Friday, July 22, 2011

ಬೀಚಿಯವರ ಬೊಂಬಾಯಿ ಮತ್ತು ನಿರೋಧ್ ಬಲೂನು


ತಲೆಬರಹವನ್ನ ಓದುವ ಹೊತ್ತಿಗೆ ವಯಸ್ಕರು ಮಾತ್ರ ಓದಬಹುದಾದಂತ ಲೇಖನ ಅಂತ ನೀವು ನಿರ್ಧರಿಸಿರುತ್ತೀರಿ. ಬೀಚಿಯವರ ಆತ್ಮ ಚರಿತ್ರೆ ನನ್ನ ಭಯಾಗ್ರಪಿ ಅನ್ನುವ ಪುಸ್ತಕದಲ್ಲಿ ಬೊಂಬಾಯಿ ಅನ್ನುವ ಹತ್ತೊಂಬತ್ತನೆ ಅಧ್ಯಾಯವಿದೆ. ಆ ಅಧ್ಯಾಯದ ಪೂರ್ಣ ಪಾಠವನ್ನ ನಾನು ನಿಮಗಿಂದು ಹೇಳಬೇಕಾಗಿದೆ. ಮತ್ತು ನನ್ನದೇ ಆದ ಭಯಂಕರ ಭಯಾಗ್ರಪಿ ಯಿಂದ ಹೆಕ್ಕಿದ ಇನ್ನೋದು ಘಟನೆಯನ್ನ ಕೂಡ ಇಲ್ಲಿ ಹೇಳಿಬಿಡುತ್ತೇನೆ. ಮೊನ್ನೆ ಪರಾಂಜಪೆಯವರ ಮನೆಗೆ ಪುಸ್ತಕಾರ್ಥಿಯಾಗಿ ಹೋಗಿದ್ದೆ. ಕನ್ಯಾರ್ಥಿಯಾಗಿ ಬಂದ ಅಳಿಯನಿಗೆ ತುಂಬುಜವ್ವನೆಯಾದ ಹುಡುಗಿಯನ್ನ ಕೊಟ್ಟು ಅದರೊಟ್ಟಿಗೆ ಧನ ಕನಕ ವಸ್ತು ವಾಹನ ಸೈಟ್ ಸೂಟು ಬೂಟುಗಳನ್ನ ಕೊಡುವದಿಲ್ಲವೇ ಹಾಗೆ ಪುಸ್ತಕಾರ್ಥಿಯಾದ ನನಗೆ  ಪರಾಂಜಪೆಯವರು ಕೊಟ್ಟ ಕೆಲವು ಓದಲೇ ಬೇಕಾದ ಪುಸ್ತಕಗಳಲ್ಲಿ  ಹಾಸ್ಯ ಬ್ರಹ್ಮನ ಭಯಾಗ್ರಪಿಯೂ ಒಂದು. ಹಾಸ್ಯ ಬ್ರಹ್ಮನ ಜೀವನ ಚರಿತ್ರೆಯಲ್ಲಿ ಹಾಸ್ಯಕ್ಕೆ ಕಡಿಮೆಯೇ..? ಅಲ್ಲದೇ ನೋವು, ನಲಿವು, ನಗು, ಎಲ್ಲವೂ ಇದೆ. ಪುಸ್ತಕವು ಓದಿಸಿಕೊಂಡು ಹೋಯಿತು. ಇಷ್ಟವಾಯಿತು ಕೂಡ.

