Friday, January 7, 2011

ಬಾಳೆ

 ಬಾಳೆ
ಮಂಜಿ ಅವಳ ಹೆಸರು.ಅಪ್ಪ ಟ್ಟ ಹೆಸರು ಮಂಜುಳಾ ಅಂತೆ. ಪಾಪ ಅವಳಿಗೆ ತನ್ನ ಹೆಸರು ಮಂಜುಳಾ ಅನ್ನುವದು ಮರೆತು ಹೋಗಿದೆ. ಅವಳು ಮೇಲ್ಜಾತಿಯ ಮನೆಯ ಕೆಲಸ ಮಾಡಿ ಬದುಕುವವಳು. ಒಡೆಯರ ಮನೆಯ ಚಿಕ್ಕ ಮಕ್ಕಳೂ ಸಹ ಅವಳಿಗೆ ಮಂಜಿ ಅಂತಲೇ ಕರೆಯುತ್ತಾರೆ. ಪಾಪ ಅವಳಿಗೆ ಮಂಜಳಾ ಅಂತ ಕರೆದರೆ ನಾಚಿಕೆ. ಗಂಡನಿಲ್ಲದ ಸಂಸಾರ. ಕುಡುಕ ಗಂಡ  ಕುಡ್ಕಂಡು ಮರಹತ್ತಿ ಬಿದ್ದು ಸರ್ಕಾರೀ ಆಸ್ಪತ್ರೆಯಲ್ಲಿ ನಾಲ್ಕುದಿನ ಹೊರಳಾಡಿ ಪ್ರಾಣ ಬಿಟ್ಟನಂತೆ.ಆವತ್ತಿಂದ ಅವ್ನ ಹೆಸರು ಹೇಳ್ಕಂಡು ಇದ್ದೊಬ್ಬ ಮಗಳ ಸಾಕಂಡು ಜೀವನಗಾಡಿಯನ್ನ ಳಿತಾ ಇದ್ದಾಳೆ.ಮಣ್ಣು ಮನೆ.ಅದನ್ನ ವರ್ಷಕ್ಕೆ ಒಂದುಸಾರಿ ಸೋಗೆಯಿಂದ ಹೊದಿಸ್ತಾಳೆ.ಚಿಕ್ಕ ಅಂಗಳ. ಅದಕ್ಕೆ ಮಣ್ಣಿನ ಗೋಡೆ. ಊರಿನ ಎಲ್ಲ ಆಕಳ ಸಗಣಿಯನ್ನ ತಂದು ಅಂಗಳ ಚೊಕ್ಕ ಮಾಡಿ ಸಾರಿಸಿಡ್ತಾಳೆ.ಅವತ್ತು ಯಾಕೋ ಅವಳಿಗೆ ತನ್ನ ಮನೆಯ ಅಂಗಳದ ಮುಂದೊಂದು ಬಾಳೆ ಗಿಡವನ್ನ ನೆಡಬೇಕೆಂಬ ಆಸೆ ಆಯಿತು.ಹಾಗೆ  ಕೆಲಸದಿಂದ ಬರುವಾಗ ಒಡ್ಯರ ಮನೆಯಲ್ಲಿ ಕಿತ್ತು ಹಾಕಿದ ಒಂದು ಚಿಕ್ಕ ಬಾಳೆ ಗಿಡವನ್ನ ತಂದಳು. ಅಂಗಳದ ಮುಂದೆ ಕೈ ತೊಳೆಯುವ ಜಾಗದಲ್ಲಿ  ಕುಳಿಮಾಡಿ ಗಿಡ ಇತ್ತು ಬುಡಕ್ಕೆ ಮಣ್ಣು ಹಾಕಿದಳು.ಕೈ ಕಾಲು ತೊಳೆದ ನೀರು ಅದರ ಬುಡಕ್ಕೆ ಹೋಗಿ ಬೀಳಲೆಂದು ಚಿಕ್ಕ ಕಾಲುವೆ ಮಾಡಿ ಕೊಟ್ಟಳು. ಒಂದೆರಡು ದಿನ ಮಣ್ಣಿನಿಂದ ಕಿತ್ತ ಬಾಳೆ ಮರಿ ಬಿಸಿಲಿಗೆ ಬಾಡ ತೊಡಗಿತು. ಮೂರನೇ ದಿನದಿಂದ ಮಣ್ಣಲ್ಲಿ ಬೇರ ಊರಲು  ಆರಂಭಿಸಿತು. ಹೀಗೆ ಒಂದು ವಾರದ ನಂತರ ಬಾಳೆ ಮರಿಯ ಸುಳಿ ಮೆಲೇರತೊಡಗಿತು. ಮುಂದಿನ ಒಂದು ವಾರದ ನಂತರ ಸುಳಿ ಬಿಚ್ಚಿ ಲೆಗಳು ಹರಡಿಕೊಳ್ಳ ತೊಡಗಿದವು. ಅವಳಿಗೆ  ಈಗ ಬಾಳೆಯ ಬುಡಕ್ಕೆ ಗೊಬ್ಬರ ಹಾಕಿದರೆ ಸಶಕ್ತವಾಗಿ ಬೆಳೆಯ ಬಹುದು ಅನ್ನಿಸಿತು. ಎಲ್ಲಿಂದಲೋ ಒಂದಸ್ಟು ಸಗಣಿಯನ್ನ ಹೆಕ್ಕಿ ತಂದು ಅದರ ಬುಡಕ್ಕೆ ಹಾಕಿ ನೀರ ಹುಯ್ದಳು . ಬಾಳೆ ಮರಿ ಈಗ ಬುಡದಲ್ಲಿ ಹಾಕಿದ ಅಷ್ಟೂ ಗೊಬ್ಬರವನ್ನ ತಿಂದು ದಪ್ಪನೆಯ ಗಿಡವಾಗಿ ನೋಡು ನೋಡುತ್ತಿದ್ದಂತೆ ಆಳೆತ್ತರಕ್ಕೆ ಬೆಳೆದು ಬಂತು.

ಮಂಜಿಯ ಏಕೈಕ ಮಗಳು ಮಂಗಳ.ಮನೆಯಲ್ಲಿ ಹೊದ್ದು ಮಲಗಬೇಕಾದಷ್ಟು ಬಡತನ ಇದ್ದರೂ ತಾಯಿ ಅವಳ ಹೊಟ್ಟೆಗೆ ಎಂದೂ ಹಿಟ್ಟು ಕಾಣಿಸದೆ ಇದ್ದವಳಲ್ಲ.ಹಾಗಾಗಿ ಅವಳು ಬಾಳೆಯ ಗಿಡದಂತೆ ದಿನದಿಂದ ದಿನಕ್ಕೆ ಅಂಗಾಗಗಳಲ್ಲಿ  ಯವ್ವನವನ್ನ ತುಂಬಿಕೊಂಡು ಬೆಳೆಯುತ್ತಿದ್ದಾಳೆ. ಅವಳಿಗೆ ಈ ವರ್ಷ ೧೦ ನೇ ತರಗತಿಯ ಪಾಸು ಮಾಡುವಾಸೆ. ತಾಯಿಗೆ ಅವಳು ಮುಂದಿನ ವರ್ಷದಿಂದ ಕೆಲಸಕ್ಕೆ ಹೋದರೆ ಜೀವನಕ್ಕೊಂದು  ಆಧಾರ ವಾಗಬಹುದೆಂಬ ಚಿಂತೆ. ಅವಳಿಗೆ ಕೆಲಸದ ರೂಡಿ ಆಗಲೆಂದು ಡೆಯರ ಮನೆಗೆ ಅವಳನ್ನೂ ಕರೆದೊಯ್ಯುತ್ತಾಳೆ.                          

ಅಂಗಳದ ಮುಂದಿರುವ ಬಾಳೆ  ಬುಡದಲ್ಲಿ ಮರಿಬಿಟ್ಟು ನೋಡುವವರ ಕಣ್ಣು ಕುಕ್ಕಿಸುವಸ್ಟು ಬೆಳೆದು ನಿಂತು ಇನ್ನೇನು ಕೆಲವು ದಿನಗಳಲ್ಲಿ ಕೊನೆ ಹಾಕುವ ಲಕ್ಷಣ ಕಂಡು ಬಂತು. ತಾನೆ ನೆಟ್ಟ ಗಿಡ ತನ್ನೆದುರಿಗೆ ಗೊನೆ ಹಾಕುವ ಕಾಲ ಬಂತಲ್ಲ ಅಂತ ನೆನೆದು ಮಂಜಿಗೆ ಹಿಗ್ಗು ಬಂತು. ಅವಳಲ್ಲಿರುವ ಸಹಜ ಕುತೂಹಲದಿಂದ ಬಾಳೆ ಕೊನೆ ಹಕುವದನ್ನೇ ನಿರೀಕ್ಷಿಸ ತೊಡಗಿದಳು. ಒಂದಿನ ಮುಂಜಾವಿನಲಿ ಎದ್ದು ನೋಡಿದ ಅವಳಿಗೆ ಬಾಳೆಯ ತುದಿಯಲ್ಲಿ ಕೆಂಪಗೆ ಗೊನೆ ಹೊರಡುವದು ಕಾಣಿಸಿತು. ನೋಡು ನೋಡುತ್ತಿದ್ದಂತೆ ಬಾಳೆಯ ಕುಂಡಿಗೆಯು ಹೊರಬಂದು ಸಿಪ್ಪೆ ಕಳಚಿಕೊಂಡು ಮಾರುದ್ದ ಕೊನೆಯು ನೆತಾಡ ತೊಡಗಿತು. ಕುಂಡಿಗೆಯಿಂದ ದಿನಕೊಂದು ಸಿಪ್ಪೆ ಕಳಚುತ್ತ ಕೊನೆ ಬೆಳೆಯ ತೊಡಗಿತು.    

