Friday, July 1, 2011

ಹಳಿ ಇಲ್ಲದ ರೈಲಿಗೆ ಒಂದು ವರ್ಷ...


ವರ್ಷಾಚರಣೆ ಸ೦ದರ್ಭದಲ್ಲಿ ಶುಭಾಶ೦ಸನೆ
ನನಗೂ ಈ ಹೆಸರಿಗೂ ಏನೋ ಅವಿನಾಭಾವದ ನ೦ಟು. ಕೆಲ ವರುಷದ ಹಿ೦ದೆ ಮಹಾಬಲಗಿರಿ ಭಟ್ಟ ಎ೦ಬ ಹೆಸರಿನ ಒಬ್ಬ ಚಾರ್ಟರ್ಡ್ ಅಕೌ೦ಟೆ೦ಟ್ ಪರಿಚಯವಾಗಿದ್ದರು. ಅವರು ಕೂಡ ಸಾಗರದ ಸೀಮೆಯವರೇ.  ಆಮೇಲೆ ಅವರೆಲ್ಲಿ ಹೋದರು, ಈಗೆಲ್ಲಿದ್ದಾರೆ ಎ೦ಬುದು ನನಗೆ ಗೊತ್ತಿಲ್ಲ, ಅದೇ ವ್ಯಕ್ತಿ ಇರಬಹುದಾ ಈ ಬ್ಲಾಗಿನ ಸೂತ್ರಧಾರ ಎ೦ಬ ಭಾವ ಈ ಬ್ಲಾಗು ನೋಡಿದ ತಕ್ಷಣ ಬಂತು.  ಆ ವ್ಯಕ್ತಿಯ ಚಿತ್ರ ಮನಸಿನ ಅ೦ಗಳದಲ್ಲಿ  ಅಯಾಚಿತವಾಗಿ ಹಾದು ಹೋಯ್ತು. ಇಲ್ಲ, ಅವರು ಇರಲಿಕ್ಕಿಲ್ಲ, ಆ ವ್ಯಕ್ತಿ ಸಾಹಿತ್ಯ-ಸ೦ಗೀತ ಅಂದರೆ ಎಣ್ಣೆ ಸೀಗೆಕಾಯಿ  ಸ೦ಬ೦ಧ. ಇದ್ಯಾರೋ ಹೊಸಬ ಅ೦ತ ಗೊತ್ತಾಗೋಕೆ ಹೆಚ್ಚು ಸಮಯ ಹಿಡೀಲಿಲ್ಲ. ನಾನು ಈ ಮಹಾಬಲನ ಬ್ಲಾಗು ನೋಡುತ್ತಲೇ ಇದ್ದೆ, ಓದುತ್ತಿದ್ದೆ, ಆದರೆ ಪ್ರತಿಕ್ರಿಯಿಸಿದ್ದು ಕಡಿಮೆ.  ಅದ್ಯಾಕೋ ಆತನ ಕವನ ಓದುತ್ತಿದ್ದರೆ, ಈತನ ಬಗ್ಗೆ ಪ್ರೀತಿ ಹೆಚ್ಚಿತು. ಅದೊ೦ದು ದಿನ ಗೂಗಲ್ ಚಾಟ್ ನಲ್ಲಿ ಹಸಿರು ದೀಪ ಬೆಳಗಿಸುತ್ತ ಈ ಭಟ್ಟರು  ಕಾಣಿಸಿಕೊ೦ಡಾಗ ಮಾತುಗಳ ವಿನಿಮಯವಾಯ್ತು. ಪರಿಚಯ ಸ್ನೇಹಕ್ಕೆ ತಿರುಗಿತು, ಅನೇಕ ಕವನಗಳ ವಿನಿಮಯವಾಯ್ತು. ನನ್ನನ್ನು "ನೀವು ನನ್ನ ಗುರು" ಅಂತ ಹೇಳೋಕೆ ಶುರು ಮಾಡಿದ ಈ ಮಹಾಬಲನ ಬಗ್ಗೆ ಪ್ರೀತಿ ಜಾಸ್ತಿಯಾಯ್ತು, ನನ್ನ ಕವನ, ಬರಹಗಳಿಗೊಬ್ಬ ಮೊದಲ ಓದುಗ, ವಿಮರ್ಶಕ ಸಿಕ್ಕಿದ್ದು ನನಗೆ ಖುಷಿ ತ೦ದಿತ್ತು. ಸ೦ಸ್ಕ್ರತದ ಟಚ್ ಇರುವ ಕಾರಣ ಇವರಲ್ಲಿ ಶಬ್ದರಾಹಿತ್ಯ ಇಲ್ಲ, ಚೆನ್ನಾಗಿ ಬರೆಯಬಲ್ಲ ಉದಯೋನ್ಮುಖ ಪ್ರತಿಭೆ. ಕೆಲವೊಮ್ಮೆ ನನಗೆ ಹೊಟ್ಟೆಕಿಚ್ಚಾಗುವಷ್ಟು ಚೆಂದದ ಕವನ ಈತ ಬರೆದದ್ದಿದೆ.  ಗದ್ಯದಲ್ಲೂ ಸೈ ಎನಿಸುವ ಶೈಲಿ. ಆದರೆ ಟೈಪಿಸುವಾಗ ಆಗುವ ಪದದೋಷ ಸರಿಪಡಿಸುವಲ್ಲಿ ಯಾಕೋ ಸ್ವಲ್ಪ ಉದಾಸೀನ ಅನ್ನುವ ಒ೦ದು ಆರೋಪ ಬಿಟ್ಟರೆ ಈತನಿಗೆ ಉಜ್ವಲ ಭವಿಷ್ಯವಿದೆ. ಬರೆಯುವ, ಕಲಿಯುವ, ಓದುವ ಹುಮ್ಮಸ್ಸಿದೆ, ಅದು ಸ೦ತೋಷದ  ವಿಷಯ.  ಬ್ಲಾಗಿಗೆ ಒ೦ದು ವರ್ಷ ತು೦ಬುತ್ತಿದೆ. ಬ್ಲಾಗೆ೦ಬುದು ಎಲ್ಲರಿಗೂ   ಹವ್ಯಾಸ. ವ್ಯಕ್ತಿಗತ ಬೆಳವಣಿಗೆಗೆ ಒ೦ದು ಚಿಮ್ಮುಹಲಗೆ ಅಷ್ಟೇ. ಇಲ್ಲಿ೦ದ ಎಲ್ಲೆಲ್ಲಿಗೋ ಲ೦ಘನ ಮಾಡಬಹುದು.  ಪರಿಚಯವ್ಯಾಪ್ತಿ ಹಿರಿದಾಗಿಸಿ ಕೊಳ್ಳಬಹುದು. ತನ್ನ ಅಭಿವ್ಯಕ್ತಿಯನ್ನು ಇತರರ ಮು೦ದಿಡುವ ಮೂಲಕ ಬರವಣಿಗೆಯ ಶೈಲಿ ಮತ್ತು  ವಿನ್ಯಾಸ ರೂಪಿಸಿಕೊಳ್ಳಲು ಸಾಧ್ಯ.  ಎಲ್ಲ ನಿಟ್ಟಿನಲ್ಲಿ ಮಹಾಬಲನ ಬ್ಲಾಗು ದಿನೇ ದಿನೇ ತನ್ನ ಮೌಲ್ಯವರ್ಧನೆ ಮಾಡಿಕೊಳ್ಳುತ್ತಿದೆ,  ಆತನ ಪ್ರತಿಭೆಯ ಪ್ರಕಾಶಕ್ಕೆ ಸೂಕ್ತ ವೇದಿಕೆ ಸಿಗಲಿ, ಹವ್ಯಾಸಕ್ಕೆ೦ದು ತೆರೆದ ಬ್ಲಾಗು ಅನವರತ ಜಾರಿಯಲ್ಲಿರಲಿ, ಉತ್ತಮ ಬರಹಗಳು ಬರಲಿ ಎ೦ಬುದಷ್ಟೇ  ನನ್ನ ಹಾರೈಕೆ.

