರಿಯನ್ನ ಕಚ್ಚಿಕೊಂಡು ಹೋಗುತ್ತಿರುವಹಾಗೋ, ಇನ್ನೊಮ್ಮೆ ಆಕಳುಕರು ಹಾಲು ಕುಡಿಯುತ್ತಿರುವಹಾಗೆ, ಪೊಟರೆಯಲ್ಲಿಯ  ಮರಿಗಳಿಗೆ ತಾಯಿಗಿಳಿ ಆಹಾರವನ್ನ ತಂದು ಬಾಯಿಗೆ ಹಾಕುತ್ತಿರುವ ಹಾಗೆ ಏನೇನೋ ಚಿತ್ರಗಳು.. ಮಾತೃ ವಾತ್ಸಲ್ಯ ಪ್ರಧಾನವಾದ ಚಿತ್ರಗಳನ್ನ ಬರೆದು ಕಳುಹಿಸುತ್ತಿದ್ದೆ, ಓದಲು ಬಾರದ ಅಮ್ಮನಿಗೆ ಯಾವಾಗಲೂ  ಅದೇನು ಪತ್ರವನ್ನ ಕೊಡುತ್ತಾನೋ ಇವನು ಅನ್ನುವ ಆಶ್ಚರ್ಯದಿಂದ ನನ್ನ ಮುಖವನ್ನು ನೋಡಿ ರಾಯರು ನಗುತ್ತಿದ್ದರು. ಪತ್ರದ ಒಳಗೆ ಅಕ್ಷರಮಾಲೆಯ ಬದಲು ಮಾತಾಡುವ ಚಿತ್ರಗಳಿರುತ್ತದೆಯಂದು ಅವರಿಗೇನು ಗೊತ್ತು ?

ನನ್ನ ಚಿತ್ರ ಪತ್ರವನ್ನ ನೋಡಿ ಅಮ್ಮ ಅದೇನನ್ನ ಊಹಿಸಿಕೊಂಡು ಸಂತಸ ಪಡುತ್ತಿದ್ದಳೋ ಗೊತ್ತಿಲ್ಲ. ಆದರೆ ನೂರು ಅಕ್ಷರ ಹೇಳುವ ಕಥೆಯನ್ನ ಒಂದು ಚಿತ್ರ ಕಟ್ಟಿಕೊಡಬಹುದು ಅನ್ನುವದನ್ನ ನನ್ನ ತಾಯಿಯ ಮುಖವನ್ನ ನೋಡಿ ತಿಳಿದುಕೊಳ್ಳಬಹುದು. ನನ್ನ ಪ್ರತಿ ತಿಂಗಳ ಪತ್ರವನ್ನ ಅವಳು ಸಾಲಾಗಿ ಜೋಡಿಸಿಟ್ಟು ಆಗಾಗ ನೆನಪಾದಾಗ ತೆಗೆದು ನೋಡುತ್ತಿದ್ದಳಂತೆ. ಇದು ಅಮ್ಮನ ಗೆಳತಿ ಲಕ್ಕು ಚಿಕ್ಕಮ್ಮ ಹೇಳಿದ್ದು.

ಅಮ್ಮ ಕಳುಹಿಸುತ್ತಿದ್ದ ಮುನ್ನೂರು ರುಪಾಯಿಗಳಲ್ಲಿ ಬಾಡಿಗೆಗೆ ಇನ್ನೂರು ಹೋದರೆ ಉಳಿದ ನೂರು ರುಪಾಯಿಗಳಲ್ಲಿ ನನ್ನ ಒಂದು ತಿಂಗಳ ಖರ್ಚು ನೀಗಬೇಕು. ಒಂದು ಚಿಕ್ಕ ಚಿಮಣಿ ಸ್ಟೋ, ಮತ್ತೆರಡು ಪಾತ್ರೆಗಳು, ನೀರು ಹಿಡಿದಿಟ್ಟುಕೊಳ್ಳಲಿಕ್ಕೆ ಒಂದು ಕೊಡ, ಎರಡು ಲೋಟ, ಒಂದು ಊಟದ ತಟ್ಟೆ. ಇವು ನನ್ನ ರೂಮಿನಲ್ಲಿಇರುವ ಅಡಿಗೆ ಪರಿಕರಗಳು. ತಿಂಗಳಿಗೆ ಬೇಕಾಗುವಷ್ಟು ಅಕ್ಕಿ,  ಉಪ್ಪು, ಅಮ್ಮ ಕಳುಹಿಸಿದ ಉಪ್ಪಿನಕಾಯಿ, ಯತೇಚ್ಛ ನೀರು ಇವುಗಳನ್ನ ಬಿಟ್ಟರೆ ಮತ್ತೇನೂ ಇರುತ್ತಿರಲಿಲ್ಲ ನನ್ನ ಕೋಣೆಯಲ್ಲಿ. ಬೆಳಿಗ್ಗೆ ಎದ್ದು ಗಂಜಿ ಬೇಯಿಸಿದರಾಯಿತು ಎರಡು ಹೊತ್ತಿಗೆ ಸಾಕಾಗುವಷ್ಟು. ರಾತ್ರಿಗೂ ಮತ್ತೆ ಬಿಸಿ ಬಿಸಿ ಗಂಜಿಯೇ ಗತಿ. ನೂರು ರೂಪಾಯಿ ಒಂದು ತಿಂಗಳಿಗೆ ಸಾಕಾಗುವಷ್ಟು ಅಕ್ಕಿ, ಉಪ್ಪು, ಸೀಮೆ ಎಣ್ಣೆ ಸೋಪು, ತೆಂಗಿನ ಎಣ್ಣೆ, ಪೆನ್ನು ಪೇಪರ್ ಎಂಬಿತ್ಯಾದಿ ಅದು ಇದು ವಸ್ತುಗಳಿಗೆ ಸರಿ ಹೊಂದುತ್ತಿತ್ತು.

