ಯಕ್ಷಗಾನ ಅದೊಂದು ಅದ್ಭುತ ಕಲೆ ಇಲ್ಲಿ ನಾಟ್ಯ, ನೃತ್ಯ, ಮಾತುಗಾರಿಕೆ, ವೇಶಭೂಷಣ, ಸಂಗೀತ, ವಾಧ್ಯಸಂಗೀತ, ತಾಳ, ರಂಗ ಚೌಕಟ್ಟು, ಮುಖ ವರ್ಣಿಕೆ, ಸಾಹಿತ್ಯ ಏನೇನು ಇದೆ ಅಂತ ಪಟ್ಟಿಮಾಡಿ ಹೇಳುವದಕ್ಕಿಂತ ಎಲ್ಲವೂ ಇದೆ ಅಂತ ಒಂದೇ ಮಾತಿನಲ್ಲಿ ಮುಗಿಸಿದರೆ ಸಮಂಜಸವಾದೀತು. ಕೆಲವು ಹಿಂದುಸ್ಥಾನಿ ಸಂಗೀತ,ಮತ್ತು ಕೆಲವು ಕರ್ನಾಟಕೀಯ ಸಂಗೀತದಿಂದ ಪ್ರಭಾವಿತವಾದ ಹಾಡುಗಳಾದರೂ,ಯಕ್ಷಗಾನದ ರಾಗ ಮತ್ತು ತಾಳ ಬೇರೆ ಬೇರೆ, ಗೆಳೆಯನ ಮಾತು ಹೀಗೆ ಮುಂದುವರೆಯುತ್ತದೆ.........

ಬುಸು ಬುಸು ಉಸಿರು. .....ನಾನು ಮಂದುವರಿಸಿದೆ ...... ಹೇ ....! ಅದು ಹೌದು. ಆದ್ರೂವಾ.... ಯಕ್ಷಗಾನದಲ್ಲಿ ರಾಮಾಯಣ, ಮಹಾಭಾರತ ಮತ್ತೆ ಪುರಾಣ ಕಥೆಗಳನ್ನ ಬುಡ್ದಿಂದ ತಲೆವರೆಗೆ ಅದ್ರಲ್ಲಿ ಹ್ಯಾಂಗಿದ್ದೋ ಹಾಂಗೆ ಆಟ ಆಡ್ತ್ವಿಲ್ಲೆ. ಅಲ್ಲಲ್ಲಿ ಕೆಲವು ಇಂಟರೆಷ್ಟಿಂಗ್ ಭಾಗ ತಗಂಡು ಬೇಕಾದ ಭಾಗ ಅಯ್ಕೆ ಮಾಡ್ಕಂಡು ಯಕ್ಷಗಾನ ತೋರಸ್ತೊ. ಅದು ಪೂರ್ತಿ ಆಗ್ತಿಲ್ಲೆ. ಅದ್ಕಾಗಿ ವೆಂಕಟೇಶನಿಗೆ ಪಾಪ ಪುರಾಣ ಮಹಾಭಾರತ, ರಾಮಾಯಣದ ಪೂರ್ತಿ ಕಥೆ ಗೊತ್ತೇ ಇಲ್ಲೆ. ಅವ ರಾಮಾಯಣ ಮಹಾಭಾರತ ಪುರಾಣ ಅಂದ್ರೆ ಯಕ್ಷಗಾನದಲ್ಲಿ ಬಪ್ಪಷ್ಟೇಯಾ ಹೇಳಿ ಮಾಡ್ಕಂಡಿದ್ದಾ. ಇನ್ನೂ ಎಷ್ಟೆಷ್ಟೋ ಕಥೆ ಇದ್ದು. ಅದರ ಪೂರ್ತಿಯಾಗಿ ಓದಿದ್ರೆ ಸಿಕ್ಕು ಸಾರಾಂಶವೇ ಬೇರೆ.
ಇನ್ನೂ ಒಂದು .... ನಮ್ಮಲ್ಲಿ ವಾಲಿ ಸುಗ್ರೀವ ಆಟ ಆಡ್ತಿದ್ದ ಅಂತಿಟ್ಕಾ. ಅಲ್ಲಿ ವಾಲಿ ಮಾಡಿದವ ಮಾತಿನಲ್ಲಿ ಜೋರಿದ್ದರೆ ಅಥವಾ ನುರಿತ ಅರ್ಥಧಾರಿ ಅಗಿದ್ದರೆ ವಾಲಿಯದು ತಪ್ಪೇ ಇಲ್ಲೆ, ರಾಮಂದೇ ತಪ್ಪು ಅನ್ನುವಹಾಗೆ ಮಾತಾಡ್ತ. ಅವಾಗ ವಾಲಿಯ ಧ್ಯೇಯ ಸರಿ ರಾಮಂದು ತಪ್ಪು ಅಂತ ವೆಂಕಟೇಶನ ತಲೆಯಲ್ಲಿ ನಿರ್ಧಾರ ಆಗ್ತು. ಅವ ಮತ್ತೆ ಅದೇ ವಾಲಿಸುಗ್ರೀವ ಕಾಳಗವನ್ನ ಮತ್ತೊಮ್ಮೆ ನೋಡಿದಾ ಅಂತಾದರೆ. ಇಂದು ರಾಮನ ಪಾತ್ರ ಮಾಡಿದವ ಗಟ್ಟಿ ಅರ್ಥಧಾರಿ ಆಗಿದ್ರೆ ರಾಮಂದು ತಪ್ಪಿಲ್ಲೆ ವಾಲಿದೇ ತಪ್ಪು ಹೇಳಿ ವೆಂಕಟೆಶನ ತಲೆಯಲ್ಲಿ ಗೊಂದಲ ಉಂಟಾಗ್ತು. ಇನ್ನೂ ಒಂದು ಮಾತು ಎಂತದು ಅಂದ್ರೆ ಕೆಲವು ಯಕ್ಷಗಾನದಲ್ಲಿ ಇದ್ದ ಕಥೆಗೂ ಮತ್ತು ಮೂಲಕಥೆಗೂ ವ್ಯತ್ಯಾಸ ಇದ್ದು. ಆಗ ಯಕ್ಷಗಾನದಿಂದ ಪುರಾಣ ರಾಮಾಯಣ ಮಹಾಭಾರತದ ಸ್ಪಷ್ಟ ಸಂದೇಶ ಸಾಮಾನ್ಯ ಜನಕ್ಕೆ ತಲ್ಪ್ತಿಲ್ಲೆ.