ನನ್ನ ದೃಷ್ಟಿಯಲ್ಲಿ ಮಕ್ಕಳನ್ನ ಹೊಡೆಯುವದು ಮಹಾಪರಾಧ ಮತ್ತು ಅಷ್ಟೇ ಅಕ್ಷಮ್ಯ ಅಪರಾಧ ಹೀಗೆ ಸಾಗುತ್ತದೆ ಬೀಚಿಯವರ ಸಾಲುಗಳು. ಮಕ್ಕಳನ್ನ ಹೊಡೆಯುವದನ್ನ ಅವರು ಎಂದೂ ಸಹಿಸಲಾರರು. ಕೆಲವೊಮ್ಮೆ ದಾರಿಯ ಮಧ್ಯದಲ್ಲಿ ಪೋಷಕರು ಮಕ್ಕಳನ್ನ ಹೊಡೆದರೆ ಮಧ್ಯೆ ಬಾಯಿಹಾಕಿ ಪೋಷಕರಿಂದ ಬೈಗುಳವನ್ನ ತಿನ್ನುವದು ಅವರಿಗೆ ಹೊಸದೇನಲ್ಲ. ಹಾಗೆ ಕಾದಾಡಿ ಅಧಿಕ ಪ್ರಸಂಗಿ ಅನ್ನಿಸಿಕೊಂಡ ಸಂದರ್ಭಗಳೂ ಬಹಳ.
ಇದೆಲ್ಲವೂ ತನ್ನ ಬಾಲ್ಯದ  ವೈಪರೀತ್ಯದ ಪರಿಣಾಮವೆನ್ನುತ್ತಾರೆ ಬೀಚಿಯವರು. ಹುಟ್ಟಿದ ವರ್ಷಕ್ಕೆ ತಂದೆಯವರನ್ನ ಕಳೆದು ಕೊಂಡರು. ಅರೇಳು ವರ್ಷಕ್ಕೆ ತಾಯಿಯನ್ನೂ ಕಳೆದುಕೊಳ್ಳಬೇಕಾಯಿತು. ಅವರ ಅತ್ತೆಯ ಮನೆಯಲ್ಲಿ ಬೆಳೆಯುವ ಪರಿಸ್ಥಿತಿ ಬಂದಿತು. ಅತ್ತೆಯ ಗಂಡ ಮಾವನಾದರೋ ಶೀಘ್ರ ಕೋಪಿಗಳು. ಯಾಕೆ ತಪ್ಪುಮಾಡಿದೆ ಅನ್ನುವುದನ್ನ ಕೇಳಿ ಆಮೇಲೆ ಹೊಡೆಯಬೇಕೆನ್ನುವ ಪರಿಜ್ನಾನವೂ ಕೂಡ ಇಲ್ಲದವರು. ಹೆಡ್ ಜೈಲರ್ ಆಗಲು ಯೋಗ್ಯರಾದವರು ತನ್ನ ಪೋಷಕರಾದುದು ದುರ್ದೈವ ಅನ್ನುತ್ತಾರೆ ಬೀಚಿಯವರು. ಅದೆಲ್ಲದರ ಪರಿಣಾಮದಿಂದಾಗಿ ಮಕ್ಕಳನ್ನ ಹೊಡೆಯುವದನ್ನ ಅವರು ಸಹಿಸುತ್ತಿರಲಿಲ್ಲ.

ಬೀಚಿಯವರು ಮದ್ರಾಸಿನಲ್ಲಿರುವಾಗ ಇಂತಹದೇ ಅಪರಾದವೊಮ್ಮೆ ಅವರ ಹೆಂಡತಿಯಿಂದ ಆಯಿತು. ಅನಾಮತ್ತಾಗಿ ನಾಲ್ಕುವರ್ಷದ ಮಗನಿಗೆ ಅವನ ತಾಯಿ,ಅಂದರೆ ಬೀಚಿಯವರ ಹೆಂಡತಿ ಹೊಡೆದುಬಿಟ್ಟಿದ್ದಳು. ಅದರ ಹಿಂದಿನ ಘಟನೆ ತುಂಬ ಮಜವಾಗಿದೆ .

ಕೆಲವು ಅಶ್ಲೀಲ ಶಬ್ಧಗಳನ್ನ ಮಕ್ಕಳು ಮನೆಯಲ್ಲಿ  ಆಡಬಾರದೆಂದು ನಿಯಮ. ಮಹಾ ಅಪರಾಧ ಕೂಡ ಹೌದು. ಅವರ ಮಗನಿಗೆ ಮೂತ್ರ ಮಾಡುವ ಅಂಗಕ್ಕೆ (ಶಿ.....) ಬೊಂಬಾಯಿ ಅಂತ ಕಂಠಪಾಟ ಮಾಡಿಸಲಾಗಿತ್ತು. ಅವನು ಉರಿಮೂತ್ರವಾದಾಗ ಬೊಂಬಾಯಿ ಉರಿಯುತ್ತದೆ ಅನ್ನುತ್ತಿದ್ದ.

ಒಮ್ಮೆ ಅವರ ರಡಿಯೋ  ನಾಟಕದಲ್ಲಿ ಅಭಿನಯಿಸುತ್ತಿದ್ದ ರಂಭಾ ಅನ್ನುವ ಕನ್ನಡದವರೊಬ್ಬರು  ಪರಿಚಯವಾದರು. ಹೆಣ್ಣುಮಗಳು ತನ್ನ ತಾಯಿಯೊಡನೆ ಆಗಾಗ ಅವರ ಮನೆಗೆ ಬರುತ್ತಿದ್ದರು. ಹೀಗೆ ಒಂದುದಿನ ರಂಭಾ  ಅವರ ತಾಯಿಯೊಡನೆ ಬೀಚಿಯವರ ನೆಗೆ ಬಂದಾಗ ಬೀಚಿಯವರು ಮನೆಯಲ್ಲಿರಲಿಲ್ಲ. ಆಮೇಲೆ ಮನೆಗೆ ಬಂದರು. ಬರುತ್ತಿದ್ದಂತೆ ಅಳುತ್ತಿರುವ ಮಗನನ್ನ ನೋಡಿದರು. ಅವನನ್ನ ಎಷ್ಟು ಸಂತೈಸಿದರೂ ಸುಮ್ಮನಾಗಲಿಲ್ಲ. ಬಹಳ ಹೊತ್ತು ರಮಿಸಿ ಕೇಳಿದಾಗ ಅಮ್ಮ ಹೊಡೆದಳು ಅನ್ನುವ ಉತ್ತರ ಬಂತು.

ಬಂದವರ ಎದುರಿಗೇ ಹೆಂಡತಿಯನ್ನ ಯಾಕೆ ಹೊಡೆದಿ ಅಂತ ಸಿಟ್ಟಿನಲ್ಲಿಯೇ ಕೇಳಿದರು.
ಅವನನ್ನೇ ಕೇಳ್ರಿ ಏನು ಮಾಡಿದನೆಂದು
ಅನ್ನುವ ಉತ್ತರ ಅವರ ಹೆಂಡತಿಯಿಂದ ಬಂತು.
ಬೀಚಿಯವರ ಕೋಪ ಕುದಿಯುತ್ತಲೇ ಇತ್ತು. ಮತ್ತೆ ಕೇಳಿದರು
ಏನುಮಾಡಿದ ನೀನೆ ಹೇಳು
ಅಂತ ನಿಂತಲ್ಲೇ ಗುಡುಗಿಕೊಂಡರು.
ಆಮೇಲೆ ಹೇಳ್ತೀನಿ
ಎಂದು  ಹೇಳಿ ಅವರ ಹೆಂಡತಿ ಅಥಿತಿಗಳ ಸತ್ಕಾರದಲ್ಲಿ ತೊಡಗಿಕೊಂಡಳು. ಅಥಿತಿಗಳು ಹೋದನಂತರ ವಿಚಾರಿಸಿಕೊಂಡರಾಯಿತು ಅಂತ ಕಾಯ್ದು ಕುಳಿತರು ಬೀಚಿಯವರು. ಅಥಿತಿಗಳು ಗೇಟನ್ನ ದಾಟಿದ್ದೇ ತಡ ಬೀಚಿಯವರ ವಿಚಾರಣೆ ಆರಂಭವಾಯಿತು.
ಇವನೇನು ಮಾಡಿದ ಯಾಕೆ ಹೊಡೆದೆ.....?
ಅದು ಇದು ಕಷ್ಟ ಸುಖ ಮಾತನಾಡುತ್ತ ರಂಭೆ ಬೀಚಿಯವರ ಹೆಂಡತಿಯಲ್ಲಿ ಹೇಳಿದಳಂತೆ.
ನಮ್ಮ ಪುಣ್ಯ ಇತ್ರಿ ಮದ್ರಾಸು ನೋಡಿದೀವಿ. ಇನ್ನು ಬೊಂಬಾಯಿ ಒಂದು ನೋಡಬೇಕು
ಇಲ್ಲಿ ಇದೆ ನೋಡು ಬೊಂಬಾಯಿ