ತಿಂಗಳ ಕೊನೆಯಲ್ಲಿ ಅಮ್ಮನ ದುಡ್ಡು ಬಂದೇ ಬರುತ್ತದೆ ಎಂಬ ನಂಬಿಕೆಯ ಮೇಲೆ ತಿಂಗಳು ಕೊನೆಮುಟ್ಟುವ ಹೊತ್ತಿಗೆ ಒಂದು ಚೂರು ಅಕ್ಕಿ ಇಲ್ಲದಂತೆ ಎಲ್ಲವನ್ನ ಖರ್ಚು ಮಾಡಿಬಿಡುತ್ತಿದ್ದೆ. ತಿಂಗಳ ಕೊನೆಯಲ್ಲಿ ದುಡ್ಡು ಸಿಕ್ಕಿದ ಕೂಡಲೇ ಬಾಡಿಗೆ ಚುಕ್ತ ಮಾಡಿ ಮತ್ತೆ ಮುಂದಿನ ತಿಂಗಳಿಗೆ ಬೇಕಾಗುವಷ್ಟು ಅಕ್ಕಿಯನ್ನ ಉಳಿದ ಸಾಮಾನುಗಳನ್ನ ಕೊಂಡುತರುವದು ನನ್ನ ರೂಢಿಯಾಗಿತ್ತು. ತಿಂಗಳ ಕೊನೆಗೆ ಉಪ್ಪಿನಕಾಯಿಯೂ ಖರ್ಚಾಗಿ ಬಿಡುತ್ತಿತ್ತು. ನೀರು ಕುಡಿಯುವಾಗ, ಮತ್ತು  ಬಾಯಿ ಬೇಡಿದಾಗಲೆಲ್ಲ ಒಂದೊಂದು ಚೂರು ಚೂರು ಉಪ್ಪಿನಕಾಯಿಯನ್ನ ನೆಕ್ಕಿ ನೆಕ್ಕಿ ಅದನ್ನು ತಳಮುಟ್ಟಿಸಿ ಬಿಡುತ್ತಿದ್ದೆ.