ಪರಾಂಜಪೆ.ಕೆ.ಎನ್.

ಹಳಿ ಇಲ್ಲದ ರೈಲಿಗೆ ಒಂದುವರ್ಷದ ಸಂಭ್ರಮ
.
ಅಣ್ಣಾ ನಾನೂ ಬ್ಲಾಗ್ ಮಾಡಬೇಕೆಂದಿದ್ದೇನೆ ಅಂದ. ಹುಮ್.... ಮಾಡಪ್ಪ ಎಂದೆ. ಈ ಆಸಾಮಿ ಮಾಡುತ್ತೇನೆ ಅಂತ ಹೇಳದೇ ಇರುವ ಉದ್ಯೋಗ ಇಲ್ಲ. ಹಾಗಂತ ಸರಿಯಾಗಿ ಮಾಡಿದ ಉದ್ಯೋಗ ಯಾವುದೂ ಇಲ್ಲ. ಹಾಗೆ ಕೇಳಿಸಿಕೊಳ್ಳುವವರಿದ್ದರೆ ಮುಂದಿನ ಚುನಾವಣೆಗೆ ಎಂ.ಪಿ ಸ್ಥಾನಕ್ಕೆ ನಿಲ್ಲುತ್ತೇನೆ  ನಿನ್ನದೊಂದು ವೋಟು ಬೇಕು ಅನ್ನುವಷ್ಟರ ಮಟ್ಟಿಗೆ ಅವನ ಮಾತು ಮುಂದುವರೆಯುತ್ತದೆ. ಶುದ್ಧ ತಲೆಹರಟೆ. ಕೆಲವು ದಿನಗಳ ನಂತರ ಒಂದು ಲಿಂಕ್  ಕಳುಹಿಸಿದ. ಕರಾವಳಿ ರೈಲು. ಹೀಗೊಂದು  ಹೆಸರನ್ನ ಹೊತ್ತ ಬ್ಲಾಗಿನ ಲಿಂಕನ್ನ ಒಂದು ವರ್ಷದ ಹಿಂದೆ ಮಹಾಬಲಗಿರಿ  ನನಗೆ ಕಳುಹಿಸಿದ್ದ. ಇದರ ಹೆಸರೇ ವಿಚಿತ್ರ. ಕರಾವಳಿ ಅಲೆ, ಕರಾವಳಿ ಐಸ್ ಕ್ರೀಮ್. ಕರಾವಳಿ ಬಾರ್, ಕರಾವಳಿ ಹೋಟೆಲ್, ಹೀಗೆ ಕರಾವಳಿಯನ್ನ ತಮ್ಮ ಬ್ರಾಂಡ್ ನೇಮ್ ಮಾಡಿಕೊಂಡವರಿದ್ದಾರೆ. ಇದೆಂತಹದ್ದು ವಿಚಿತ್ರ ಕರಾವಳಿ ರೈಲು...!  ಕೊಂಕಣ ರೈಲು ಗೊತ್ತಿದೆ. ಕರಾವಳಿ ರೈಲು ಅಂತ ಹೊಸದು ಆರಂಭವಾಗಿದೆಯೋ ಅನ್ನುವ ಅನುಮಾನ ಆಯಿತು. ಕ್ಲಿಕ್ಕಿಸಿದರೆ ಗೆಳೆಯನ ಬ್ಲಾಗ್. ಚಂದದ ಬರಹಗಳಿದ್ದವು.
ಮೊದಲಿಗೇ ನಿದ್ರೆಯಬಗೆಗಿನ ಲೇಖನ. ಇದು ನಿದ್ರೆಯನ್ನ ಪ್ರೀತಿಸುವ ಇವನ ಮನನ್ಥಿತಿಗೆ ಸರಿ ಹೊಂದುವಂತಹದ್ದು. ಎಷ್ಟೋ ಬಾರಿ ಅವನಿಗೆ  ಉಗಿದು ಉಪ್ಪಿನಕಾಯಿ ಹಾಕಿದ್ದೇನೆ. ಆಲಸಿಯಾಗಿ ಕಾಲ  ಹರಣ ಮಾಡಬೇಡ ಮಹಾರಾಯಾ ಅಂತ. ಅಂದು ನಾನು ಅಂದುಕೊಂಡಿದ್ದೆ. ಅರಂಭಶೂರತ್ವದ ಮನಸ್ಥಿತಿಯವನಾದ ಈತ ಇನ್ನು ನಾಲ್ಕು ಐದು ಲೇಖನಗಳನ್ನೋ ಕವನವನ್ನೋ ಬರೆದು ಆನಂತರ ಕರಾವಳಿ ರೈಲೆಂಬ ಬ್ಲಾಗ್  ಅರಬಿಸಮುದ್ರದಲ್ಲಿ ಲೀನವಾಗಿಸಬಹುದೆಂದು. ಆದರೆ ನನ್ನೆಣಿಕೆ ಸುಳ್ಳಾಗಿಸಿದ್ದಾನೆ. ಒಂದು ಇಡೀ ವರ್ಷ ಬ್ಲಾಗ್ ನಲ್ಲಿ ಬಗೆಬಗೆಯ ಲೇಖನ, ಕಥೆ, ಕವನ, ಅಂತ ನಮ್ಮನ್ನ ರೈಲಿನಲ್ಲಿ ಕೂರಿಸಿಕೊಂಡು ಸುತ್ತಿಸಿದ್ದಾನೆ. ಮೊನ್ನೆ ಗೂಗಲ್ ಚಾಟಿನಲ್ಲಿ ಹೀಗೆ ಮಾತನಾಡುತ್ತ ಇರುವಾಗ ನೋಡೊ ನನ್ನ ಬ್ಲಾಗ್ ಆರಂಭಿಸಿ ವರುಷ ಆಯ್ತು ಅಂದ. ನಂಬಲಾಗಲಿಲ್ಲ. ಅದರೂ ನಿಜ. ಬಹುಬೇಗ ಎಕತಾನತೆಯಿಂದ ಉದ್ಯೋಗದಿಂದ ಉದ್ಯೋಗಕ್ಕೆ, ವೃತ್ತಿಯಿಂದ ವೃತ್ತಿಗೆ ಜಿಗಿಯುವ ಈತ ಒಂದು ವರ್ಷ ಬ್ಲಾಗಿಸಿದ್ದಾನೆಂದರೆ ಬಲು ಸಂತೋಷದ ವಿಚಾರವೇ ಸೈ. ಅದಕ್ಕಾಗಿಯೇ ಪ್ರೀತಿಯಿಂದ ಈ ನುಡಿಗಳನ್ನ ಬರೆಯುತ್ತಿದ್ದೇನೆ.
ಇನ್ನು ಬರೆಯವ ವಿಷಯಕ್ಕೆ ಬಂದರೆ ಗಟ್ಟಿ ವಿಷಯ ಅಥವಾ ಪ್ರಭುದ್ಧ ಲೇಖನಗಳು  ಕರಾವಳಿ ರೈಲಿನಲ್ಲಿ ಕಾಣಿಸಿಲ್ಲ. ಲೇಖನಗಳೆಲ್ಲವೂ ಒಂದು ಬಾರಿ ಓದಿಸಿಕೊಂಡು ಹೋಗುವಂತಹದ್ದು. ನಿತ್ಯ ಜೀವನದ ಘಟನೆಗಳನ್ನ ಹಿಡಿದಿಟ್ಟಿದ್ದಾನೆ. ಕವನಗಳೆಲ್ಲವೂ ಕೆಲವೊಮ್ಮೆ ಒಂದೇ ಶೈಲಿಯದಾದ್ದರಿಂದ ಬೋರು ತರಿಸುತ್ತದೆ. ಆದರೂ ಚಿತ್ರಗಳನ್ನಿಟ್ಟುಕೊಂಡು ಚಿತ್ರದ ಚೌಕಟ್ಟಿನೊಳಗೆ ಬರೆದಂತಹ ಕವನ ಕೆಲವೊಮ್ಮೆ ಇಷ್ಟ ಆಗದೇ ಇರಲಾರದು. ಸಮಯ ಸಂದರ್ಭಕ್ಕೆ ತಕ್ಕಂತೆ ಪದಗಳ ಬಳಕೆ ಕುಶಿಯನ್ನ ಕೊಡುತ್ತದೆ. ಹಗುರ ಹಾಸ್ಯ ಬಾಲ್ಯತನದ ನೆನಪು,  ಅವನದೇ ಶೈಲಿಯ ಕೆಲವು ಚಿಂತನೆಗಳು, ತಲೆಬರಹಗಳು, ಕೆಲವೊಮ್ಮೆ ಬಹಳ ನಗುವನ್ನ ತರಿಸುತ್ತದೆ. ಕೆಲವೊಮ್ಮೆ  ಸರಿಯಿಲ್ಲದ ಚನ್ನಾಗಿಲ್ಲದ ಲೇಖನಗಳಿಗೆ, ಕವನಗಳಿಗೆ, ನಾನು ನೇರವಾಗಿ ಚನ್ನಾಗಿಲ್ಲ ಅಂತ ಹೇಳಿದ್ದೇನೆ.  