Monday, October 18, 2010

ಆಟ ದೊಂಬರಾಟ



ಮೊನ್ನೆ ಮೊನ್ನೆ ನಡೆದ ರಾಜಕೀಯ ದೊಂಬರಾಟ ಕೆಲವು ಜನರಿಗೆ ಫ್ರೀ ಆಗಿ entertainment ಕೊಟ್ಟಿದ್ದಂತೂ ನಿಜ. ಹಗ್ಗ ಜಗ್ಗಾಟದಲ್ಲಿ ಯಡಯೂರಪ್ಪ ತಾತ್ಕಾಲಿಕ ನಿಟ್ಟುಸಿರು ಬಿಟ್ಟಿದ್ದು ದಿಟ. ಮಂತ್ರಿ ಪದವಿ ಆಸೆಗೆ ಪಕ್ಷ ಬಿಟ್ಟು ಶಾಸಕತ್ವ ಪಣಕ್ಕಿಟ್ಟು ರಾಜಕೀಯವನ್ನೇ ಕಲಸಿ ರಾಡಿಮಾಡಿ ಮಣ್ಣಿನ ಮಕ್ಕಳಾಗಲು ಹೋಗಿ ಮಣ್ಣು ತಿಂದ ಶಾಸಕರ ಕತೆ ನಾನು ಹೇಳುವದಕ್ಕಿಂತ ನಿಮಗೇ ಚನ್ನಾಗಿ ಗೊತ್ತಿದೆ. ಅದ್ಯೇಕೋ ಏನೋ ನಮ್ಮ ಜನರಿಗೆ ಅದೆಷ್ಟೇ ಬುದ್ಧಿ ಹೇಳಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಹಚ್ಚೆಯನ್ನಾದರೂ ಎದೆಯಮೇಲೆ ಕೆತ್ತುಬಿಡಿ ಆದರೆ ಅವರು ನನಗಿಲ್ಲದ್ದು ಯಾರಿಗೂ ಇರಬಾರದೆಂಬ ನ್ಯಾಯದವರು. ಅದೇನೋ ಗಾದೆ ಇದೆಯಲ್ಲ ಘಟಂ ಬಿಂದ್ಯಾತ್ ಪಟಂ ಚಿಂದ್ಯಾತ್ ಪ್ರಸಿದ್ಧ ಪುರುಷೋ ಭವ. “ಮಡಿಕೆ ಆದರೂ ಒಡೆದು ಹಾಕು ಬಟ್ಟೆಯನ್ನಾದರೂ ಹರಿದು ಹಾಕು ಆದರೆ ಪ್ರಸಿದ್ಧ ಪುರುಶನಾಗು” ಎಂಬಂತೆ, ನಮ್ಮ ಶಾಸಕರು ಏನಾದ್ರು ಮಾಡಿ ಮಂತ್ರಿ ಯಾಗಬೇಕೆಂಬ ಹಂಬಲದಿಂದ ಮಂಗಗಳಂತೆ ಆ ಕಡೆ ಈ ಕಡೆ ಜಿಗಿದು ಬಟ್ಟೆಯನ್ನೆಲ್ಲ ಹರ್ಕೊಂಡು ಕೆಲವೊಂದಿಷ್ಟುದಿನ ಮೀಡಿಯಾದೆದುರು (ಕು) ಪ್ರಸಿದ್ಧ ಜನರಾಗಿದ್ದರು. ಅಂತು ಮಂತ್ರಿ ಪದವಿ ಕೊಡಲಿಲ್ಲ ಎಂಬ ಕಾರಣಕ್ಕೆ, ಸರ್ಕಾರ ಯಾಕೆ ಉಳಿಯಬೇಕು ನಮಗಿಲ್ಲದ್ದು ಬೇರಯವರಿಗೂ ಉಳಿಯಬಾರದು ಎಂಬ ಕುಭುದ್ದಿಯಿಂದ ಸರ್ಕಾರನ್ನ ಇನ್ನೇನು ಕೆಡಗಿಯೇ ಬಿಟ್ಟರೆಂಬ ವಾತಾವರಣ ಸೃಷ್ಟಿಯಾಗಿತ್ತು.ಜನರು ಅಸಂತುಷ್ಟತೆಯನ್ನ ಬೇರೆ ಬೇರೆ ರೀತಿಯಾಗಿ ಹೊರ ಹಾಕ್ತಾರೆ.ಕೆಲವು ಮಂದಿ ಸುಮ್ಮನಿದ್ದು ಸಂದರ್ಭದಲ್ಲಿ ಚನ್ನಾಗಿ ಉಂಡಕೊಂಡು ಆಮೇಲೆ ಬಾಳೆಯಲ್ಲಿ ಎರಡು ಮಾಡಿ ಹೋಗ್ತಾರೆ. ಅಥವಾ ಅಟ್ಟ ಹತ್ತಿ ಏಣಿ ಓದಿತಾರೆ.