ಒಂದು ತಿಂಗಳು ನಮ್ಮೂರಿನಿಂದ ರಾಯರು ಬರುವದು ಎರಡು ದಿನ ತಡವಾಯಿತು. ತಿಂಗಳ ಕೊನೆಯಲ್ಲಿ ಬಂದೆ ಬರುತ್ತಾರೆ ಎಂಬ ನಂಬಿಕೆಯಲ್ಲಿ ನಾನು ಎಲ್ಲ ಅಕ್ಕಿಯನ್ನ ಕರ್ಚು ಮಾಡಿಬಿಟ್ಟಿದ್ದೆ. ಆದರೂ ಆಪತ್ಕಾಲಕ್ಕೆ ಅಂತ ಒಂದು ಅರಿವೆಯಲ್ಲಿ ಸ್ವಲ್ಪ ಅಕ್ಕಿಯನ್ನ ಕಟ್ಟಿ ಮೂಲೆಯಲ್ಲಿಟ್ಟಿರುತ್ತಿದ್ದೆ. ಅದನ್ನೇ ಈಗ ಅಪತ್ಕಾಲಕ್ಕೆಂದು ಉಪಯೋಗಿಸತೊಡಗಿದೆ. ಇದ್ದ ಸ್ವಲ್ಪ ಅಕ್ಕಿಗೆ ಎಳೆದು ಎಳೆದು ನೀರನ್ನ ಹಾಕಿ ಗಂಜಿಯನ್ನ ಕಾಯಿಸುತ್ತಿದ್ದೆ. ಹೀಗೆ ಮೂರನೆ ದಿನ ಅಕ್ಕಿ ಬೆಳಗಿನ ಹೊತ್ತನ್ನ ದಾಟಿ ಮದ್ಯಾಹ್ನದ ಹೊತ್ತಿಗೆ ಬರಲೇ ಇಲ್ಲ. ಇವತ್ತು ಸಾಯಂಕಾಲದ ಹೊತ್ತಿಗೆ ರಾಯರು ಬಂದೆ ಬರುತ್ತಾರೆಂಬ ಬರವಸೆಯಲ್ಲಿ ಮಧ್ಯಾಹ್ನ ನೀರನ್ನ ಕುಡಿದುಕೊಂಡು ಉಳಿದುಬಿಟ್ಟೆ. ಆದರೆ ಹೊಟ್ಟೆ ಕೇಳಬೇಕಲ್ಲ ..? ಭಯಂಕರ ಹಸಿವು. ಉದರಿಂದ ಎದ್ದ ಅಗ್ನಿಯ ಜ್ವಾಲೆ ಹೊಕ್ಕುಳಿನಿಂದ ಮಸ್ತಕದವರೆಗೆ ವ್ಯಾಪಿಸುತ್ತಿದೆಯೆನ್ನುವಹಾಗೆ ಭಾಸವಾಗುತ್ತಿದೆ. ಹಸಿವು ಜೋರಾಗ ತೊಡಗಿತು, ನೀರನ್ನ ಕುಡಿದರೆ ಉಚ್ಚೆ ಹೊಯ್ಯಲು ಹೋಗುವಷ್ಟು ತ್ರಾಣ ನನ್ನಲ್ಲಿಲ್ಲ ಅಂತ ಅನ್ನಿಸತೊಡಗಿತು. ಇಲ್ಲ....! ಏನೂ ಮಾಡಿದರೂ ಹಸಿವನ್ನ ತಾಳಲಾರೆ. ಕೊನೆಗೊಮ್ಮೆ ಒಂದು ಯೋಚನೆ ಬಂತು. ನನ್ನ ರೂಮಿನ ಒಟಾರದ ಮುಂದಿನ ಓಣಿಯ ತಿರುವಿನಲ್ಲಿ ನಮ್ಮೂರಿನ ಪಕ್ಕದ ಕೊಂಕಣಿ ಶಾನುಬೋಗರರೊಬ್ಬರ   ಅಂಗಡಿ ಇತ್ತು . ಶಾನುಬೋಗರ ಅನುಪಸ್ಥಿತಿಯಲ್ಲಿ ಅವರ ಮಗ ಅಂಗಡಿಯನ್ನ ನೋಡಿಕೊಳ್ಳುತ್ತಿದ್ದರು. ಅಂಗಡಿಗೆ ಹೋಗಿ  ಏನಾದರೂ ಸಾಲ ಕೇಳಿ ತೆಗೆದುಕೊಳ್ಳುವ ಎನ್ನುವ ಯೋಚನೆ ಬಂತು. ಅವರಿಗೆ ನನ್ನ  ಸರಿಯಾದ  ಪರಿಚಯವಿಲ್ಲ.  ನಾಚಿಕೆಯ ಸ್ವಭಾವದವನಾದ ನನಗೆ ಸಾಲ ಕೇಳುವದಕ್ಕೆ ಏನೋ ನಾಚಿಕೆ. ಹಾಗೆ ರೂಮಿನಲ್ಲಿ ಹುಡುಕಿದರೆ ಎಂಟಾಣಿ ಪಾವಲಿ ಸಿಗಬಹುದೇನೋ ಎನ್ನುವ ಯೋಚನೆ ಹತ್ತಿ ರೂಮಿನ ತುಂಬಾ ಹುಡುಕಿದೆ. ಅದೃಷ್ಟಕ್ಕೆ ಯಾವಾಗಲೋ ತೆಗೆದಿಟ್ಟ ಇಪ್ಪತ್ತು ಪೈಸೆಯ ನಾಲ್ಕು ಗಟ್ಟಿಗಳು ಸಿಕ್ಕಿದವು. ಅಲ್ಲಿಗೆ  ಒಟ್ಟು ಎಂಬತ್ತು ಪೈಸೆ ಆಯಿತು. ಆದರೆ ಒಂದು ಪ್ಯಾಕೆಟ್ ಬ್ರೆಡ್ ನ್ನ ತೆಗೆದುಕೊಳ್ಳಬೇಕೆಂದರೆ ಒಂದು ರುಪಾಯಿ ಬೇಕೇ ಬೇಕು. ಇನ್ನೂ ಇಪ್ಪತ್ತು ಪೈಸೆ ಕಡಿಮೆಯೇ ಆಯಿತು. ಇನ್ನು ಇಪ್ಪತ್ತು ಪೈಸೆಗೆ ಏನು ಮಾಡುವದು.? ರೂಮಿನ ಕಿಟಕಿಯ ಮೇಲೆ ಒಂದು ದೇವರ ಫೋಟೋ  ಇಟ್ಟುಕೊಂಡಿದ್ದೆ .ಅದರ ಕೆಳಗೆ ಒಂದು ಇಪ್ಪತ್ತು ಪೈಸೆಯ ನಾಣ್ಯವನ್ನ ಇಟ್ಟಿದ್ದೆ. ಆ ಇಪ್ಪತ್ತು ಪೈಸೆಯ ಹಿನ್ನೆಲೆಯ ಕಥೆಯೊಂದಿದೆ. 