ಇನ್ನು ಕೆಲವೊಮ್ಮೆ ಸ್ನೇಹತನದ ಕಟ್ಟುಪಾಡಿಗೋಸ್ಕರ ಚೆನ್ನಾಗಿದೆ ಚೆನ್ನಾಗಿದೆ ಅಂತ ಹೇಳಿದ್ದೇನೆ. ನನ್ನಂತೆ ಬ್ಲಾಗ್ ಓದುಗರು ಮತ್ತು ಬ್ಲಾಗ್ ಬರಹಗಾರರೆಲ್ಲರೂ ಚನ್ನಾಗಿಲ್ಲದ ಬರಹಗಳಿಗೆ ಚನ್ನಾಗಿದೆ ಅನ್ನುವ ಮಾತನ್ನ ಮತ್ತು ಕಾಮೆಂಟನ್ನ  ಹಾಕುವದು ಎಲ್ಲರಿಗೂ ತಿಳಿದದ್ದೇ ಆಗಿದೆ. ಕರಾವಳಿ ರೈಲಿನಲ್ಲಿ ಇನ್ನಾದರೂ ಒಳ್ಳೆಯ ಗಟ್ಟಿ ಪ್ರಬುದ್ಧ ಅಧ್ಯಯನಶೀಲತೆಯಿಂದ ಬರೆದ ಲೇಖನಗಳು ಕವನಗಳು ಬರಲಿ ಅಂತ ನನ್ನ ಹಾರೈಕೆ ಮತ್ತು ನಿರೀಕ್ಷೆ.
ಇನ್ನು ಓದುವ ವಿಷಯಕ್ಕೆ ಬಂದರೆ. ದಿನದ ಬಹೆತೇಕ ಹೆಚ್ಚಿನ ಸಮಯವನ್ನ ಕಂಪ್ಯೂಟರ್ ಪರೆದಯ ಮೇಲೆ ಕಣ್ಣು ನೆಟ್ಟಿರುವ ಸಾಹಿತ್ಯಾಸಕ್ತರನ್ನ ಹಿಡಿದಿಡುವಲ್ಲಿ ಬ್ಲಾಗ್ ಎಂಬ ಮಾಯಾಜಾಲ ಸಫಲವಾದೀತೆ ಹೊರತು ಅದಕ್ಕೆ ಹೆಚ್ಚಿನ ತೆರೆದ ಓದುಗರ ಬಳಗವಿಲ್ಲ. ಇಂತಹ ವೇದಿಕೆ ಸೀಮಿತವಾದರೂ ಅಂಬೆಗಾಲಡುತ್ತಿರುವರಿಗೆ ಮತ್ತು ಪ್ರಾಥಮಿಕ ಹಂತದಲ್ಲಿ ಬರೆಯುತ್ತಿರುವವರಿಗೆ ಒಂದು ಅದ್ಭುತ ವೇದಿಕೆ. ಇದರ ಪ್ರಯೋಜನವನ್ನ ಪೂರ್ತಿಯಾಗಿ ಬಳಸಿಕೊಂಡು ಓದುಗನಿಗೆ ಹಿತವೆನಿಸುವದನ್ನ ಕೊಡುವ ಹೊಣೆಗಾರಿಕೆ ಬ್ಲಾಗಿಗರ ಮೇಲಿದೆ. ಕೆಲವೊಮ್ಮೆ ಕೆಲಸದ ವೇಳೆಯ ಮಧ್ಯದಲ್ಲಿ ಕಂಪ್ಯೂಟರ್ ಪರದೆಯ ಮೇಲೆ ಬರುವ ಕ್ಷಣಾರ್ಧದಲ್ಲಿ ಓದಿ ಮುಗಿಸುವ ಲೇಖನಗಳು ಉಪಯುಕ್ತವಾಗಿಯೂ ಕುಶಿಕೊಡುವಂತಹದ್ದಾಗಿದ್ದರೆ ಯಾರುತಾನೇ ಓದುವದಿಲ್ಲ. ಇಂತಹ ಲೇಖನಗಳು ಕವನಗಳು ಕರಾವಳಿ ರೈಲಿನಲ್ಲಿ ಬರಲಿ. ಕರಾವಳಿ ರೈಲು ನಿಲ್ಲದೇ ಚಲಿಸಲಿ ಅಂತ ನನ್ನ ಹಾರೈಕೆ.
ಉದಯ ಹೆಗ್ಡೆಎಲ್ಲರು ಓದಲಿ ಅಂತೆಲೇ ನಾನು ಬರೆಯುವದು.