ಮಾತನ್ನ ತುಂಡರಿಸಿ ಗೆಳೆಯನ ಮಾತು ಆರಂಭವಾಯಿತು..... ಹೇ ಹಾಗೇನಿಲ್ಲ ಮಹಾರಾಯ, ಅನಕ್ಷರಸ್ಥರಿಗೆ ಮತ್ತೆ ಸಾಮಾನ್ಯ ಜನಕ್ಕೆ ಈಗಿನ ಕಾಲದಲ್ಲಿ ನಮ್ಮ ಪುರಾಣ, ರಾಮಾಯಣ, ಮಹಾಭಾರತ ಕಥೆ ಕೆಲವೊಂದಿಷ್ಟಾದರೂ ಯಕ್ಷಗಾನದ ಮೂಲಕ ತಲಪ್ತಾ ಇದ್ದು. ಈಗಿನ ಎಲೆಕ್ಟ್ರಾನಿಕ್ ಮಾಧ್ಯಮ, ಸಿನಿಮಾ, ದಾರಾವಾಹಿಗಳು ಈ ಕೆಲ್ಸ ಮಾಡ್ತಾ ಇಲ್ಲೆ. ಇನ್ನು ಭಾಷಾ ವಿಷಯಕ್ಕೆ ಬಂದರೆ ಯಾವುದೇ ಸಿನಿಮಾ ನೋಡು, ನೂರು ಮಾತಲ್ಲಿ ಶೇಕಡಾ 60 ಇಂಗ್ಲಿಷ್ ಮಾತುಗಳು. ಕನ್ನಡ ಭಾಷೆ ನಿಧಾನಕ್ಕೆ ಇಂಗ್ಲಿಷ್ನೊಟ್ಟಿಗೆ ಬೆರ್ತು ತನ್ನ ತನವನ್ನ ಕಳೆದುಕೊಳ್ತಾ ಇದ್ದು. ಮತ್ತೆ ಕೆಲವು ಕನ್ನಡ ಶಬ್ಧಗಳ ಪರ್ಯಾಯ ಶಬ್ಧವಾಗಿ ಇಂಗ್ಲಿಷನ್ನ ಕನ್ನಡ ಭಾಷೆಗೆ ಒತ್ತಾಯ ಪೂರ್ವಕ ಸೇರ್ಸಿಕಿದ. ಇನ್ನೊಂದು ಸ್ವಲ್ಪ ವರ್ಷ ಹೋದರೆ ಕರ್ನಾಟಕದಲ್ಲಿ ಬಿಡುಗಡೆ ಆಪ ಸಿನಿಮಾ ದಾರಾವಾಹಿ ಮಧ್ಯೆ ಅಲ್ಲಲ್ಲಿ ಒಂದೂಂದು ಕನ್ನಡ ಪದ ಇರ್ತು. ಸಂಭಾಷಣೆ ಹಾಳಾಗ್ಲಿ. ಇಗೀಗ ಬಪ್ಪ ಚಿತ್ರಗೀತೆ ನೋಡು ಅದ್ರಲ್ಲಿ ಕನ್ನಡ ಪದವನ್ನ ಭೂತ ಕನ್ನಡಿ ಹಿಡ್ಕಂಡು ಹುಡ್ಕ ಪರಿಸ್ಥಿತಿ ಬಂದು. ಆದರೆ ಅಂದಿನ ಕಾಲದಿಂದ ಇಂದಿನ ಕಾಲದವರೆಗೆ ಇಂಗ್ಲಿಷನ್ನ ಬದಿಗಿಟ್ಟು ಕನ್ನಡಭಾಷೆ ಒಂದನ್ನೇ ಬಳಸುತ್ತಾ ಇರುವಂತ ಕಲೆ ಯಕ್ಷಗಾನ ಮಾತ್ರ. ಅದು ಕನ್ನಡ ಭಾಷಾಬೆಳವಣಿಗೆಗೆ ತನ್ನದೇ ಆದ ಕೊಡುಗೆ ಕೊಡ್ತಾ ಇದ್ದು ಮಹಾರಾಯ ಅಂತ ವಿನಯನ ಮಾತು ನಿಂತಿತು.......
ಅಷ್ಟು ಹೊತ್ತಿಗೆ ಕೈಗಡಿಯಾರ ರಾತ್ರಿ ಹನ್ನೊಂದು ಘಂಟೆ ತೋರಿಸ್ತಾ ಇತ್ತು. ಕೈಯಲ್ಲಿ ಎರಡೆರಡು ಕರೆಂಟ್ ಬ್ಯಾಟ್ರಿ. ಒಂದು ದೊಡ್ಡ ಘಟ್ಟವನ್ನ ಹತ್ತಿ ಮತ್ತೆ ಇಳುಕಲು ದಾರಿಯಲ್ಲಿ ಬರಬರ ಹೆಜ್ಜೆ ಹಾಕುತ್ತಾ ಇದ್ದೆವು. ಇಬ್ಬರ ಬಾಯಲ್ಲೂ ಬರೋಬ್ಬರಿ ಉಸಿರು. ಮೌನ ನೀರವ ರಾತ್ರಿಯ ಪರಿಸರ. ಇಬ್ಬರ ಬಾಯಿಂದ ಬುಸು ಬುಸು ಶಬ್ಧ.