ನಾನು ದಿನಾಲೂ ನಡೆದುಕೊಂಡು ಕಾಲೇಜಿಗೆ ಹೋಗುವ ದಾರಿಯಲ್ಲಿ ಸಿಗುವ ಆಂಜನೇಯ ದೇವಸ್ಥಾನದ ಅರಳಿ ಕಟ್ಟೆಯ ಕೆಳಗೆ ಒಬ್ಬ ಸಾದು ಸನ್ಯಾಸಿ ಕುಳಿತುಕೊಳ್ಳುತ್ತಿದ್ದ.  ಅವನಲ್ಲಿಗೆ ಬಂದವರಿಗೆ ಭವಿಷ್ಯವನ್ನ ಹೇಳುವದು ಅವನ ಉಧ್ಯೋಗ. ಬಂದವರು ಕೊಟ್ಟ ದುಡ್ಡಿನಲ್ಲಿ ಅದೇನು ಸಂಸಾರ ಮಾಡುತ್ತಿದ್ದನೋ ಆ ದೇವರೇ ಬಲ್ಲ. ಸನ್ಯಾಸಿಗೇನು ಸಂಸಾರದ ಹಂಗು ಅಲ್ಲವೇ ? ನನಗೂ ಒಮ್ಮೆ ನನ್ನ ಭವಿಷ್ಯವನ್ನ ತಿಳಿಯಬೇಕೆನ್ನುವ ಕುತೂಹಲ. ಆದರೆ ಭವಿಷ್ಯವನ್ನ ಕೇಳಲು ವ್ಯಯಿಸುವಷ್ಟು ಹಣ ನನ್ನಲ್ಲಿಲ್ಲ. ದಿನಾಲು ನಡೆದುಕೊಂಡು ಹೋಗುವಾಗ ನನ್ನಲ್ಲಿರುವ ಆಸೆ ಮಾತ್ರ ನನ್ನನ್ನ ಬಿಡದೆ ಕಾಡುತ್ತಿತ್ತು. ಒಂದು ದಿನ ದೈರ್ಯ ಮಾಡಿ ಅಜ್ಜನ ಹತ್ತಿರ ಹೋಗಿ ಕುಳಿತು
ಅಜ್ಜಾ ನನಗೂ ನನ್ನ ಭವಿಷ್ಯವನ್ನ ತಿಳಿಯಬೇಕೆಂಬ ಆಸೆ ಇದೆ ಆದರೆ ಹಣ ವ್ಯಯಿಸುವ ತಾಕತ್ತು  ಮಾತ್ರ ಇಲ್ಲ. ದುಡ್ಡು ಇಲ್ಲದವರಿಗೆ ನೀನು ಭವಿಷ್ಯವನ್ನ ಹೇಳುತ್ತೀಯ..?

ಅಜ್ಜ

ದುಡ್ಡು ಗಿಡ್ಡು ಏನು ಬೇಡ ಮಗ
 .
ಇಲ್ಲಿಗೆ ಬಂದವರು ಭವಿಷ್ಯ ಕೇಳಿದಮೇಲೆ ದುಡ್ಡನ್ನ ಕೊಟ್ಟೇ ಬಿಡುತ್ತಾರೆ ಅನ್ನುವ ಯಾವ ಖಾತರಿಯೂ ಇಲ್ಲ.
ಹಾಗಂತ ಕೊಟ್ಟೇ ಬಿಡಬೇಕೆಂಬ ನಿಯಮವನ್ನ ನಾನು ಹೇಳಿದವನಲ್ಲ.

ಎಷ್ಟೋ ಜನಕ್ಕೆ ಇದ್ದಿದ್ದನ್ನ ಇದ್ದಹಾಗೆ ಹೇಳಿದ್ದಕ್ಕೆ ಸಿಟ್ಟುಬಂದೋ, ಕಹಿಯಾದ ಮಾತಿಗೆ ಬೇಜಾರಗಿಯೋ ಹಣವನ್ನ ಕೊಡದೆ ಹೋಗುತ್ತಾರೆ. 

