Friday, April 29, 2011

ಗೆಳೆಯ ಅಡುಗೆಮನೆಗೆ ವಿದಾಯ ಹೇಳಿದ ಕ್ಷಣ

ಜೋಡಿಹಕ್ಕಿಗಳಿಗೆ ಶುಭಾಶಯ
ನಿನ್ನೆ ಗೆಳೆಯ ಉದಯ ಅಡುಗೆ ಮನೆಗೆ ವಿದಾಯ ಹೇಳಿದ ದಿನ. ಇದೇನಪ್ಪಾ ಎಂದು ನಿಮ್ಮ ಮನಸ್ಸಿನಲ್ಲಿ ಸಾವಿರಾರು ಯೋಚನೆಗಳು ಸುಳಿಯುತ್ತಿರಬಹುದು. ಹೇಳ್ತೇನೆ ಸ್ವಲ್ಪ ತಾಳಿ. ನಾನು ನಿನ್ನೆ ಸ್ವಲ್ಪ ಮುಂಚಿತವಾಗಿ ಮನೆಗೆ ಹೋಗಿದ್ದೆ. ಅದಕ್ಕೆ ಸಾವಿರಾರು ಕಾರಣಗಳಿದ್ದವು.ಮುಖ್ಯ ಕಾರಣ ಅಂದ್ರೆ ನಮ್ಮ ಉದಯ ಅಡುಗೆ ಮಾಡುವದು ಇವತ್ತು ಕೊನೆಯ ದಿನ.ವ್ರತ ಉದ್ಯಾಪನೆ ಮತ್ತು ಸಮಾಪ್ತಿ ಮಾಡ್ತಾರಲ್ಲ ಇದು ಕೂಡ ಒಂತರ ವ್ರತ ಸಮಾಪ್ತಿಯ ಹಾಗೆ .ನೀವು ಗವಾಸ್ಕರ್ ಕ್ರಿಕೆಟ್ ಆಟಕ್ಕೆ ವಿದಾಯ ಹೇಳುವದನ್ನ ಕಂಡವರು.ಮೊನ್ನೆ ಮೊನ್ನೆ ಕೆಚ್ಚೆದೆಯ ಬಂಗಾಳದ ಹುಲಿ ಗಂಗೂಲಿ ಅವಕಾಶ ಸಿಗದೆ ವಿದಾಯವನ್ನ ಹೇಳಿದ್ದನ್ನ ನಾನು ಕಣ್ಣಂಚಿನ ನೀರ ಒರೆಸಿಕೊಳ್ಳುತ್ತ ನೋಡಿದವನು.ಅವನ ಕೆಚ್ಚೆದೆಯ ಆಟವಿದೆಯಲ್ಲ ಅದನ್ನ ಅವನು ವಿದಾಯ ಹೇಳಿದ ದಿನವಿಡೀ ನೆನೆದು ಕೊರಗಿದವನು.ಮುಂದೊಂದಿನ ನಮ್ಮ ಜಗದ್ವಿಖ್ಯಾತ ತೆಂಡುಲ್ಕರ್ ವಿದಾಯ ಹೇಳುವದನ್ನ ಜಗತ್ತಿನ ಅನೇಕ ಕ್ರೀಡಾಭಿಮಾನಿಗಳು ಭಾರವಾದ ಹೃದಯದಿಂದ ನೋಡಬಹುದು.ನಮ್ಮ ಹೃದಯದ ಭಾವ ನೀರಾಗಿ ಹರಿಯಬಹುದು.ಮತ್ತೊಂದಿನ ನಮ್ಮ ದ್ಯಾವೆಗೌಡರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುತ್ತಾರೆನ್ನುವ ಸುದ್ಧಿ ಮಾಧ್ಯಮದಲ್ಲಿ ಬಿಸಿ ಬಿಸಿ ಚರ್ಚೆಯಾಗಿ, ದಡಕ್ಕನೆ ಪತ್ರಿಕಾಗೋಷ್ಠಿ ಕರೆವ ನಮ್ಮ ಗೌಡರು ನಿವೃತ್ತಿಯ ವಿಷಯ ಸುಳ್ಳು ಸುದ್ಧಿ ಎಂದು ಮಣ್ಣಿನಿಂದ ಈಗತಾನೆ ಎದ್ದುಬಂದ ಪೋಸ್ ಕೊಡಬಹುದು.ಮರುದಿವಸ ಪತ್ರಿಕೆಯಲ್ಲಿ ಕರ್ನಾಟಕದ ಏಳಿಗೆಗಾಗಿ ನಿರ್ಧಾರ ಬದಲಿಸಿದ ಗೌಡರು ಅಂತ ಬರೆಯಬಹುದೇನೋ.ಇದನ್ನೆಲ್ಲ ನೋಡಿದ ನಮ್ಮ ಕರ್ನಾಟಕದ ಜನರ ಮನದಲ್ಲಿ ಅನುಕಂಪ ಅಲೆಯೆದ್ದುಬಿಡಬಹುದು.ಅದೇನೆ ಇರಲಿ ಆದರೆ ನಮ್ಮ ಉದಯ ಅಡುಗೆ ಮನೆಗೆ ವಿದಾಯ ಹೇಳುತ್ತಿರುವದರಿಂದ ನನ್ನ ಮನಸ್ಸು ಕೂಡ ಯಾವುದೋ ಕಳೆದುಹೋದ ನೆನಪನ್ನ ಮತ್ತೆ ನೆನೆದು ಸ್ವಲ್ಪ ಭಾವುಕ ಆದದ್ದಂತು ನಿಜ. ಆದರೂ ಉದಯ ಪಾಕಶಾಲೆಗೆ ವಿದಾಯ ಹೇಳಿದ್ದು ನನಗೆ ಭರಿಸಲಾರದ ಸಂತೋಷವೂ ಕೂಡ ಆಗಿದೆ. ಮತ್ತೆಲ್ಲಿ ಆ ಉಪ್ಪುಹಾಕಲು ಮರೆತು ಹೋದ ಸಾರು....! ಮತ್ಯಾವಾಗ ಊಟಮಾಡುವದು ಕರಗಿದ ಅನ್ನ. ಮತ್ತೆಲ್ಲಿ ಹುಡುಕಿ ತಿನ್ನಲಿ ಪುಳಿಯೊಗರೆ.ಮತ್ತೆ ನೆನಪಾಗುತ್ತದೆ ಅವನು ಮಾಡುವ ನಂಜಳ್ಳೆಯಂತಹ ಮ್ಯಾಗಿ.ಈಗಲೂ ಬಾಯಲ್ಲಿ ನೀರು ಬರುತ್ತಾ ಇದೆ ಅವನು ಮಾಡುವ ಆ ತೊಗರಿಬೇಳೆ ಸಾರು ಮತ್ತು ಅದಕ್ಕೆ ಚೊಂಯ್ಯನೆ ಕೊಡುವ ಪಕ್ಕದಮನೆಯ ಆಂಟಿಯ ಕಿವಿಗೆ ರಾಚುವಷ್ಟು ಶಬ್ಧಮಾಡಿ ಸಾರಿನಲ್ಲಿ ಲೀನವಾಗುವ ಆ ಬೆಳ್ಳುಳ್ಳಿ ಒಗ್ಗರಣೆ. ಆಹಾ.....! ಒಂದೇ, ಎರಡೆ, ಮೂರು ಅನ್ನಲಿಕ್ಕೆ ಆಗದು. ಮಾಡುವ ಅಡುಗೆಯ ರುಚಿ ನೀವು ಸವಿಯಬೇಕಿತ್ತು, ನೀವು ಸಹ ಇವತ್ತಿನ ಅಡುಗೆಮನೆ ವಿದಾಯ ಕಾರ್ಯಕ್ರಮದಲ್ಲಿ ಕಣ್ಣೀರಿನ ಕೋಡಿಯನ್ನೇ ಹರಿಸುತ್ತಿದ್ದಿರಿ.

ಇಷ್ಟೆಲ್ಲ ಕಥೆ, ಒಂದಕ್ಕೊಂದು ಏನು ಸಂಬಂಧ ಅಂತೀರ..? ಹೌದು ಸ್ವಾಮಿ ನನ್ನ ಪ್ರಾಣ ಮಿತ್ರನ ವಿವಾಹ. ಕೊರಳ ಗೆಳೆಯನಿಗೆ ಮದುವೆ. ತತ್ಸಂಬಂದವಾಗಿ ನಿನ್ನೆ ಅವನು ಮಾಡುವ ಅಡುಗೆ ಕೊನೆಯ ದಿನ.ಸಾರಿಗೆ ಒಗ್ಗರಣೆ ಹಾಕುತ್ತಿರುವವನ ಹತ್ತಿರ ಬಂದು ಕೇಳಿದೆ "ಅಣ್ಣಾ ಇವತ್ತು ಯಂತಾ ವಿಶೇಷವೋ ಮರಾಯ". "ಇವತ್ತು ನೀನು ಅಡುಗೆ ಮನೆಗೆ ವಿದಾಯ ಹೇಳುದಿನ ಅಲ್ದನ" ನಗುತ್ತಲೇ ತಲೆಯಾಡಿಸಿದ ಆತ "ಯಾರಿಗೆ ಗೊತ್ತು ಮಹರಾಯ ನಾಳೆ ಹೆಂಡತಿಬಂದಮೇಲೆ ನನ್ನನ್ನೇ ಅಡುಗೆ ಮನೆ ಕೆಲ್ಸಕ್ಕೆ ಹಚ್ಚಲಕ್ಕಲ.ಕಾಲ ಬದಲಾಗಿದೆ ಎಲ್ಲವೂ ಉಲ್ಟಾ ಆಯ್ದು ಅಂದ, ಅಡುಗೆಮನೆಯಲ್ಲಿ ಪಾತ್ರದ ಶಬ್ಧದ ಜೊತೆಗೆ ನಮ್ಮ ನಗುವೂ ವ್ಯಾಪಿಸಿತು.