ಅಂತ ಚೆಡ್ಡಿ ಎತ್ತಿ ತೋರಿಸಿಯೇ ಬಿಟ್ಟನಂತೆ ಬೀಚಿಯವರ ಮಗ J
ಪಾಪ ಮಕ್ಕಳಿಗೇನು ಗೊತ್ತಿರುತ್ತದೆ ಹೇಳಿ...? ಇಲ್ಲಿ ತಪ್ಪು ಒಪ್ಪು ಯಾರದ್ದು ಅನ್ನುವದನ್ನ ನೀವೇ ಲೆಕ್ಕ ಹಾಕಿಕೊಳ್ಳಿ.

ಅಥ ಬೀಚಿ ಭಯಾಗ್ರಪಿ ಮಧ್ಯೆ ಎಕೋನ ವಿಂಶತಿ ಅಧ್ಯಾಂಯಂ ಸಂಪೂರ್ಣಮ್!!ಬೀಚ್ಯಾರ್ಪಣಮಸ್ತು !!

ಅಥ ನನ್ನ ಭಯಂಕರ ಭಯಾಗ್ರಪಿ ಮದ್ಯೇ ಇಂತಹದೇ ಒಂದು ಪ್ರಸಂಗಮ್ ಆರಂಭಮ್   !!
ನನ್ನ ಪರಿಚಯಸ್ತರೊಬ್ಬರು. ದೋ.ಘ.ನಾ ಅಂತಿರಲಿ.ನಮ್ಮ ದೋ.ಘ.ನಾ ರವರು ಮಕ್ಕಳನ್ನ ದ್ವೇಷಿಸುವವರೋ ಅಥವಾ ಪ್ರೀತಿಸುವವರೋ ನಾನು ಅವರಬಗ್ಗೆ ಅಷ್ಟೊಂದು ಅಧ್ಯಯನ ಮಾಡಿದವನಲ್ಲ. ಹಾಗಂತ ಮನೆಯಲ್ಲಿದ್ದ ಮಕ್ಕಳಿಗೆ ಯಾವತ್ತೂ ಕಡ್ಡಿಪೆಪ್ಪರಮೆಂಟನ್ನ ತಂದು ಕೊಡಲು ಮರೆತವರಲ್ಲ. ಹೀಗೆ ಯಾವಗಲೂ ತಾವು ಪ್ಯಾಟೆಗೆ ಹೋದಾಗ ದಿನಸಿ ಸಾಮಾನಿನ ಚೀಲದಲ್ಲಿ ಯಾವಾಗಲೂ ತಲಾ ಎರಡೆರಡು ಕಡ್ಡಿ ಪೆಪ್ಪರಮಿಟಾಯಿ ತಂದೇ ತರುತ್ತಿದ್ದರು. ಅಪ್ಪ ಪೇಟೆಯಿಂದ ಬಂದಕೂಡಲೇ ದಿನಸಿ ಚೀಲವನ್ನ ಹುಡುಕಿ ಚಾಕಲೇಟನ್ನ ತೆಗೆದುಕೊಂಡು ಕುಶಿಯಿಂದ ಚಾಕಲೇಟಿನ ಸವಿಯನ್ನ ತಾಸುಗಟ್ಟಲೆ ನೀರಾಗದಂತೆ ನಾಲಿಗೆಯನ್ನ ನಿಧಾನವಾಗಿ ತಾಗಿಸಿ ತಾಗಿಸಿ ಅಂತೂ ಇಂತೂ ಚಾಕಲೇಟು ಮುಗಿದಮೇಲೂ ಕಡ್ಡಿಯ ಬುಡದಲ್ಲಿ ಅಂಟಿಕೊಂಡ ಸಿಹಿಯನ್ನ ನೆಕ್ಕಿಯಾದಮೇಲೆಯೇ ಬೀಸಾಕುತ್ತಿದ್ದರು. ಇಂತಿರ್ಪ ಸಂದರ್ಭದೊಳ್ ಒಂದಿನಾ.... ಎಂದಿನಂತೆಯೆ ದೋ.ಘ.ನಾ. ರವರು ಪ್ಯಾಟೆಯಿಂದ ಮನೆಗೆ ಬಂದವರೇ ತಮ್ಮ ಕೈಚೀಲವನ್ನ ಮನೆಯ ಹೊಳ್ಳಿಮೇಲೆ ಇಟ್ಟು (ಹೊರಜಗುಲಿ) ಯಾವುದೋ ಅರ್ಜೆಂಟ್ ಕೆಲಸದಮೇಲೆ ಹೊರಗೆ ನಡೆದರು. ಹಾಗೆ ಮಕ್ಕಳು ಎಂದಿನ ಅಭ್ಯಾಸದಂತೆ ಚೀಲವನ್ನ ತಡಕಾಡಿದರು. ಅವರಿಗೆ ಇಂದು ಡಬಲ್ ಧಮಾಕ ಕಾದಿತ್ತು. ಪೆಪ್ಪರಮೆಂಟ್ ಜೊತೆಗೆ ನಾಲ್ಕಾರು ಬಲೂನ್ ಗಳು ಇದ್ದವು( ವಯಸ್ಕರು ಉಪಯೋಗಿಸುವ ಬಲೂನು) ಮಕ್ಕಳಿಗೇನು ಗೊತ್ತು ಪಾಪ..?  ಅವರು ಇವತ್ತು ಚಾಕಲೇಟ್ ಜೊತೆಗೆ ಆಟ ಆಡಲಿಕ್ಕೆ ಬಲೂನ್ ಗಳನ್ನ ಕೂಡ ತಂದಿದ್ದಾರೆಂದು ನಂಬಿ, ಅದಕ್ಕೆ ಗಾಳಿಯನ್ನ ತುಂಬಿ ವಾಲಿಬಾಲಿನಂತೆ ಅತ್ತ ಇತ್ತ ಹಾರಿಸುತ್ತ ಆಟ ಆಡತೊಡಗಿದರು.