ಇನ್ನು ನಿನಗೆ ಉಚಿತವಾಗಿ ಭವಿಷ್ಯವನ್ನ ಹೇಳಿದರೆ ನನಗೇನು ಗಂಟು ಹೋಗುತ್ತೆ ಮಗಾ 
.
ಹೀಗೆ ಹೇಳುತ್ತ ನನ್ನ ಕೈಯನ್ನ ತನ್ನ ಕೈಯಲ್ಲಿ ಹಿಡಿದು ಭವಿಷ್ಯವನ್ನ ಹೇಳತೊಡಗಿದ

ಮಗಾ ನೀನು ಮುಂದೆ ದೊಡ್ಡ ಮನುಷ್ಯ ಆಗ್ತೀಯ. ಅಲ್ಲದೆ ಈ ನಯ ವಿನಯವೇ ನಿನ್ನನ್ನ ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ. ಆದರೆ ಈ ನಾಚಿಕೆಯ ಸ್ವಭಾವ ಇದ್ಯಲ್ಲ ಅದು ನಿನ್ನನ್ನ ಕೆಲವು ಕಡೆ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಮುಂದೆ ಹೀಗಾಗುತ್ತೆ,ಹೇಗೂ ಆಗುತ್ತೆ, ಹಾಗೆ ಆದಮೇಲೆ ಹೀಗೆ ಆಗುತ್ತೆ ಅಂದ.
ನನ್ನ ಪರಿಸ್ಥಿತಿಯನ್ನ ಇದ್ದದ್ದು ಇದ್ದಹಾಗೆ ಹೇಳಿದ. ನನ್ನ ಬಾಲ್ಯತನದಲ್ಲಾದ ಕೆಲವು ಘಟನೆಯನ್ನ ನಿಜವಾಗಿ ಕಂಡವನಂತೆ ವರ್ಣಿಸಿದ. ಆಮೇಲೆ ನನ್ನ ಕೈಯಲ್ಲಿ ಒಂದು ಇಪ್ಪತ್ತು ಪೈಸೆಯ ನಾಣ್ಯವನ್ನ ಮಂತ್ರಿಸಿ ಕೊಟ್ಟ. ಈ ನಾಣ್ಯವನ್ನ ಜೋಪಾನವಾಗಿ ಇರಿಸಿಕೋ ಮುಂದೆ ನಿನಗೆ ಇದರಿಂದ ಲಕ್ಷ ಲಕ್ಷ ಹಣ ಹರಿದು ಬರುತ್ತೆ ಅಂದ. ಪುಗ್ಸಾಟೆ ಭವಿಷ್ಯ ತಿಳಿದುಕೊಂಡು ಅವನಿಂದಲೇ ಹಣವನ್ನ ಪಡೆದುಕೊಂಡು ಬಂದೆ.  ನಾಣ್ಯವನ್ನ ಕಿಡಕಿಯಲ್ಲಿರುವ ದೇವರ ಫೋಟೋದ ಕೆಳಗಡೆ ಇಟ್ಟುಕೊಂಡು ನನ್ನ ಭವಿಷ್ಯದ ನಿಧಿಯನ್ನ ನೆನೆದು ದಿನ ದಿನ ಕೈಮುಗಿಯುತ್ತಿದ್ದೆ.

ಒಂದು ರುಪಾಯಿಗೆ ಇಪ್ಪತ್ತು ಪೈಸೆ ಕಡಿಮೆಬಿದ್ದು ಹುಡುಕುತ್ತಿದ್ದೆನಲ್ಲ ಆ ಸಂದರ್ಭದಲ್ಲಿ ಈ ಫೋಟೋದ ಕೆಳಗಡೆ ಇರುವ ಇಪ್ಪತ್ತು ಪೈಸೆ ಕಂಡಿದ್ದು. ಎಂತಹ ಸಂದರ್ಭ ಬಂದರೂ ಮುಟ್ಟಬಾರದು ಅಂದುಕೊಂಡಿದ್ದೆ. ಆದರೆ ಹಸಿವಿನ ಮುಂದೆ ಭವಿಷ್ಯ ಗೌಣ ಅಲ್ಲವೇ..? ಇವತ್ತು  ಬದುಕಿದ್ರೆ ತಾನೇ ನಾಳೆಯ ಬೆಳಕನ್ನ ನೋಡುವದು.