ನನ್ನನ್ನ ಬ್ಲಾಗ್ ಲೋಕಕ್ಕೆ ಕರೆತಂದ ನನ್ನ ಮಿತ್ರ ಕೆಲವುವಿಷಯಗಳಲ್ಲಿ ಗುರುವೂ ಹೌದು, ವೃತ್ತಿಯಲ್ಲಿ ಚಾರ್ಟೆಡ್ ಅಕೊಂಟೆಂಟ್. ಪ್ರವೃತ್ತಿಯಾಗಿ ಅದ್ಭುತವಾಗಿ ತಬಲಾವನ್ನ ನುಡಿಸಬಲ್ಲ. ಅನೇಕ ಸಂಗೀತ ಕಛೇರಿಗಳಲ್ಲಿ ತನ್ನ ಕೈ ಚಳಕವನ್ನ ತೋರಿದವನು. ಅಪರೂಪಕ್ಕೆ ಚಂದದ ಲೇಖನವನ್ನ ಮತ್ತೆ ಕವಿತೆಯನ್ನ ಬರೆಯುತ್ತಾನೆ.( http://reachudayg.blogspot.com/ ) ನಮಗೆ ಹಿಂದುಸ್ಥಾನಿ ಸಂಗೀತ ಕೇಳುವ ಹುಚ್ಚು.ರಾತ್ರಿ ಒಂದುಘಂಟೆಯ ತನಕ ನಾವು ಸಂಗೀತ ಕೇಳಿದ ಬಹಳ ದಿನಗಳುಂಟು.ಬ್ಯಾಚುಲರ್ ಸಂಸಾರದವರಾದ ನಾವು ಪಕ್ಕದಮನೆಯವರಿಗೆ ರಾತ್ರಿಯಿಡೀ ಸಂಗೀತ ಕೇಳಿಸಿದ್ದೇವೆ. ನಾವೇ ಕಟ್ಟಿಕೊಂಡು ಹಾಡುವ ಅಪಪೋಲಿ ಹಾಡು ಕಿಡಕಿಯ ಮೂಲಕ ಪಕ್ಕದಮನೆಯ ಆಂಟಿಯ ಕರ್ಣಪಟಲವನ್ನ ತಾಕಿದೆ. ಎಷ್ಟೊ ಪೊಲಿ ಪೋಲಿ ಜೋಕುಗಳನ್ನ ವಿನಿಮಯ ಮಾಡಿಕೊಂಡಿದ್ದೇವೆ.ಅದೆಷ್ಟೋದಿನ ಅದ್ಯಾವುದಾವುದೋ ಹುಡುಗಿಯರಬಗ್ಗೆ ನಮ್ಮದೇ ಆದ ಬ್ಯಾಚುಲರ್ ವಾದವನ್ನ ಮಂಡಿಸಿದ್ದೇವೆ.ಪೂರಾ ಕೊಳಕು ಚಿತ್ರಗಳನ್ನ ಕಂಪ್ಯೂಟರ್ ಪರದೆಯಮೇಲೆ ನೋಡಿ ಬಾಯಿತುಂಬಾ ನಕ್ಕಿದ್ದೇವೆ. ದಾರಿ ಬದಿಯಲ್ಲಿ ನಡೆದು ಹೋಗುವ ಹುಡುಗಿಯರನ್ನ ಗುರಾಯಿಸಿ ನೋಡಿದ್ದೇವೆ. ಏಷ್ಟೊ ವಿಚಾರಗಳಬಗ್ಗೆ ತಾಸುಗಟ್ಟಲೆ ಮಾತಾಡಿದ್ದೇವೆ.ಹರಟಿದ್ದೇವೆ, ಮದುವೆ ಅದಮೇಲೆ ಇಂತಹ ಕೆಲವೊಂದು ಆಚರಣೆಗಳಿಗೆ ಅಡ್ಡಿ ಆದರೂ ಸ್ನೇಹಕ್ಕೆ ಕೊರತೆಯಾಗದು.ನಾನು ಕಳುಹಿಸುವ ವಯಸ್ಕರು ಮಾತ್ರ ನೋಡುವಂತಹ ಮೆಸೇಜ್ ನ್ನ ಇನ್ನುಮುಂದೆ ಅವನಿಗೆ ಕಳುಹಿಸುವಂತಿಲ್ಲ. ಮೊಬೈಲ್ ಗೆಳೆಯನ ಕೈಯ್ಯಲ್ಲೇ ಇದ್ದರೆ ಆಯಿತು. ಅಪ್ಪಿತಪ್ಪಿ ನಮ್ಮ ಅತ್ತಿಗೆಯ ಕೈಗೆನಾದರು ಸಿಕ್ಕಿದರೆ ನನ್ನ ಮಾನ ಹರಾಜಾಗುವದಂತು ಖಂಡಿತ.ಇನ್ನು ಹೇಳಹೊರಟರೆ ಮುಗಿಯದ ಕಥೆಯಾದೀತು.

