Thursday, July 12, 2012

ಭಾವಾಭರಣ


ಭಾವಾಭರಣ
ಅಕ್ಕಸಾಲಿಗನ ಅಂಗಡಿಯಲ್ಲಿ ಆಭರಣಗಳು  ನಗುತ್ತವೆ
ಗಟ್ಟಿ ಚಿನ್ನ ಕರಗಿ ತಾಮ್ರದ ಜೊತೆ ಬೆರೆತು ಎರಕವಾಗಿ
ಕುಸರಿ ಕಲೆ ಹೊಳಪು ಥಳಥಳಿಸಿ ವಿಧ ವಿಧ  ರೂಪ ತಾಳಿ
ಕನ್ನಡಿಯ ಕಪಾಟಿನಲ್ಲಿ  ಕೂತು ತಮ್ಮಷ್ಟಕ್ಕೆ ತಾವೇ  ನಗುತ್ತವೆ
ಗಿರಾಕಿಗಳ ಮಾತಿಗೆ ಅಲ್ಲ ಅವರ ಹಾವ ಭಾವಕ್ಕೆ
ಕೊಟ್ಟು ಕೊಳ್ಳುವವನ ಮಧ್ಯದ ನಾಟಕಕ್ಕೆ

ಇದು ಶುದ್ಧ ಚಿನ್ನವೇ? ಹಾಗಾದರೆ ಬೆಲೆಯೆಷ್ಟು
ಇದರ ಅಳತೆಯೇನು? ಗ್ರಾಮಿನಲ್ಲಿ ಲೆಕ್ಕವೆಷ್ಟು
ಇದನ್ನ ನನ್ನವಳು ಒಪ್ಪಿಕೊಳ್ಳುತ್ತಾಳೋ ಇಲ್ಲವೋ
ಆದರೂ ಕೊಡಿ ಅವಳಿಗೆ ಬೇಡದಿದ್ದರೆ ಇನ್ನೊಬ್ಬಳಿಗೆ

ಮಗಳ ಮದುವೆ ಎಲ್ಲವನ್ನೂ ನೀವೇ ಮಾಡಿ ಕೊಡಬೇಕು
ಅಳಿಯನಿಗೆ ಉಂಗುರ ಚೈನು ಸಣ್ಣದೊಂದು ಬ್ರಾಸ್ ಲೆಟ್
ಮಗಳಿಗೆ ಕರಿಮಣಿ ಚಿನ್ನದಲ್ಲೇ ಕಟ್ಟಿಸಬೇಕು
ಚಿನ್ನದ ಮೂಗುತಿ ಡಾಲು ಸೊಂಟಪಟ್ಟಿ
ಕಿವಿಯೋಲೆ ವಜ್ರವನ್ನೂ ಒಳಗೊಂಡಿದ್ದರೆ ಚನ್ನ
ಇಷ್ಟು ಸಾಕು ಶಕ್ತಿ ಇಲ್ಲ ಸೋತು ಹೋಗಿಬಿಟ್ಟಿದ್ದೇನೆ
ಕಿರಿಯವಳಿಗೆ ಮಾಡಿಸಿದ್ದು ಇಷ್ಟು ಹೆಚ್ಚು

ಸ್ವಲ್ಪ ಹಳೆ ಚಿನ್ನ ಇದೆ ತೊಳೆಯುವದಕ್ಕೆ
ಮೊನ್ನೆ ಏನಾಯ್ತು ಅಂದ್ರೆ ... ಬೇಡ ಬಿಡಿ
ಅಕ್ಕಸಾಲಿಗರು ಅಕ್ಕನ ಮಕ್ಕಳ .....
ನೀವು ಹಾಗಲ್ಲ ನಂಬಿಕಸ್ತ ಶೆಟ್ಟರು
ಒಂದು ಒಳ್ಳೆ ಸರಮಾಡಿಕೊಡಿ ಚಂದದ್ದು
ನನಗೂ ಸೊಸೆಗೂ ಇಬ್ಬರಿಗೂ ಹೊಂದಬೇಕು

ಇದರ ಡಿಸೈನ್ ಹಳೆಯದು
ಹೊಸ ಡಿಸೈನ್  ಯಾವುದಿದೆ ನಿಮ್ಮಲ್ಲಿ
ಇದು ಬೇಡವೇ ಬೇಡ ಇದರಲ್ಲಿ ಕೆಂಪು ಹರಳಿದೆ
ಹಸಿರು ಹರಳು ಇದ್ದರೆ ಚನ್ನಾಗಿತ್ತು
ಇದು ಬೇಡ ಇದು ನನ್ನ ಮೂಗಿಗೆ  ಒಪ್ಪುವದಿಲ್ಲ
ಮುಂದಿನ ಸರತಿ ಬರ್ತೇನೆ ಈಗ ಯಾವುದು ಬೇಡ

ಎಷ್ಟೆಲ್ಲಾ ಮಾತುಗಳ ವಿನಿಮಯ
ಎಷ್ಟು ಭಾವಗಳ ಅನಾವರಣ
ಕೊಳ್ಳುವರಿಗೆ ಹಲವು ಅಭಿರುಚಿ
ಗಿರಾಕಿಗೆ ತಕ್ಕಂತೆ ಅಕ್ಕಸಾಲಿಗ ಬದಲಾಗುತ್ತಾನೆ
ಸ್ಪಂದಿಸಿದದಿದ್ದರೆ ಆಭರಣಗಳು  ಮಸುಕಾಗುತ್ತದೆ
ಆಭರಣಗಳು  ಕನ್ನಡಿಯ ಕಪಾಟಿನಲ್ಲೆ ಉಳಿದುಬಿಡುತ್ತದೆ 

3 comments:

  1. ಭಾವಾಭರಣ ಚೆನ್ನಾಗಿದೆ. ಗಿರಾಕಿಗೆ ತಕ್ಕಂತೆ ಅಕ್ಕಸಾಲಿಗ ಬದಲು, ಜಗತ್ತೇ ಬದಲು.

    ReplyDelete
  2. ಅಕ್ಕಸಾಲಿಗನ ಮುಖದ ಮೇಲೆ ಭಾವವೇ ಆಭರಣ. ಸುಂದರ ಕಲ್ಪನೆ.ಚನ್ನಾಗಿದೆ

    ReplyDelete