ಈ ಇಪ್ಪತ್ತು ಪೈಸೆ ಸೇರಿ ಈಗ ನನ್ನ ಕೈಯಲ್ಲಿ ಒಂದು ರುಪಾಯಿ ಆಯಿತು. ಶಾನುಭೋಗರ ಅಂಗಡಿಗೆ ಹೋಗಿ ಒಂದು ಪ್ಯಾಕೆಟ್ ಬ್ರೆಡ್ ತೆಗೆದುಕೊಳ್ಳಲೋ ಅಥವಾ ಒಂದು ಅರ್ಧ ಕೆಜಿ ಅಕ್ಕಿ ತೆಗದುಕೊಳ್ಳಲ್ಲೋ ಎನ್ನುವ ಜಿಜ್ಞಾಸೆ ಬಂತು. ಯೋಚನೆ ಮಾಡಿ ಮಾಡಿ ಆಮೇಲೆ ಬ್ರೆಡ್ ತೆಗೆದುಕೊಳ್ಳುವದೇ ಸೂಕ್ತ ಅಂತ ಅನಿಸಿ ಶಾನುಬೋಗರ ಅಂಗಡಿಯತ್ತ ಜೋರಾಗಿ ನಡೆಯತೊಡಗಿದೆ.

ಊಟ ಮುಗಿಸಿಕೊಂಡು ಬಂದ ಶಾನುಬೋಗರ ಹುಡುಗ ಈಗ ತಾನೇ ಅಂಗಡಿಯ ಬಾಗಿಲನ್ನ ತೆಗೆಯುತ್ತಿದ್ದ. ಇಪ್ಪತ್ತು ಪೈಸೆಯ ಐದು ನಾಣ್ಯವನ್ನ ಮುಂದಿರಿಸಿ ಒಂದು ಬ್ರೆಡ್ ಪ್ಯಾಕ್ ಕೊಡಿ ಅಂದೆ. ಮಧ್ಯಾನ್ಹದ ಮೊದಲನೇ ಗಿರಾಕಿ  ನಾನು. ಬೋಣಿಗೆಯ ದುಡ್ಡು ಅದಾದ್ದರಿಂದ ಕೊಟ್ಟ ಪಾವಲಿಯನ್ನ ಕೈಯಲ್ಲಿ ತೆಗೆದುಕೊಂಡು ಒಂದು ನಾಣ್ಯವನ್ನ ದೇವರ ಕೆಳಗೆ ಇಟ್ಟು ಕೈಮುಗಿದು ನನಗೆ ಬ್ರೆಡ್ ಪ್ಯಾಕೇಟ್ಟನ್ನ ತೆಗೆದುಕೊಟ್ಟು ಕಿರು ನಗೆ ಬೀರಿದರು.
ದೇವರ ಫೋಟೋದ ಕೆಳಗೆ ಸೇರಿದ್ದು ಯಾವ ನಾಣ್ಯ ಆಗಿರಬಹುದು..? ಅದು ಅಜ್ಜ ಕೊಟ್ಟ ನಾಣ್ಯ ಆಗಿರಬಹುದೇ...? ಅನ್ನುವ ಆಲೋಚನೆ ನನ್ನ ಮನಸ್ಸಿನಲ್ಲಿ ಸರಿದು ಹೋಯಿತು.

ಹಸಿವಿನಿಂದ ಬಳಲುತ್ತಿದ್ದ ನಾನು ಪ್ಯಾಕೆಟನ್ನ ಒಡೆದು ಒಂದೊಂದೇ ಬ್ರೆಡ್ ನ್ನ ತೆಗೆದು ತೆಗೆದು ಬಾಯಿಗಿಡುತ್ತ  ರೂಮನ್ನ ಸೇರಿದೆ. ಬ್ರೆಡ್ಡು ಹೊಟ್ಟೆಗೆ ಸೇರಿ ಎರಡು ಲೋಟ ನೀರು ಕುಡಿದಮೇಲೆ  ಉದರದ ಮದ್ಯದಲ್ಲಿಂದ ಹೊರಟು ಗಂಟಲಮೂಲಕ ಸಣ್ಣ ತೇಗು ಹೊರಬಂತು.

ಹೀಗೆ ಒಂದು ದಿನ ಶಾನುಭೋಗರ ಅಂಗಡಿಗೆ ಹೋದಾಗ ಶಾನುಭೋಗರ ಮಗ  ಅವರ ಕಾಯಂ ಗಿರಾಕಿಗಳಲ್ಲಿ ಮಾತಾಡುತ್ತ ಇದ್ದರು. 

ಬರಿ ಕೈಯಲ್ಲಿ ಬಂದವರು  ನಾವು ಇಷ್ಟೆಲ್ಲಾ ಆಗುತ್ತದೆ ಅಂತ ಎಣಿಸಿರಲಿಲ್ಲ.
ಬರಿ ಅಂಗಡಿ ಇಟ್ಟುಕೊಂಡು ಊಟ ಮಾಡಿಕೊಂಡು ಹೋಗುವದೇ ಕಷ್ಟ ಈ ಕಾಲದಲ್ಲಿ. ಅದಾಗಿಯೂ ಅದೇನೋ ಒಂದಕೊಂದು ದೇವರು ನಡೆಸಿಕೊಟ್ಟ  ಇಲ್ಲೇ ಪಕ್ಕದಲ್ಲಿ ಒಂದು ಅರ್ಧ ಎಕರೆ ಜಾಗ ತೆಗೆದುಕೊಂಡೆ ರಾಯರೇ ...
ಅದೇನು ಅದ್ರಷ್ಟವೋ ಏನೋ ನಮಗೆ ಅಂಗಡಿ ಬಾಡಿಗೆ ಕೊಟ್ಟ ಯಜಮಾನರು ನಮಗೆ ದೂರದ ಸಂಬದಿಯೂ ಹೌದು.
ಅವ್ರಿಗೆ ಒಬ್ಬಳೇ ಮಗಳು ಹೀಗೆ ಅದು ಇದು ಮಾತುಕಥೆಯಾಗಿ ನನಗೆ ಹೆಣ್ಣನ್ನು ಕೊಟ್ಟು ಮನೆ ಅಳಿಯನ್ನ ಮಾಡಿಕೊಳ್ಳೋಕೆ  ತಿರ್ಮಾನಿಸಿ ಮುಂದಿನ ತಿಂಗಳ ಶ್ರಾವಣಕ್ಕೆ ಮದ್ವೆ  ನಿಶ್ಚಯ ಆಗಿದೆ. ತಪ್ಪದೆ ಬರಬೇಕು. ನಿಮ್ಮ ಮನೆಗೇ ಬಂದು ಕರೆಯುತ್ತೇನೆ.
ಅಂಗಡಿಯಲ್ಲೇ ಮದುವೆ  ಕರ್ಯೋದನ್ನ ಮುಗಿಸಿದ ಕೊಂಕಣಿ ಅನ್ಕೋಬೇಡಿ.
ಅಂತ ಮಾತು ಮುಗಿಸಿದ.

ನನ್ನ ತಲೆಯಲ್ಲಿ ಅದೇನೇನೋ ಆಲೋಚನೆಗಳು ಸುಳಿಯ ತೊಡಗಿತು. ನಾ ಕೊಟ್ಟ ಇಪ್ಪತ್ತು ಪೈಸೆಯ ಪ್ರಭಾವ ಇದಾಗಿರಬಹುದೇ ಅನ್ನುವದು ಯೋಚನೆಯಾಗಿತ್ತು. ಛೆ ಆ ಇಪ್ಪತ್ತು ಪೈಸೆ ಕೊಡಬಾರದಿತ್ತು ಎಂಬ ಆಲೋಚನೆ ನನ್ನ ತಲೆಯಲ್ಲಿ ಸುಳಿದು ಹೋಯ್ತು
.
ತಟ್ಟನೆ ನನ್ನತ್ತ ತಿರುಗಿದ  ಮರಿಶಾನುಭೋಗ

ಏನು ಕೊಡಲಿ ಬಹಳ ಹೊತ್ತು ಆಯ್ತು ನೀವು ನಿಂತು ಕ್ಷಮಿಸಿ ಅಂದರು 

ಬ್ರೆ.. ಬ್ರೆ... ಬ್ರೆಡ್...  ಪ್ಯಾಕೆಟ್ ಕೊಡಿ ಒಂದು ಅಂತ ಒಂದು ರುಪಾಯಿಯ ನಾಣ್ಯವನ್ನ ಅವರ ಕೈಯಲ್ಲಿಟ್ಟೆ.