 ದೋ..ಘ.ನಾ. ರವರು ಕೆಲಸವನ್ನ ಮುಗಿಸಿಕೊಂಡು ಹಿಂತಿರುಗಿ ಬರುವಾಗ ದಾರಿಯಲ್ಲಿ ನಾನು ಸಿಕ್ಕಿದೆ. ಬಾ ಮಹಾರಾಯಾ ಮನೆಗೆ ಅಂದರು. ನನಗೂ ಸಾಯಂಕಾಲ ಸುದ್ದಿಹೇಳಿಕೊಂಡು ಒಂದು ಕಪ್ ಚಹಾ ಹೀರುವದು ಬೇಕಾಗಿತ್ತು. ಹೀಗೆ ನಾವಿಬ್ಬರೂ ಅದು ಇದು ಮಾತನಾಡುತ್ತ ಅವರ ಮನೆಯತ್ತ ನಡೆದೆವು. ಹಾಗೆ ಮನೆಯಂಗಳವನ್ನ ಪ್ರವೇಶಿಸಿದ ಕೂಡಲೆ ಬಲೂನಿನೊಟ್ಟಿಗೆ ಆಡುತ್ತಿರುವ ಮಕ್ಕಳನ್ನ ನೋಡಿ ದೋ.ಘ.ನಾ ರವರು ಧಿಗಿ ಧಿಗಿ ಉರಿವ ಕೆಂಡದಂತಾಗಿ ಅದರ ಪರಣಾಮದಿಂದ ತಲಾ ನಾಲ್ಕೈದು ಪೆಟ್ಟು ಮಕ್ಕಳ ಕುಂಡೆಯನ್ನ ಸೇರಿದವು. ಒಂದಿಲ್ಲೊಮ್ಮೆಲೆ ಬಿದ್ದ ಪೆಟ್ಟಿಗೆ ಗಾಬರಿಯಾದ ಮಕ್ಕಳು ಮುಗಿಲು ಮುಟ್ಟುವ ತನಕ ಚೀರಿಕೊಂಡವು. ಒಳಮನೆಯಲ್ಲಿ ಅಡುಗೆ ಕೆಲಸದಲ್ಲಿ ಮಗ್ನಳಾದ ತಾಯಿಯು ಚೀರಾಟವನ್ನ ಕಂಡು ಹೊರಗೆ ಓಡೋಡಿ ಬಂದಳು. ಆಗ ದೋ.ಘ.ನಾ ರವರು ಅಲ್ಲಲ್ಲಿ ಬಿದ್ದ ಬಲೂನನ್ನ ಹೆಕ್ಕಿ ಆಯ್ದುಕೊಳ್ಳುತ್ತಿರುವದನ್ನ ನೋಡಿ ಪರಿಸ್ಥಿತಿಯು ಏನೆಂಬುದಾಗಿ  ಅರ್ಥಮಾಡಿಕೊಂಡಳು. ನಾನು ಬೆಪ್ಪುತಕಡಿಯಂತೆ ಸುಮ್ಮನೆ ನಿಂತುಕೊಂಡಿದ್ದೆ. ಮಕ್ಕಳು ಈಗ ಓಡುತ್ತ ಅಮ್ಮನ ಮಡಿಲನ್ನ ಸೇರಿದವು. ಅನಿರೀಕ್ಷಿತವಾಗಿ ಅಮ್ಮನಿಂದಲೂ ತಲಾ ಎರಡೆರಡು ಪೆಟ್ಟು ಮಕ್ಕಳ ಅಂಡಿನ ಮೇಲೆಯೇ ಬಿದ್ದವು. ಮಕ್ಕಳಿಗೆ ಯಾಕೆ ಹೊಡೆಯುತ್ತಿದ್ದಾರೆಂಬ ಕಾರಣವು ತಿಳಿಯದೆ ಪೆಚ್ಚಾದವು. ಅಳುತ್ತಾ ಒಳಸೇರಿಕೊಂಡವು.
ಈಗ ದೋ. ಘ.ನಾ.ರವರ ಕೊಪದ ಸರದಿ ಹೆಂಡತಿಯ ಮೇಲೆ ತಿರುಗಿತು .