 ಇದನನ್ನೆಲ್ಲ ನೋಡುತ್ತಿದ್ದ ನನಗೆ ನಾನು ಸಣ್ಣವನಿರುವಾಗ ನಡೆದ ಇಂತಹದೇ ಸಂದರ್ಭ ನೆನಪಾಯಿತು. ನಮ್ಮಕಡೆ ಯಕ್ಷಗಾನದ ಹುಚ್ಚು ಬಹಳ ಜನರಿಗೆ. ಅದು ಒಂತರಾ ರಾಜಕೀಯ ಆಟವಿದ್ದಂತೆ. ಎಸ್ಟೋ ಮಂದಿ ತಮ್ಮ ರಾಜಕೀಯ ತೆವಲನ್ನ ಯಕ್ಷಗಾನದ ಮೂಲಕ ತೀರಿಸಿ ಕೊಂಡವರಿದ್ದಾರೆ. ಅಥವಾ ಯಕ್ಷಗಾನಕ್ಕೂ ರಾಜಕೀಯವನ್ನ ಎಳೆದು ತಂದವರಿದ್ದಾರೆ. ಈಗೀಗ ಮುಖ್ಯ ಕಲಾವಿದರು ಯಕ್ಷಗಾನದ ಅರ್ಥದ ಮಧ್ಯದಲ್ಲಿ ಪ್ರಸಕ್ತ ರಾಜಕಾರಣದಬಗ್ಗೆ ದ್ವಂದ್ವಾರ್ಥ ಮಾತನಾಡದೆ ಇದ್ದರೆ ಜನರಿಗೆ ಮನೋರಂಜಿಸಲು ಮಾತುಗಳೇ ಇಲ್ಲವೇನೋ ಎಂಬಂತೆ ಪರಿಸ್ಥಿತಿ ನಿರ್ಮಾಣ ಮಾಡಿಬಿಟ್ಟಿದ್ದಾರೆ . ಅದೇನೇ ಇರಲಿ ನಾನು ಹೇಳಲಿಕ್ಕೆ ಹೊರಟಿರುವದು ಯಕ್ಷಗಾನದಲ್ಲಿ ಬದಲಾಗುತ್ತಿರುವ ಮಾತಿನ ವೈಖರಿಯ ಬಗ್ಗೆ ಅಲ್ಲ. ನೆನಪಾದ ಒಂದು ಘಟನೆಯ ಬಗ್ಗೆ .ಅದೊಂದ್ಸಾರಿ ನಮ್ಮೂರ ಪಕ್ಕ ಹವ್ಯಾಸಿ ಕಲಾವಿದರು ಕೂಡಿ ಆಟ ಮಾಡುವದು ಅಂತ ತೀರ್ರ್ಮಾನ ಆಯಿತು. ಭಸ್ಮಾಸುರ ಮೋಹಿನಿ ಕಥಾಪ್ರಸಂಗ, ಎಲ್ಲರಿಗೂ ಅವರವರ ಶಕ್ತ್ಯಾನುಸಾರ ಪಾತ್ರಗಳನ್ನ ಹಂಚಲಾಯಿತು ಆದರೆ ಭಸ್ಮಾಸುರನ ಪಾತ್ರ ಮಾಡಲು ಇಬ್ಬರ ಮಧ್ಯ ಪೈಪೋಟಿ ಹುಟ್ಟಿಕೊಂಡಿತು,ಮುಖ್ಯಪಾತ್ರವನ್ನ ತಾನು ಮಾಡಬೇಕು ತಾನು ಮಾಡಬೇಕೆಂಬ ಆಸೆ ಇಬ್ಬರಲ್ಲೂ ಅತಿಯಾಗಿತ್ತು, ಅದು ಕಳನಾಯಕನ ಪಾತ್ರವಾದರೂ ಸರಿ ಆದ್ರೆ ಮುಕ್ಯ ಪಾತ್ರ ಆಗಬೇಕೆಂಬ ಹಠ ಮೈತಳೆಯಿತು, ಸೂತ್ರಧಾರನ ಮಧ್ಯ ಪ್ರವೇಶದಿಂದ ಒಬ್ಬನಿಗೆ ಈಶ್ವರನ ಪಾತ್ರವನ್ನೂ ಇನ್ನೊಬ್ಬನಿಗೆ ಭಸ್ಮಾಸುರನ ಪಾತ್ರವನ್ನೂ ಹಂಚಲಾಯಿತು. ಆದರೆ ಈಶ್ವರನ ಪಾತ್ರ ಮಾಡಲು ಒಪ್ಪಿದವನಿಗೆ ಭಸ್ಮಾಸುರನ ಪಾತ್ರವನ್ನ ಮಾಡಲು ಕೊಡಲಿಲ್ಲ ಎಂಬ ಹತಾಶೆ ಅವನ್ನನ್ನ ಕಾಡತೊಡಗಿತು. ಅದಕ್ಕಾಗಿ ಅವನು ಇವರಿಗೆ ಸರಿಯಾದ ಸಂದರ್ಭದಲ್ಲಿ ಕೈ ಕೊಡಬೇಕು ಅಂತ ತೀರ್ಮಾನ ಮಾಡಿದನು. ಹೀಗೆ ಒಂದುದಿನ ಆಟದ ದಿನ ಬಂದೇ ಬಿಟ್ಟಿತು, ರಾತ್ರಿ ಹತ್ತುಗಂಟೆಗೆ ಚಂಡೆಯ ಸದ್ದು ಮಾರ್ದನಿಸತೊಡಗಿತು,ಮೊದಲಿಗೆ ಈಶ್ವರನ ಪಾತ್ರದ ಪ್ರವೇಶ ಆಯಿತು, ತದ್ದಿಂ ತಕದಿನ ಧಿಂ ಎಂದು ತಾಂಡವ ನೃತ್ಯ ಮುಗಿದು ಪಾರ್ವತಿಯನ್ನ ಒಡಗೂಡಿ ಭಾಸ್ಮಲೇಪಿಸುತ್ತ ಮಧ್ಯದಲ್ಲಿ ಸಿಟ್ಟಾಗಿ ಭಾಸ್ಮಚೆಲ್ಲಿದಾಗ ಮಂದ ಬೆಳಕಿನಲ್ಲಿ ಕಿರುಚುತ್ತ ಭಸ್ಮಾಸುರ ಎದ್ದು ಬಂದಕೂಡಲೇ ಎದೆಯಲ್ಲ ಢವ ಢವ ಎನ್ನತೊಡಗಿತು . ಭಸ್ಮತರಲು ಹೋದ ಭಸ್ಮಾಸುರ ಅಳುತ್ತ ಈಶ್ವರನ ಬಳಿ ಬಂದು ವಿಕಾರ ರೂಪಿನಿಂದ ಹುಸಿ ಅಳು ತೋರಿಸುತ್ತಿರುವದರಿಂದ ನಮಗೆಲ್ಲ ರೋಮಾಂಚನ ವಾಗುತ್ತಿರುವ ಹೊತ್ತಿಗೆ ಭಾಗವತರು ಎತ್ತಿದ ಭಾಮಿನಿ “ಎಲೆ ಮಗನೆ ಮುಗವ್ಯಾಕೆ ಕಂದಿದೆ “ಎಂದು ಕೇಳುವ ಈಶ್ವರನ ಹಾಡಿಗೆ ಎಲ್ಲರೂ ತಲೆ ದೂಗುತ್ತಿದ್ದರು. ಭಸ್ಮಾಸುರನ ಹಾಡಾದ “ಯಾರ ಶಿರದ ಮೇಲೆ ಕರವಿಟ್ಟ ಕ್ಷಣದಿ” ಎಂಬ ಹಾಡು ಬಂದ ಕೂಡಲೇ ಜನರು ಸಿಳ್ಳೆಯ ಮಳೆ ಗೈದರು. ಪದ್ಯ ಮುಗಿದು ಅಪ್ಪ ನನಗೆ ಉರಿಹಸ್ತದ ವರವನ್ನ ಕೊಡು ಎಂದು ಭಸ್ಮಾಸುರನು ಈಶ್ವರನಲ್ಲಿ ಕೇಳಿದನು. ಆದರೆ ಈಶ್ವರನ ಪಾತ್ರ ಮಾಡಿದವನು ಇದೇ ಸಂದರ್ಭ ಕೈ ಕೊಡಲು ಎಂಬ ಭುದ್ದಿ ಜಾಗೃತವಾಗಿ ವರವನ್ನ ಕೊಡುವದಿಲ್ಲ ಎಂದು ನಿರಾಕರಿಸಿ ಬಿಟ್ಟನು. ಭಸ್ಮಾಸುರನು ಮತ್ತೆ ಮತ್ತೆ ಕೇಳಿದರೂ ವರವನ್ನ ಕೊಡುವದಿಲ್ಲವೆಂದು ಕುಳಿಬಿಟ್ಟನು ಆಗ ಭಾಗವತರಾದಿಯಾಗಿ ಎಲ್ಲರಿಗೂ ಪೇಚಾಯಿತು. ವರವನ್ನೇ ಕೊಡದೆ ಆಟ ಮುಂದು ವರೆಯುವದು ಹೇಗೆ? ಎಂದು ತಿಳಿಯದಾಯಿತು, ಮತ್ತೆ ಮತ್ತೆ ಕೇಳಿದರೂ ಈಶ್ವರನು ವರವನ್ನ ನಿರಾಕರಿಸ ತೊಡಗಿದನು. ಆಗ ಮದ್ಯದಲ್ಲಿ ಅನಿವಾರ್ಯವಾಗಿ ಪರದೆಯನ್ನ ಬಿಟ್ಟು ಈಶ್ವರನ ಪಾತ್ರ ದಾರಿಯನ್ನ ಚೌಕಿಮನೆಗೆ ಕರೆದುಕೊಂಡು ಹೋಗಿ ತದುಕಲಾಯಿತು. ಈಶ್ವರನ ಪಾತ್ರದಾರಿಯಲ್ಲಿ ಲಯ ಕರ್ತನ ಭಾವ ಗೋಚರಿಸುತ್ತಿತ್ತು .ಮತ್ತೆ ಪರದೆ ಸರಿದು ಭಸ್ಮಾಸುರನ ಪಾತ್ರ ಪ್ರವೇಶಿಸಿ ಅಪ್ಪನಿಂದ ವರವನ್ನ ಪಡೆದಿದ್ದೇನೆ ಎಂದು ಮಾತನ್ನ ಆರಂಭಿಸುವದರೋಟ್ಟಿಗೆ ಆಟ ಮುಂದುವರೆದು ಜನರು ನಿಟ್ಟುಸಿರು ಬಿಟ್ಟರು. ಈ ಕತೆಯನ್ನ ಪ್ರಸಕ್ತ ರಾಜಕೀಯ ಡೊಂಬರಾಟಕ್ಕೆ ಪಾತ್ರ ಸಹಿತವಾಗಿ ತಾಳೆ ಹಾಕಿಕೊಳ್ಳುವದನ್ನ ನಿಮಗೆ ಬಿಟ್ಟಿದ್ದೇನೆ.
(ಚಿತ್ರ ಅಂತರ್ಜಾಲ ಕೃಪಾ ಕಟಾಕ್ಷ )

No comments:

Post a Comment