Wednesday, August 1, 2012

ಕಬ್ಬು ಕರಗುವ ಸಮಯ














ಹದವಾದ ಮಣ್ಣು ಗೊಬ್ಬರ
ನೀರು, ಗಾಳಿ,ಅಷ್ಟೇಕೆ ಬೆಳೆದವನ ಆರೈಕೆ
ಸೊಕ್ಕಿನಿಂದ ಬೆಳೆದು ನಿಂತ ಕಬ್ಬು ನಾನು
ಕೊಬ್ಬು ಅಂದಿರಿ ಜೋಕೆ .....!
ಕೊಬ್ಬಿದ್ದರೆ ಪ್ರತಿಭಟಿಸದೆ ಗಾಣಕ್ಕೆ ತಲೆಬಾಗುತ್ತಿದ್ದನೇ ?
ಹಿಂಡಿ ಹಿಂಡಿ ಹಿಂಸಿಸಿದರೂ ಸಹಿಸುತ್ತಿದ್ದನೇ
ಮಾನ ಮುಚ್ಚಿತ್ತು ರಂಬೆಗಳ ವಸ್ತ್ರ
ಗಟ್ಟಿ ಕವಚ ಹೊರಗೆ ರಕ್ಷಣೆಗೆ
ಅದೆಲ್ಲೆತ್ತೋ ಹರಿತಾದ ಕತ್ತಿ ಒರಸೆ
ಸವರಿಬಿಟ್ಟಿತಲ್ಲ ರಂಬೆಯನ್ನ
ಒಂದು ನಿಮಿಷದ ಬೆತ್ತಲೆ
ಬೆತ್ತಲ ಕಬ್ಬಿನ ಜಲ್ಲೆ ನಾನು 
ಗಾಣಕ್ಕೆ ತಲೆ ಬಾಗುವ ಸಮಯ
ಗಾಣದ ಚಕ್ರಗಳು ತಿರುಗುತ್ತಿವೆ ಸೆಳೆಯುತ್ತದೆ 
ನಿದಾನಕ್ಕೆ ಒಂದೇ ತರಹದ ವೇಗ
ನಾನು ಅಣಿಯಾಗಬೇಕು
ತೆರೆದಿರುವ ಬಾಹುಗಳಲ್ಲಿ ಒಳಸರಿಯಬೇಕು
ನೆಪಕ್ಕೆ ಮುಂದೂಡಿದಂತೆ
ಗಾಣವೇ ತಿರುಗಿ ತಿರುಗಿ ಒಳ ಎಳೆದು ಕೊಳ್ಳುತ್ತದೆ
ನಿಧಾನ ಹಿಂಡುತ್ತದೆ ಅವಸರವಿಲ್ಲ ಅದೇ ವೇಗ
ಒಳಗಿರುವ ರಸಕ್ಕೆ ಹೊರಬರುವ ಆತುರ
ಒಂದು ನಿಮಿಷದ ಬಿಗಿ ಹಿಡಿತ
ಹಿಂಡಿ ಹಿಂಡಿ ನನ್ನ ಹಿಪ್ಪೆಯಾಗಿಸುತ್ತದೆ 
ಕೊನೆಗೂ ರಸಭಾವ ಸಹಕಾರ ಗೊಂಡಿತು
 ರಸ ತೆಗೆದ ಮೇಲೆ ಸಿಪ್ಪೆ ಆದೆನಾ ...?
ರಸ ಕರಗಿ ಹಿಂಡಿ ಹಿಪ್ಪೆಯಾದ ಮೇಲೆ
ಕಸವಾಗುತ್ತೇನಾ ?
ಗೊತ್ತಿಲ್ಲ ಆದರೆ ಹಗುರವಂತೂ ಆಗುತ್ತೇನೆ.

Thursday, July 26, 2012

ಜಗತ್ತೇ ಇಷ್ಟು ಚೌಕಟ್ಟು



ಅದೋ ಅಲ್ಲಿ ಕಣ್ಣಿಗೆ ನಿಲುಕುವಷ್ಟೇ ದೂರ
ಅದರಾಚೆ ಏನಿದೆಯೋ ಬಲ್ಲವರು ಯಾರ
ಅದೆಷ್ಟು ಅಗಾದ ವಿಸ್ತಾರ ನೀಳ ಆಳ
ಬೊಗಸೆಯಲ್ಲಿ ಹಿಡಿದರೆ  ಮಾತ್ರ ಪರಿಧಿ
ಅನಂತಕ್ಕೆ ವ್ಯಾಪ್ತಿಯ ಚೌಕಟ್ಟು
ಹಿಗ್ಗಬಹುದು ಕುಗ್ಗಲೂ ಬಹುದು
ಗೆಲುವಿನ ಉತ್ಸಾಹದಲ್ಲಿ
ಜಗತ್ತನ್ನೇ ಹಿಡಿದಿದ್ದೇನೆ ಎಂಬ ಸಂಬ್ರಮದಲ್ಲಿ
ಬ್ರಮೆ ಕಳೆದಮೇಲೆ ಗೊತ್ತಾದೀತು
ಹಿಡಿದದ್ದು ಬೊಗಸೆ ನೀರು
ಆದರೆ ಪೊರೆ ಕಳಚದೆ ಇದ್ದರೆ
ಕಣ್ಣು ತೆರೆಯದಿದ್ದರೆ
ಶರಧಿಯೇ ಇಷ್ಟು ನಮ್ಮ ಬೊಗಸೆ ಇದ್ದಷ್ಟು
ಜಗತ್ತೇ ಇಷ್ಟು ಮುಷ್ಠಿಯಲ್ಲಿ ಕಟ್ಟುವಷ್ಟು

 
ಚಿತ್ರ ಕೃಪೆ – ದೀಪಕ್ ಭಟ್ 
http://chayachitragalu.blogspot.in