ಹೀಗೊಂದು ಉಡಾಪೆಯ ಮಾತು ಅನಿಸಬಹುದು. ಅದರೆ ನಿಜವಾದದ್ದು. ಯಾರದ್ದೋ  ಪ್ರಭಾವದ ಸರಕನ್ನ ನನ್ನ ತಲೆಯಲ್ಲಿ ಬಟ್ಟಿ ಇಳಿಸಿ. ಒಂದು ಪ್ಯಾರ ನೀಟಾಗಿ ಬರೆಯದೆ. ಬರೆದ ಕೆಲವು ಕಾಗುಣಿತ ತಪ್ಪಿರುವ ಅಕ್ಷರವನ್ನ ಎಗ್ಗಿಲ್ಲದೇ ಬ್ಲಾಗಿನಲ್ಲಿ ಹರಿದುಬಿಡುತ್ತೇನೆ. ಇಣುಕಿದವರೆಷ್ತ್ಟೆಂದು ನೋಡುತ್ತೇನೆ. ಕಾಮೆಂಟು ಎಷ್ಟಾಯಿತೆಂದು ಲೆಕ್ಕ ಹಾಕ್ತೇನೆ. ಫಲೊವರ್ಸ್ಎಷ್ಟು  ಆಗಿದ್ದಾರೆ  ಅಂತ ದಿನಾ ದಿನಾ ಲೆಕ್ಕ ಇಟ್ಗೊಂಡಿರ್ತೇನೆ. ಭಟ್ರೇ ನಿಮ್ಮ ಬರವಣಿಗೆ ಚನ್ನಾಗಿದೆ ಅಂದ್ರೆ ಸಂತಸದಿಂದ ಒಂದು ಕಪ್ಪು ಟೀ ಹೆಚ್ಚು ತರ್ಸ್ಕೊಂಡು ಕುಡಿಯುತ್ತೇನೆ. ಬಜ್ ನಲ್ಲಿ, ಪೇಸ್ ಬುಕ್ಕಿನಲ್ಲಿ, ಕಂಡ ಕಂಡ ಸ್ಥಳದಲ್ಲಿ ನನ್ನ ಲಿಂಕನ್ನ ಹಾಕುತ್ತೆನೆ. ಅಂಟಿಸ್ತೇನೆ. ಗೆಳೆಯರಿಗೆ ಓದಿ ಅಂತ ದುಂಬಾಲು ಬೀಳ್ತೇನೆ. ಇಂತಿರ್ಪ ನಾನು ಎಲ್ಲರೂ ಓದಲೀ ಅಂತಲೇ ಅಲ್ಲವೇ ಬ್ಲಾಗಿನಲ್ಲಿ ಬರೆಯುವದು...?  ಹಾಗೆಂದು ಹೇಳಿ ಕೊಂಡರೆ ತಪ್ಪಾಗಲಾರದು. ಒಂದು ಸತ್ಯವನ್ನ ಹೇಳುತ್ತಿದ್ದೇನೆಂಬ ಸಂತೋಷ ನನಗಿದೆ. ಓದುವದು ಬಿಡುವದು, ಮೆಚ್ಚುವದು ನೆಚ್ಚುವದು, ನಿಮಗೆ ಬಿಟ್ಟದ್ದಾದರೂ ನಾನು ಮಾತ್ರ ಎಲ್ಲರೂ ಓದಲಿ ಅಂತೆಲೇ ಬರೆಯುವದು.
ಬಾಲಭಾಷೆಗಳು, ತಪ್ಪುಗಳು, ವಿಷಯಾಭಾಸಗಳು,ಅಶುದ್ಧ ಪ್ರಯೋಗ, ಕವನ ಅಂತ ತಲೆಬರಹ ಕೊಟ್ಟು ಬರೆದ ಪ್ರಲಾಪಗಳು, ಕಥೆ ಅಂತ ಕರೆದ ಚಿಂತಾಜನ ಸರಕುಗಳು, ಹಾಸ್ಯ ಅಂತ ಹೇಳಿ ದುಖಃ ವನ್ನ ಬರಿಸಿದ್ದು. ಇದೆಲ್ಲವೂ ನನ್ನ ಒಂದು ವರ್ಷದ ಬ್ಲಾಗ್ ಲೋಕದ ಸ್ಥೂಲ ಪರಿಚಯ. ಇದೆಲ್ಲವನ್ನ ಮೆಚ್ಚಿ, ಅಹುದೌದೆಂದು ತಲೆಯಾಡಿಸಿ ಸೂಪರ್ ಗುರ್ವೆ ಅಂದು ಬೆನ್ನು ತಟ್ಟಿದ್ದೀರಿ. ಅದು ನಿಮ್ಮ ದೊಡ್ಡತನ. ನಿಮ್ಮ ದೊಡ್ಡ ತನದ  ಮುಂದೆ ನಾನೆಂದೂ ಚಿಕ್ಕವನೆ. ನನ್ನ ಅಧಿಕಪ್ರಸಂಗವನ್ನ ಸಹಿಸಿದ್ದಕ್ಕೆ ನಿಮಗಲ್ಲರಿಗೂ ಧನ್ಯವಾದಗಳು.