ನಿನ್ಗೆ ಗೊತ್ತಾಯ್ದಿಲ್ಯನೇ ಮಕ್ಕಳಿಬ್ಬರು ಅದನ್ನ ತೆಗೆದುಕೊಂಡು ಆಟ ಆಡುತ್ತ ಇರುವವರೆಗೂ ನೀನು ಯಂತಾ ಮಡ್ತಾ ಇದ್ದೆ ಮಂಗಳಂತವಳೇ ?
 ಅಂತ ಹೆಂಡತಿಗೆ  ಉಗಿಯ ತೊಡಗಿದರು.
ಹೌದ್ರ ನಿಂಗ ಅದನ್ನ ಚೀಲದಲ್ಲಿ ಇಟ್ಟಿರಿ ಹೇಳಿ ನನ್ಗೇನು ಕನ್ಸನ್ರಾ...?
ನಿಂಗ ಯಂತಾ ಹೆಡ್ರು ಹೇಳಿ ನಂಗೆ ಗೊತ್ತಾಯ್ದಿಲ್ಲೆ

 ಅನ್ನುತ್ತ ನನ್ನ ಮುಖವನ್ನ ನೋಡಿ ನಗೆಯಾಡ ತೋಡಗಿದರು, ನಾನೂ ನಗದೆ ಇನ್ನೇನೂ ಹೇಳುವ ಪರಿಸ್ಥಿತಿಯಲ್ಲೇ ಇಲ್ಲವಾಗಿದ್ದೆ. ಬೆಪ್ಪ ತಕಡಿಯ ತರಹ ನಾನೂ ನಕ್ಕೆ. ದೋ.ಘ. ನಾ ರವರೂ ಅಷ್ಟು ಹೊತ್ತಿಗೆ ತಮ್ಮ ತಪ್ಪಿನ ಅರಿವಾಗಿ ಪ್ರಸನ್ನ ಮುಖರಾಗಿದ್ದರು.