ಒಲುಮೆಯೊ೦ದು ದಿವ್ಯಮ೦ತ್ರ
ಚಿತ್ರಕೃಪೆ ಗಣಪತಿ ಹೆಗ್ಡೆ ಕಲಾವಿದ

ಒಲುಮೆಯೊ೦ದು ದಿವ್ಯಮ೦ತ್ರ ಇಹಸಮಸ್ಯೆಗೆ
ಮದುವೆಯೊ೦ದು ದಿವ್ಯಬಂಧ ಗೃಹತಪಸ್ಯೆಗೆ
ರಸಋಷಿಗಳ ಮಾತಿನಲಿ ಅತಿಶಯವಿಲ್ಲ
ಒಲುಮೆ ಚಿಲುಮೆ ಟಿಸಿಲೊಡೆಯಲು ಅನುಪಮವೆಲ್ಲ

ಮದುವೆ ಎ೦ಬ ಮೂರಕ್ಷರದಲಿ ಎನಿತು ಬೆರಗಿದೆ
ನೋವುನಲಿವು ಸಮರಸದಲಿ ಇಲ್ಲಿ ಅಡಕವಿದೆ
ಬಾಳಿನ ಏಣಿಯಲಿ ನೀನು ಏರುತಿರುವೆ ಮೆಟ್ಟಿಲು
ವರುಷದೊಳಗೆ ಕಟ್ಟಿಬಿಡು ಮನೆಯಲೊ೦ದು ತೊಟ್ಟಿಲು

                ( ಅನಾಮಿಕ ಕವಿ )

4 comments:

  1. ನಿಮ್ಮ ಗೆಳೆಯ ಉದಯರಿಗೆ ನನ್ನದೂ ಶುಭಾಶಯಗಳು. ಮದುವೆಯ ನಂತರವೂ ಅವರು ತಮ್ಮ ಅಡುಗೆಯನ್ನು ತಮ್ಮ ಬಾಳಗೆಳತಿ ಸೇರಿದಂತೆ ಎಲ್ಲರಿಗೂ ಉಣಬದಿಸಲಿ ಎಂದು ಹಾರೈಸುತ್ತೇನೆ.

    ReplyDelete
  2. mr. bhat wish your friend all the success. lastsunday eventhough we are in sme bldg but unable to meet one another. been reading your blog the writeup is good.

    ReplyDelete
  3. ನಿಮ್ಮ ಗೆಳೆಯ ಉದಯ್‍ರವರಿಗೆ ನನ್ನ ಶುಭಾಶಯಗಳು. ಮುಂಚೆ ನಾವು "student life is golden life" ಎನ್ನುತ್ತಿದ್ದೆವು ಈಗ " Bachelor life is golden life" ಎನ್ನುತ್ತಿದ್ದೇವೆ ಅದು ಎಲ್ಲಿಯವರಗೆ ಸಾಗುವುದೋ ನೋಡಬೇಕು. ನೀವು ನಿಮ್ಮ ಗೆಳೆಯನೊಂದಿಗೆ ಕಳೆದ ದಿನಗಳ ನೆನಪನ್ನು ಹಂಚಿಕೊಂಡ ರೀತಿ ಚೆನ್ನಾಗಿದೆ! Sourav Ganguly ಬಗ್ಗೆ ಅಷ್ಟೋಂದು ಅಭಿಮಾನವೇ?

    ReplyDelete
  4. nivu subhaashaya heLida pari tumbaa chennaagide bhattare....

    namma kaDeyindalu nimma geLeyanige subhaashaya...

    ReplyDelete