ಪ್ರೀತಿಯಿಂದ ನಿಮ್ಮವ

ಮಹಾಬಲಗಿರಿ ಭಟ್
17 comments:

 1. Congratulations Mahabalaravare.. ನಿಮ್ಮ ಬರವಣಿಗೆ ವರ್ಷಾನು ವರ್ಷ ಹೀಗೆ ಮುಂದುವರಿಯಲಿ ಎಂದು ಆಶಿಸುವೆ!

  ReplyDelete
 2. ಹೇಳುವುದನ್ನೆಲ್ಲಾ ಪರಾಂಜಪೆಯವರು ಗುತ್ತಿಗೆ ಹಿಡಿದಹಾಗೇ ಹೇಳಿಬಿಟ್ಟಿದ್ದಾರೆ, ಇನ್ನೇನಿದ್ದರೂ ಶುಭ ಹಾರೈಕೆಗಳು ಮಾತ್ರ, ಒಮ್ಮೆ ಆರ್ಕುಟ್ ನಲ್ಲಿ ಅನಿರೀಕ್ಷಿತವಾಗಿ ಮಾಹಾಬಲಗಿರಿ ಭಟ್ ಎಂಬ ವ್ಯಕ್ತಿ ಸ್ನೇಹಾಕಾಂಕ್ಷಿಯಾಗಿ ಬಂದುದು ಕಂಡಿತು, ಅಸ್ತು ಎಂದೆ, ಮರುಕ್ಷಣ ಆನ್ ಲೈನ್ ನಲ್ಲಿದ್ದ ಮಹಾಬಲ ನಿಧಾನವಾಗಿ ಅಲ್ಲೇ ಚಾಟ್ ಶುರುಮಾಡಿದ್ದೂ ಆಯ್ತು. ನಮ್ಮೂರಿಗೆ ಒಂದೆರಡು ಕಿಲೋಮೀಟರು ದೂರದ ಊರಿನ ಈ ಹುಡುಗ ಬರೆಯಲು ತೊಡಗಿದ್ದೂ ತಿಳಿಯಿತು, ಹೆಚ್ಚೇನೂ ಹೇಳದೇ 'ಮಹಾಬಲ' ಶಾಲಿಯಾಗಿ 'ಗಿರಿ'ಯಾಗಿ ನಿಲ್ಲಲಿ ಎಂದು ಹಾರೈಸುತ್ತೇನೆ.