ಒಹ್....! ತಲೆ ಬುಡ ಅರ್ಥ ಆಗಿಲ್ಲ ಅಲ್ವಾ....? ಮೊದಲಿಗೆ ವಾದದ ಸರಣಿ ಪ್ರಸ್ತಾಪಿಸಿದರೆ, ಕೊನೆ ಕೊನೆಗೆ ಯಾವುದೋ ರಾತ್ರಿಯಲ್ಲಿ ನಾವಿಬ್ಬರು ನಡೆದುಕೊಂಡು ಹೋಗುತ್ತಿರುವದನ್ನ ವರ್ಣನೆ ಮಾಡುತ್ತಿದ್ದೆ. ಮತ್ತೆ ಯಕ್ಷಗಾನಾದ ಬಗ್ಗೆ ನಿಮ್ಮ ತಲೆಯಲ್ಲಿ ಹುಳಾ ಬಿಡ್ತಾ ಇದ್ದೇನೆ ಅನಿಸುತ್ತಿದ್ಯಾ...? ಉಹೂಂ…….! ನಾನು ಹೇಳಲಿಕ್ಕೆ ಹೊರಟಿರುವದು ಯಕ್ಷಗಾನದ ವಿಷಯಾನೂ ಅಲ್ಲ. ಅದರಬಗ್ಗೆ ವಿದ್ವತ್ ಪೂರ್ಣ ಲೇಖನವೂ ಅಲ್ಲ. ವಿನಯ ಮತ್ತು ನನ್ನ ಮಧ್ಯೆ ಯಕ್ಷಗಾನದ ಬಗ್ಗೆ ನಡೆದ ವಾದದ ಯತಾವತ್ ದಾಖಲೆಯೂ ಅಲ್ಲ. ನಾನು ಹೇಳಲು ಹೊರಟಿರುವದು ಗುಂಡಬಾಳ ಶೆಟ್ಟರ ಅಂಗಡಿಯ ಮಿಸಾಳ್ ಬಾಜಿ ಕಥೆ.

ನಿಮಗೆಲ್ಲ ಗೊತ್ತೇ ಇದೆ. ಬೇಸಿಗೆಯ ಮದುವೆ ಮನೆಯ ಭಯಂಕರ ಸುಸ್ತು. ಮಾಡಲು ಏನೂ ಕೆಲಸ ಇಲ್ಲದಿದ್ದರೂ ಆ ಕಡೆ ಈ ಕಡೆ ಓಡಾಡಿ, ಸಾವಿರ ಜನರನ್ನ ಮಾತಾಡಿಸಿ. ಬಂದಿರುವ ಜನರ ಮಧ್ಯದಲ್ಲಿ ಹುಡ್ಗೀರನ್ನ ಹೆಕ್ಕಿ ಹೆಕ್ಕಿ ತೆಗೆದು, ಅಳೆದು ತೂಗಿ ಕಣ್ಣನ್ನ ಮಿಟುಕಿಸಿ, ಕಣ್ಣನ್ನ ಆ ಕಡೆ ಈ ಕಡೆ ತಿರುಗಿಸಿ ತಿರುಗಿಸಿ, ನೋಡಿ ನೋಡಿ, ಕಣ್ಣು ಕೆಂಪಾಗಿರುತ್ತೆ. ಮಧ್ಯದಲ್ಲಿ ನಿಂಬೆಹಣ್ಣು ಶರಬತ್ತು, ಒಂದು ಸಿಂಗಲ್ ಕಪ್ಪು ಚಹಾ, ಕವಳ ಅದು ಇದೂ ಅಂತ ಉಧರಕ್ಕೂ ಸಕ್ಕತ್ ಕೆಲಸ ಕೊಟ್ಟಿರ್ತೇವೆ. ಬಂದವರಲ್ಲಿ ಅನೇಕರು ಪರಿಚಯಸ್ಥರು. ಎಷ್ಟೋವರ್ಷಗಳ ನಂತರ ಇವತ್ತು ಸಿಕ್ಕಿದ್ದಾರೆ. ಹಾಗೆ ಒಬ್ಬೊಬ್ಬರಲ್ಲಿ ಒಂದು, ಎರಡು, ಮೂರು ಅಂದ್ರೂ ಆವತ್ತಿನ ಮಾತು ದಿನನಿತ್ಯ ಮಾತಾನಾಡುವದಕ್ಕಿಂತ ಮೂವತ್ತು ಪಟ್ಟು ಹೆಚ್ಚಾಗಿರುತ್ತದೆ. ಯಾವಾಗಲೋ ನೋಡಿದ ಮುಖವನ್ನ ನೆನಪಿಸ್ಕಂಡು, ನೆನಪಿಸ್ಕಂಡು, ಮತ್ತೆ ಫೋಟೊನೂ ತೆಗ್ದು ತೆಗ್ದು, ಅಲ್ಲಲ್ಲಿ ಕೂತ ಹುಡ್ಗೀರ ಬಗ್ಗೆ ತಲೆ ಕೆಡ್ಸ್ಕಂಡು, ಒಬ್ಬೊಬ್ಬರ ಬಗ್ಗೆ ಒಂದೊಂದು ಕಥೆ ನೆನ್ಪಾಗಿ, ನಮ್ಮ ಮಿದುಳಿಗೆ ಬಿಡುವಿಲ್ಲದ ಕೆಲ್ಸ ಕೊಟ್ಟಿದ್ದರಿಂದ ತಲೆ ಬಿಸಿಯಾಗಿ, ಎಲ್ಲಾ ಹಳೆ ಮೆಮೋರಿನೂ ಒಂದೇ ಬಾರಿ ಒಪನ್ ಮಾಡಿದ್ದರಿಂದ ತಲೆ ಎಂಬ ಸಿಸ್ಟಮ್ ನಿಧಾನ ಆಗ್ತಿದೆ ಅನ್ನುವಾಗ ಹೊಸ ಹುಡ್ಗೀರ್ ಎಂಬ ಹೋಸಾ ಸಾಫ್ಟ್ ವೇರನ್ನ ಹಾರ್ಡ ಡಿಸ್ಕಿನಲ್ಲಿ ಇನ್ಸ್ಟಾಲ್ ಮಾಡುವ ಹೊತ್ತಿಗೆ ತಲೆಯೆಂಬ ಕಂಪ್ಯೂಟರ್ ಜಾಮ್ ಆಗಿ ಹ್ಯಾಂಗ್ ಆಗಿಬಿಡುತ್ತೆ. ಅದೇನಾದ್ರು ನಮ್ಮ ಪೈಪೋಟಿ ಗೆಳೆಯರೆಂಬ ವೈರಸ್ ಅಟ್ಯಾಕ್ ಆಯ್ತೋ ಮುಗಿತ್ ಕಥೆ. ಫುಲ್ ತಲೆಯಂಬ ಕಂಪ್ಯೂಟರ್ ಆಫ್ ಆಗಿಬಿಡುತ್ತೆ. ಮತ್ತೆ ಆ ಭಯಂಕರ ಸೆಕೆಯಲ್ಲಿ ಪಂಕ್ತಿಯಲ್ಲಿ ಮರೆತು ಹೋದ ಚಕ್ಲುಪಟ್ಟೆ ಹಾಕಿಕೊಂಡು ಬಿಸಿ ಬಿಸಿ ಊಟಮಾಡುವಾಗ ಎದುರು ಪಂಕ್ತಿಯಲ್ಲಿ ಕುಳಿತ ಪಕ್ಕದಮನೆ ಸುಬ್ಬಾ ಭಟ್ಟರು ನಮ್ಮನ್ನೇ ನೋಡ್ತಾ ಇರ್ತಾರೆ. ಬೆಂಗಳೂರಿಂದ ಬಂದ ಮಾಣಿ ಧರಿಸಿ (ಅನ್ನ ಪರಿಷೇಚನೆ ಮಾಡಿ) ಊಟ ಮಾಡುತ್ತಾನೋ, ಅಥವಾ ಹಾಗೇ ಮುಕ್ತಾನೋ ಅಂತ ಹದ್ದಿನ ಕಣ್ಣಿಟ್ಟಿರ್ತಾರೆ. ಕೈಯ್ಯಲ್ಲಿ ನೀರು ಹಾಕಿಕೊಂಡು ಅನ್ನಕ್ಕೆ ಸುತ್ತುಗಟ್ಟಿ ಪರಿಷೇಚನೆ ಮಾಡಿ ಅನ್ನ ಕಲಸಿ ಬಾಯಿಗಿಡುವ ಹೊತ್ತಿಗೆ ಗೆಳೆಯನ ಅಣ್ಣ ದಪ ದಪಾ ಅಂತ ಬಂದು ಸ್ವೀಟನ್ನ ಬಾಳೆಗೆ ಸುರಿತಾನೆ. ಎಲ್ಲವನ್ನ ನೀಟಾಗಿ ಹೊಟ್ಟೆಗೆ ಇಳಿಸಿಕೊಂಡು ಕುಡ್ಯೋ ತಂಬುಳಿ ಕುಡ್ಕಂಡು ಕೊನೆಯಲ್ಲಿ ಉತ್ತರಾಪೋಶನ ತೆಗೆದುಕೊಂಡು ಊಟ ಬಡಿಸಲು ಬಂದ ಈ ವರ್ಷ ಸೆಕೆಂಡ್ ಇಯರ್ ಪಿ.ಯು.ಸಿಗೆ ಸೇರಿದ ಆ ಪಕ್ಕದಮನೆ ಅಡುಗೆಸುಬ್ಬಕ್ಕನ ಮಗಳ ಮುಖವನ್ನ ತಲೆಯಲ್ಲಿ ಫೀಡ್ ಮಾಡ್ಕಂಡು ಊಟದಿಂದ ಏಳುವತನಕ ಸಾಕು ಸಾಕು ಸುಸ್ತು ಸುಸ್ತು. ನೋಡಿ.. ಮದುವೆ ಮನೆಯಲ್ಲಿ ಏನೂ ಕೆಲಸ ಮಾಡದೇ ಇದ್ರೂ ಸುಸ್ತಾಗೋದು ಇದಕ್ಕೆ. ಇಂತಹ ಸುಸ್ತನ್ನ ಹೊತ್ತುಕೊಂಡು ಹಾ...! ದೋಸ್ತಾ ಹೊರ್ಡ್ತೇನೆ ಅನ್ನುವಾಗ ಮರುದಿನ ಮನೆಯಲ್ಲಿ ಊಟ ಇದೆ ಬರ್ಲೇ ಬೇಕು ಅನ್ನುವ ಗೆಳೆಯನ ಒತ್ತಾಯಕ್ಕೆ ಹೂಂ... ಹಾಕಿ ಮನೆಗೆ ಬಂದು ಮಂಚದ ಮೇಲೆ ಕುಳಿತುಕೊಂಡೆ. ಹಾಗೇ ಅಲ್ಲಿಯೇ ನಿದ್ರಾ ಲೋಕಕ್ಕೆ ಜಾರಿಕೊಂಡಾಗಿತ್ತು.