ಆದರೆ ಮಕ್ಕಳು ಮಾತ್ರ ಅಳುತ್ತಿದ್ದರು. ಎಲ್ಲವೂ ಅಯೋಮಯ. ಹೊಡೆದಿದ್ಯಾಕೆ. ಈಗ ನಗುವದ್ಯಾಕೆ ಯಾವುದನ್ನೂ ಅವರು ಅರ್ಥೈಸಲಾಗದ ಸ್ಥಿತಿಯಲ್ಲಿ  ಒಳಗಡೆ ಬಿಕ್ಕುತ್ತಾ ಕುಳಿತಿದ್ದವು.
ಇತಿ ನಿರೊಧ್ ಬಲೂನಾಯಣಂ ಸಂಪೂರ್ಣಮ್!!
ಶ್ರೀ ಬ್ಲಾಗಾರ್ಪಣಮಸ್ತು.....!

15 comments:

 1. hmmm.


  ontra ide.

  ReplyDelete
 2. ಲೇಖನ ತುಂಬಾ ಚೆನ್ನಾಗಿದೆ.

  ReplyDelete
 3. ಮಕ್ಕಳಿಗೆ ತಾನೇ ಹೇಗೆ ತಿಳಿಯಬೇಕು ? ಅವರಿಗೆ ನಾವು ಹೇಳಿಕೊಟ್ಟ ಹಾಗೆ ಕಲಿಯುತ್ತಾರೆ. ಕೆಲವು ವಿಷಯಗಳನ್ನೂ ನಾವು ಅವರ ವಯಸ್ಸಿಗೆ ಮೀರಿ ತಿಳಿಹೇಳಲು ಸಾಧ್ಯವಾಗದಿದ್ದಲ್ಲಿ ಇಂತಹ ಪ್ರಸಂಗಗಳು ಸಾಮಾನ್ಯ . ಲೇಖನ ಚೆನ್ನಾಗಿ ಮೂಡಿ ಬಂದಿದೆ.

  ReplyDelete
 4. HA ha ha ha :) nice ... railu hali mele hoydu.. bt makkalado railalla idu :)

  ReplyDelete
 5. ಎರಡೂ ವಿಚಿತ್ರ ಪೇಚು ಪ್ರಸ೦ಗಗಳು. ಪಾಪ ಮಕ್ಕಳು!

  ReplyDelete
 6. Anonymous
  Nanda Kishor B
  ನವ್ಯಾಂತ"
  Prathama Agnihotri sir
  sunaath sir
  ಅಶ್ವಿನಿ/ Ashwini
  ಸೀತಾರಾಮ. ಕೆ. / SITARAM.K sir
  ಪ್ರವೀಣ್ ಭಟ್

  kiran Hegde

  prabhamani nagaraja madam


  ಪ್ರೋತ್ಸಾಹಿಸಿದ ಎಲ್ಲರಿಗೂ ಪ್ರೀತಿಪೂರ್ವಕ ಧನ್ಯವಾದಗಳು

  ReplyDelete
 7. ಪ್ರಶಾಂತAugust 11, 2011 at 7:37 PM

  ಪ್ರಸಂಗ ಬಹಳ ಚೆನ್ನಾಗಿದೆ!

  ReplyDelete
 8. ಹಾಸ್ಯ ಪ್ರಸಂಗಗಳು ಹೇಗೆ ಎಲ್ಲಿ ಉತ್ಪತ್ತಿಯಾಗುತ್ತವೆಂಬುದನ್ನು ಹೇಳುವುದು ಕಷ್ಟ. ಅದನ್ನು ಅನುಭವಿಸಿಯೇ ತಿಳಿಯಬೇಕು.

  ReplyDelete