  ReplyDelete
 3. Mahabala avare!!
  all the very best to you.
  :-)
  malathi S

  ReplyDelete
 4. ನಿಮ್ಮ ಎಗ್ಗಿಲ್ಲದೆ ಸಾಗುವ ಕರಾವಳಿ ರೈಲಿ ಗೆ ಒಂದು ವರ್ಷದ ಕೂಸಿಗೆ ಹುಟ್ಟು ಹಬ್ಬದ ಶುಭಾಶಯಗಳು... ಅನಾನೆಕ ವಿಷಯಗಳ ಜೊತೆಯ ನಿಮ್ಮ ಬರಹಗಳನ್ನು , ಚಿತ್ರದ ಜೊತೆಯ ನಿಮ್ಮ ಕವನಗಳನ್ನು ನಮ್ಮೆಲ್ಲರ ಮುಂದೆ ಸಾಗಿಸಿ ತಂದು...
  ನಿಲ್ಲಿಸಿ, ಮತ್ತೆ ನಮ್ಮ comment ಗಳನ್ನೂ ನಿಮ್ಮ ಮುಂದೆ ಕೊಂಡೊಯ್ಯೋ ಇ ರೈಲಿಗೆ ದನ್ಯವಾದಗಳು...ನಿಮ್ಮ ಬರವಣಿಗೆ ಹೀಗೆ ಸಾಗಲಿ.

  ReplyDelete
 5. Congratulations. Good wishes for the 2nd year

  ReplyDelete
 6. ಹುಟ್ಟುಹಬ್ಬದ ಶುಭಾಶಯಗಳು. ನೀವು ರೈಲು ಬಿಡತಾ ಇರಿ. ನಿಮ್ಮ ರೈಲಿನಲ್ಲಿ ನಾವೆಲ್ಲ ಉಲ್ಲಾಸಪಯಣ ಮಾಡ್ತಾ ಇರ್ತೀವಿ!

  ReplyDelete
 7. ಹುಟ್ಟುಹಬ್ಬದ ಶುಭಾಶಯಗಳು...

  ReplyDelete
 8. ಧನ್ಯವಾದಗಳು
  Pradeep Rao
  ವಿ.ಆರ್.ಭಟ್
  malathi S.
  Ar.Nagashree,
  GB.
  ಮನಮುಕ್ತಾ
  umesh desai
  sunaath
  ಸುಮ
  ಸುಬ್ರಮಣ್ಯ ಮಾಚಿಕೊಪ್ಪ
  Digwas hegde

  ReplyDelete
 9. mahabalagiribhat,ravare,shubhahaaraikegalu.

  ReplyDelete
 10. ಅರೆರೆ...ಏನಿದು ಮಹಾಬಲರೇ..? ಹೇಗೆ ಮಿಸ್ ಹೊಡೀತು..ಮನದಾಳದ ಶುಭಾಶಯಗಳು..ವರ್ಷತುಂಬಿದ ಕೂಸಿಗೆ..ಮಹಾಬಲರೇ ನಿಮ್ಮ ಲೇಖನಗಳು (ನೀವಂದುಕೊಂಡದ್ದೇ ನಾವೂ ಓದಿದ್ದು ಅಂದ್ರೆ ನಿಮಗೆ ಇನ್ನೂ ಖುಷಿ ಆಗುತ್ತೆ ಅಲ್ವಾ?..ಖಂಡಿತ ಹಾಗೇ ಆಗಿದೆ)ನಮಗೆ ಮುದ ನೀಡಿದ್ವು, ವಿಚಾರಕ್ಕೆ ತಳ್ಳಿದ್ವು, ನಗಿಸಿದ್ವು ಎಲ್ಲಾ...ಹಾಗಾಗಿ..ನಿಮ್ಮ ಚಿಕ್ಕ-ಬುಕ್ಕು ನಡೆಯಲಿ ಮುನ್ನಡೆಯಲಿ ಎಂದೇ ನಮ್ಮ ಎಲ್ಲರ ಹಾರೈಕೆ....ಅಭಿನಂದನೆಗಳು ಮತ್ತೊಮೆ.

  ReplyDelete
 11. ನಿಮ್ಮ ಬ್ಲಾಗ್ ಹುಟ್ಟುಹಬ್ಬದ ಶುಭಾಶಯಗಳು... :)

  ReplyDelete