ರಾತ್ರಿ ಎಂಟು ಘಂಟೆಗೆ ಅಪ್ಪ “ಮಾಣಿ ಊಟಕ್ಕೆ ಬಾರ “ ಎಂದು ಕರೆದಾಗಲೇ ಎಚ್ಚರವಾದದ್ದು. “ಇಲ್ಯೋ ನನಗೆ ಊಟ ಬ್ಯಾಡಾ ಮಹಾರಾಯ” ಎಂದೆ. “ಹಾಂಗದ್ರೆ ಹ್ಯಾಂಗ” ಅಂತ ಹೇಳಿದ ಅಪ್ಪನ ಪ್ರೀತಿಯ ಕರೆಗೆ ಅಂತೂ ಇಂತು ಅಡಿಗೆಮನಗೆ ಬಂದು ಕುಳಿತಕೂಂಡೆ. ಅಪ್ಪ ಬಡಿಸಿಟ್ಟ ಚಿಟಗನ ಅಕ್ಕಿ ಅನ್ನದಮೇಲೆ ಜೀರಿಗೆ ಮಾವಿನ ಹಣ್ಣಿನ ತಂಬುಳಿಯ ಘಮ ಮೂಗಿನ ಒಳಗಿಂದ ತಲೆಗೆ ಹೋಗಿ ಅಲ್ಲಿಂದ ಅದೇನೋ ವಿಚಾರ ಹೊಟ್ಟೆಗೆ ರವಾನೆ ಆಯಿತು. ಹೊಟ್ಟೆ ಮಾವಿನ ಹಣ್ಣಿನ ತಂಬುಳಿಯನ್ನ ಸವಿಯಲು ಸಿಧ್ಧವಾಗಿಬಿಟ್ಟಿತು. ಇನ್ನು ಹೊಟ್ಟೆಯಲ್ಲ ಜಾಗವಿಲ್ಲವೆಂದು ಬಟ್ಟಲು ಬಿಟ್ಟು ಎದ್ದು ಕೈ ತೊಳೆದುಕೊಂಡು ಬಂದು ಜಗುಲಿಯಲ್ಲಿ ಕುಳಿತುಕಳ್ಳುವ ಹೊತ್ತಿಗೆ ಕಿವಿಗೆ ಬಿದ್ದದ್ದು ಅದೇ ಚಂಡೆ ಮತ್ತು ಮದ್ದಳೆಯ ದ್ವನಿ. ಗಾಳಿಯಲ್ಲಿ ತೇಲಿಬರುವ ಭಾಗವತಿಕೆಯ ಆಲಾಪನೆ.
ಛೇ...! ಮತ್ತೆ ವಿಶಯಾಂತರ ಆಯಿತು. ಮಿಸಾಳ ಬಾಜಿ ಕಥೆ ಹೇಳಲು ಹೋಗಿ ಕಥೆಯೇ ಮಿಸಾಳ್ ಬಾಜಿ ತರಹ ಕಲಸುಮೆಲೊಗರೆ ಆಯ್ತು ಅಂತೀರಾ..? ತೆಡೀರಿ ಮಹಾರಾಯ್ರೆ...! ಇಷ್ಟೆಲ್ಲಾ ಬಿಚ್ಚಿಕೊಳ್ಳುವ ಆಲೋಚನೆಯನ್ನ ನಮೂದಿಸದೆ ಮುಂದೆ ಹೋದರೆ ತರವಲ್ಲ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಸಾಗರ ಮತ್ತೆ ಮಲೆನಾಡಿನ ಕಡೆಯ ಜನರಿಗೆ ಯಕ್ಷಗಾನದ ಹುಚ್ಚು ಸ್ವಲ್ಪ ಹೆಚ್ಚು. ಬೇಸಿಗೆಯಲ್ಲಿ ಅಲ್ಲಲ್ಲಿ ತೇರು, ಜಾತ್ರೆ, ಇವುಗಳಂತಹ ವಿಶೇಷ ಸಂದರ್ಭಗಳಲ್ಲಿ ಯಕ್ಷಗಾನದ ಟೆಂಟು ಹಾಕಲ್ಪಡುತ್ತದೆ. ನಮ್ಮ ಊರಿನ ಹತ್ತಿರ ಗುಂಡಬಾಳ ಅನ್ನುವ ಪ್ರಕೄತಿ ಮಡಿಲಿನಲ್ಲಿರುವ ಸುಂದರ ಊರಿನಲ್ಲಿ ವರ್ಷಕ್ಕೆ ಆರುತಿಂಗಳು ಸತತವಾಗಿ ಒದೇ ಜಾಗದಲ್ಲಿ ದೇವರಿಗೆ ಹರಕೆಯ ರೂಪದಲ್ಲಿ ಯಕ್ಷಗಾನ ನಡೆಯುತ್ತದೆ. ಹಾಗಾಗಿ ನನಗಂತೂ ರಜಾದಿನಗಳಲ್ಲಿ ಮನೋರಂಜನೆಗೆ ಪರದಾಡುವಂತಹ ಅವಶ್ಯಕತೆ ಬಂದಿದ್ದೇ ಇಲ್ಲ. ಬೇಸಿಗೆ ರಜೆಯ ಎರಡುತಿಂಗಳು ಗುಂಡಬಾಳದ ಗದ್ದೆ ಬೈಲಿನಲ್ಲಿ ಸರಾಗವಾಗಿ ಕಳೆದು ಹೋಗಿಬಿಡುತ್ತಿತ್ತು. ಆಮೆಲಾಮೇಲೆ ಊರು ಬಿಟ್ಟು ಪರ ಊರು ಸೇರಿದ ಮೇಲೆ ಯಾವಾಗಲಾದರೂ ಅಪರೂಪಕ್ಕೆ ಊರಿಗೆ ಹೋದಾಗ ಪುರುಸೊತ್ತಿದ್ದರೆ ಅಲ್ಲಿಗೆ ಹೋಗುವ ರೂಢಿ ಇತ್ತು. ಹಾಗೆ ಮೊನ್ನೆ ಊರಿಗೆ ಹೋದಾಗಲೂ ಸಹ ಚಂಡೆ ಮದ್ದಲೆಯ ನಾದ ಕರ್ಣ ಪಟಲವನ್ನ ತಾಗಿದ್ದೇ ತಡ. ಪಕ್ಕದ್ಮನೆಯ ವಿನಯನನ್ನು ಕೂಡಿಕೊಂಡು ಗುಂಡಬಾಳ ಕಡೆಗೆ ಹೊರಟು ಬಿಟ್ಟೆ. ದಾರಿಯ ಮಧ್ಯದಲ್ಲಾದ ಸಂಭಾಷಣೆಯನ್ನ ಈಗಾಗಲೇ ವಿವರಿಸಿದ್ದೇನೆ. ಮತ್ತೆ ಹೇಳಿದರೆ ಪುನರುಕ್ತ ದೋಷ ನನ್ನನ್ನ ಸುತ್ತಿಕೊಳ್ಳುತ್ತದೆ. ಹಾಗೆ ನಾವು ಒಂದರ್ಧಘಂಟೆಯ ನಂತರ ರಾತ್ರಿ ಹನ್ನೊಂದುವರೆ ಸುಮಾರಿಗೆ ಯಕ್ಷಗಾನ ನಡೆಯುವ ಬೈಲಿಗೆ ಬಂದಾಗಿತ್ತು. ಆಗತಾನೆ ಬಾಲ ಗೋಪಾಲ ಮತ್ತು ಸ್ತ್ರೀ ವೇಷದ ನಂತರ ಲವ ಕುಶ ಆಖ್ಯಾನವು ಆರಂಭವಾಗಿತ್ತು. ಅಲ್ಲಲ್ಲಿ ಕೆಲವು ಜನರು ಬೆರಳೆಣಿಕೆಯಲ್ಲಿ ಕುಳಿತಿದ್ದರು. ನಾನು ಸಣ್ಣವನಿರುವಾಗ ಮೇ ತಿಂಗಳಲ್ಲಿ ನಡೆಯುವ ಗುಂಡಬಾಳ ಯಕ್ಷಗಾನಕ್ಕೆ ಕಡಿಮೆ ಎಂದರೂ ಮುನ್ನೂರು ನಾಲ್ಕುನೂರರ ಆಸುಪಾಸು ಜನ ಸೇರುತ್ತಿದ್ದರು. ಆದರೆ ಯಾಕೋ ಇಂದಿನ ದಿನಗಳಲ್ಲಿ ಜನರೇ ಕಡಿಮೆ. ಟಿವಿ ಮಾಧ್ಯಮದ ನೇರ ದುಷ್ಪರಿಣಾಮ ಯಕ್ಷಗಾನದ ಮೇಲೆ ಆಗಿದೆ ಅಂದರೂ ತಪ್ಪಲ್ಲ. ಈಗ ನಡೆಸುವ ಯಕ್ಷಗಾನದ ಗುಣಮಟ್ಟವೂ ಪರಿಣಾಮವನ್ನ ಬೀರಿದೆ. ಒಂದು ಕಡೆ ಗಟ್ಟಿ ಮಾರ್ಗದರ್ಶಕರು ಮತ್ತು ಹಿರಿಯ ಕಲಾವಿದರ ಕೊರತೆಯಾದರೆ, ಅದಕ್ಕೆ ಪೂರಕವಾಗಿ ದೇವಸ್ಥಾನದ ಟ್ರಸ್ಟಿಗಳು ಮೇಳಕ್ಕೆ ಕೊಡುವ ಹಣದ ಕೊರತೆಯೂ ಮೇಳವನ್ನ ಕಾಡುತ್ತಿರಬಹುದು. ಮತ್ತೆ ಈ ಜನರೇಶನ್ ನವರು ಯಕ್ಷಗಾನವನ್ನ ಒಂದು ಕಲೆಯನ್ನಾಗಿ ಸ್ವೀಕರಿಸದೆ ಕೇವಲ ವೃತ್ತಿಯನ್ನಾಗಿ ಪರಿಗಣಿಸಿದ್ದರ ಪರಿಣಾಮವೂ ಆಗಿರಬಹುದು. ಕಾರಣ ಬಹಳುಂಟು. ಅಂತೂ ಅಂದು ನಾವು ನೋಡುತ್ತಿರುವ ಯಕ್ಷಗಾನಕ್ಕಿಂತ ಇಂದಿನ ಯಕ್ಷಗಾನ ಸಪ್ಪೆ ಆದದ್ದಂತೂ ನಿಜ. ನಾವು ಅಲ್ಲಿಗೆ ಹೋದ ಸಂದರ್ಭದಲ್ಲಿ ಲವಕುಶ ಕಾಳಗ ಪ್ರಸಂಗವು ನಡೆಯುತ್ತಿತ್ತು. ಅಂದು ವಟುವನ್ನ ಮಾಡಿದ ಪಾತ್ರಧಾರಿಯೊಬ್ಬರು ಗುರುಕಲದ ಕಲಿಕಾಪದ್ದತಿಯನ್ನ ಅಧುನಿಕ ಯುಗದ ಸರ್ಕಾರಿ ಶಾಲೆಯ ಕಲಿಕೆಯಯಂತೆ ತಿಳಿದು ಮಾತಾನಾಡುತ್ತಲಿದ್ದರು. ಮಧ್ಯದಲ್ಲಿ ಪಾಟಿಚೀಲ, ಶಾಲೆ ಬಿಡುವ ವೇಳೆ, ಅದೂ ಇದು ನಮ್ಮ ಅಧುನಿಕ ಜಗತ್ತಿನ ವಿಧ್ಯಾಭ್ಯಾಸದ ಕಲಿಕೆಯ ಯತಾವತ್ ಅರ್ಥ್ ನಿರೂಪಣೆ ಅವರದ್ದಾಗಿತ್ತು. ನೋಡುತ್ತಿರುವ ಜನರಿಗೆ ವಾಲ್ಮೀಕಿಯ ಆಶ್ರಮವೂ ಒಂದೇ ನಮ್ಮ ಅಧುನಿಕ ಯುಗದ ಶಾಲೇಯೂ ಒಂದೆ ಅನ್ನವ ಭಾವನೆ ಅಲ್ಲಿ ನಿರ್ಮಾಣ ಮಾಡಿಬಿಟ್ಟಿದ್ದರು. ನನಗ್ಯಾಕೋ ಯಕ್ಷಗಾನವನ್ನ ಮುಂದೆ ನೋಡುವ ಮನಸ್ಸು ಬರಲಿಲ್ಲ.

ಈಗಿನ ಕಾಲದಲ್ಲು ಯಕ್ಷಗಾನದ ಗುಣಮಟ್ಟ ಚೆನ್ನಾಗಿಯೇ ಇದೆ...ಆದರೆ ನೋಡುವವರ ದ್ರಷ್ಟಿ ಸ್ವಲ್ಪ ಕಡಿಮೆ ಆಗಿದ್ದು ನಿಜ....
ReplyDeleteಆದರೆ ಈಗಿನ ಕಾಲದ ಮಕ್ಕಳು ಮತ್ತೆ ಅದರಲ್ಲಿ ಆಸಕ್ತಿ ತೋರುತ್ತಿರುವುದು ನಿಜವಾಗಲು ಹೆಮ್ಮೆಯ ಸಂಗತಿ ......ತುಂಬ ಚೆನ್ನಾಗಿ ವರ್ಣನೆ ಮಾಡಿದ್ದೆ ಅಣ್ಣ .....ಚೆನ್ನಾಗಿದ್ದು..
ಜನಕ್ಕೆ ಈಗಿನ ಕಾಲದಲ್ಲಿ ನಮ್ಮ ಪುರಾಣ, ರಾಮಾಯಣ, ಮಹಾಭಾರತ ಕಥೆ ಕೆಲವೊಂದಿಷ್ಟಾದರೂ ಯಕ್ಷಗಾನದ ಮೂಲಕ ತಲಪ್ತಾ ಇದ್ದು............
ReplyDeleteಅಂದಿನ ಕಾಲದಿಂದ ಇಂದಿನ ಕಾಲದವರೆಗೆ ಇಂಗ್ಲಿಷನ್ನ ಬದಿಗಿಟ್ಟು ಕನ್ನಡಭಾಷೆ ಒಂದನ್ನೇ ಬಳಸುತ್ತಾ ಇರುವಂತ ಕಲೆ ಯಕ್ಷಗಾನ ಮಾತ್ರ..........ಈ lines ತುಂಬಾ ಇಷ್ಟ ಆತು ...ನಿಜ ಅನಿಸ್ತು.
ಕಲೆ ನಿಂತ ನೀರಲ್ಲ ...ಅದು ಕಾಲ ಕಾಲಕ್ಕೆ ಪರಿವರ್ತನೆ ಹೊಂದುತ್ತಲೇ ಇರುತ್ತದೆ. ಯಕ್ಷಗಾನದ ವಿಷಯದಲ್ಲಿ ವೃತ್ತಿಮೇಳಗಳ ಟೆಂಟ್ ಪ್ರದರ್ಶನ ಸ್ವಲ್ಪ ಮಟ್ಟಿಗೆ ಕೆಟ್ಟಿದೆಯಾದರೂ , ಬೆಂಗಳೂರಲ್ಲಿ ನಡೆಯುವ ಪೌರಾಣಿಕ ಕಥಾಪ್ರಸಂಗಗಳು ಚೆನ್ನಾಗೇ ಇರುತ್ತವೆ. ಅಲ್ಲದೇ ದೊಡ್ಡಾಟ ,ಸಣ್ಣಾಟ , ಸಂಗ್ಯಬಾಳ್ಯ ಮೊದಲಾದ ಜನಪದ ಕಲೆಗಳಿಗೆ ಹೋಲಿಸಿದರೆ ಯಕ್ಷಗಾನ ಇನ್ನೂ ಜನಮಾನಸದಲ್ಲಿ ಉಳಿದಿದೆಯಲ್ಲದೆ ಯುವಜನರನ್ನೂ ಆಕರ್ಷಿಸುತ್ತಿದೆ . ಅದೇ ಯಕ್ಷಗಾನದ ಹೆಚ್ಚುಗಾರಿಕೆ .
ReplyDeleteನಿಮ್ಮ ಮಿಸಳ್ ಬಾಜಿ ಕಥೆ ಕೇಳಿ ನನಗೂ ಚಿಕ್ಕವಳಿರುವಾಗ ಯಕ್ಷಗಾನ ನೋಡಲು ಹೋದಾಗ ತಿನ್ನುತ್ತಿದ್ದ ಕಾರಮಂಡಕ್ಕಿ ನೆನಪಾಯಿತು :)
ಕರಾವಳಿಯ ಬೇಸಿಗೆ ಧಗೆ, ಮದುವೆಮನೆಯ ಶರಬತ್-ಊಟ-ಮಾತುಕತೆ, ಕನ್ಯಾವಲೋಕನ, ಗು೦ಡಬಾಳದ ಯಕ್ಷಗಾನ, ಕನ್ನಡದ ಗತಿ, ಪುರಾಣಕಥೆಗಳ ಪ್ರವರ, ಅಪ್ಪನ ಪ್ರೀತಿ, ಅಪ್ಪೆಮಿಡಿ ತ೦ಬುಳಿ, ಶೆಟ್ಟರ ಮಿಸಳ್ ಭಾಜಿ, ಎಲ್ಲವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಹೊಸರುಚಿಯೊ೦ದನ್ನು ಮಾಡಿ ಕೊಟ್ಟ೦ತಿದೆ ನಿಮ್ಮ ಈ ಬರಹ. ಸರಳ, ಸುಲಲಿತ ಓದಿಗೆ ದಕ್ಕುವ ಬರಹ. ಇನ್ನಷ್ಟು ರುಚಿಕರವಾಗಿ ಮಾಡಬಹುದಿತ್ತು, ಸ್ವಲ್ಪ ಆತುರಪಟ್ಟಿರಿ ಅನಿಸುತ್ತೆ. ಆದರೂ ಚೆನ್ನಾಗಿದೆ. ನೀವು ಹೇಳಿದ್ದು ನಿಜ. ಕನ್ನಡ ಬಳಕೆ ಶೇ:100 ಕಾಣುವುದು ಯಕ್ಷಗಾನದಲ್ಲಿ ಮಾತ್ರ. ಆದರೆ,ರಾಮಾಯಣ, ಮಹಾಭಾರತದ ಪಾತ್ರಗಳ ಬಗ್ಗೆ ಅದರಲ್ಲಿ ಬರುವ ವ್ಯಕ್ತಿಗಳ ಬಗ್ಗೆ ಇದಮಿತ್ಥಂ ಎ೦ದು ತೀರ್ಮಾನಿಸುವುದು ಎ೦ದೆ೦ದಿಗೂ ಸಲ್ಲ, ಒ೦ದೊ೦ದು ದೃಷ್ಟಿ ಕೋನದಿ೦ದ ಭೀಷ್ಮ, ರಾವಣ, ಕೌರವ, ವಾಲಿ ಕೆಟ್ಟವರಲ್ಲ. ಆ ಪಾತ್ರಗಳ ಅ೦ತರಾತ್ಮ ಪೂರ್ಣವಾಗಿ ಹೀಗೆಯೇ ಅ೦ತ ನಮ್ಮ ಮನದಲ್ಲಿ ದಾಖಲಾದರೆ ಮತ್ತೆ ಅಲ್ಲಿ ಸ್ವಾರಸ್ಯ ಇರುವುದಿಲ್ಲ. ಅದು ಹಾಗೆಯೇ ಇರಬೇಕು. ಉದಾ: ಶೇಣಿಯವರು ರಾವಣ, ಕೌರವ, ಪಾತ್ರ ಮಾಡಿದರೆ (ವಿಶೇಷತಃ ತಾಳಮದ್ದಳೆಯಲ್ಲಿ) ಆ ವ್ಯಕ್ತಿಗಳನ್ನವರು ಸಶಕ್ತವಾಗಿ ಪ್ರತಿನಿಧಿಸಿ, ನೋಡುಗ/ಕೇಳುಗನ ಮನದಲ್ಲಿ ಹೊಸ ಜಿಜ್ಞಾಸೆ ಮೂಡಿಸುತ್ತಾರೆ. ನಿಮ್ಮ ಕೊನೆಮಾತು ನಿಜವೆನಿಸುತ್ತದೆ. ಶೆಟ್ಟರ೦ಗಡಿ ಮಿಸಳ್ ಭಾಜಿ ರುಚಿ ಬದಲಾಗಿಲ್ಲ, ಆದರೆ ಯಕ್ಷಗಾನ ಬದಲಾಗಿದೆ. ಹಿ೦ದೆ ಇದ್ದ೦ತಹ ಪಾತ್ರವೈಭವ, ಮಾತುಗಾರಿಕೆ ಈಗಿಲ್ಲ, ಈಗಿನ ಜನರಿಗೆ ಇಷ್ಟವಾಗುವ ರೀತಿಯಲ್ಲಿ ಮಾತುಗಾರಿಕೆ, ಹಾಡುಗಾರಿಕೆಯಲ್ಲಿ ವ್ಯತ್ಯಾಸ ಆಗಿದೆ. ಕಾಲಕ್ಕೆ ತಕ್ಕ ಕೋಲ. ಬರಹ ಚೆನ್ನಾಗಿದೆ.
ReplyDeleteಲೇಖನ ತುಂಬ ಚೆನ್ನಾಗಿದೆ.
ReplyDeleteಲೇಖನ ತುಂಬ ಚೆನ್ನಾಗಿದೆ.
ReplyDeletesaviyada lekhana
ReplyDelete