ಮಗಳಿಗೆ ಪರೀಕ್ಷೆ ಮುಗಿದು ಅವಳು ಇನ್ನು ಕಾಯಂ ಕೆಲಸಕ್ಕೆ ಸೇರುವದೆಂದು ನಿರ್ಧಾರ ವಾಯಿತು. ತಾನು ತಾಯೋಟ್ಟಿಗೆ ಒಡೆಯರ ಮನೆಯ ಕೆಲಸಕ್ಕೆ ನಡೆಯ ತೊಡಗಿದಳು. ವಡೆಯರ ಮನೆಯ ಮಾಣಿ ಈಗಷ್ಟೆ, ಪೇಟೆಯಲ್ಲಿ ಓದಿ ಕಡಿದು ನೌಕರಿ ಸಿಗದೇ ಊರಿಗೆ ಬಂದಾಗಿತ್ತು. ಆಗಾಗ ಮಂಗಳಳ  ಕಣ್ಣ ನೋಟವು ಅವನ ನೋಟವು ಸ್ಪಂದಿಸುತ್ತಲಿತ್ತು. ಅದು ಹ್ಯಾಗೋ ಅವಳ ಅವನ ಕಣ್ಣುಗಳು ಮಿಲಿತವಾಗಿ ಇಬ್ಬರೂ ಕದ್ದು ಮುಚ್ಚಿ ಮಾತಾಡುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿತು. ಅವರಿಗೆ ಯವ್ವನದ ಹುಡುಗು ಬುದ್ಧಿಗೆ ಅದೊಂದು ಆಟವಾಗಿ ಬಿಟ್ಟಿತು.

ಬಾಳೆಯ ಕೊನೆಯ ಕುಂಡಿಗೆಯು ಚಿಕ್ಕದಾಗಿ ಅವು ಬಾಳೇಯ ಕೊನೆ ಬೆಳೆದ ಸೂಚನೆ ಕೊಡುತ್ತಿತ್ತು.ಇನ್ನು ಕೆಲವು ದಿನಗಳಲ್ಲಿ ಅದನ್ನ ಮರದಿಂದ ಕಡಿಯ ಬೆಕಾಗಿತ್ತು. ಒಂದಿನ ಮಂಜಿಗೆ ತನ್ನ ಅಣ್ಣನ ಮರಣದ ಸುದ್ಧಿ ತವರಿನಿಂದ ಬಂತು. ಕೇಳಿದ ಕೂಡಲೆ ಮಗಳಿಗೆ ಮನೆಯ ಕಡೆ ಜವಾಬ್ದಾರಿ ಹೇಳಿ ಬೇಳಗಿನ ಜಾವದ ಬಸ್ಸಿಗೆ ತವರಿಗೆ ಹೋರಟು ಬಿಟ್ಟಳು.

ಮರುದಿನ ಮಧ್ಯಾನ್ಹದ ಹೊತ್ತು ದೂರದೆಲ್ಲೆಲ್ಲೊ ಒಂದು ಒಂಟಿ ಮಂಗ ಮಂಜಿಯ ಮನೆಯ ಬಾಳೆ ಕೊನೆಯನ್ನ ತಿನ್ನಲು ಹೊಂಚು ಹಾಕುತ್ತಲಿತ್ತು. ಅದಕ್ಕೆ ಮಂಜಿ ಮನೆಯಲ್ಲಿನ ನಿಶಬ್ಧವಾಗಿರುವ ವಾತಾವರಣ ಹೆದರಿಕೆಯನ್ನ ದೂರವಾಗಿಸಿತ್ತು.ಒಡೆಯರ ಮನೆಯ ಮಾಣಿ ಆಚೀಚೆ ನೋಡುತ್ತಾ ನೇರವಾಗಿ ಬಂದು ಮಂಜಿಯ ಮನೆಯ ಬಾಗಿಲು ಹಾಕಿಕೊಂಡ. ಹೋರಗೆ ಕಾಯುತ್ತಿರುವ ಒಂಟಿ ಮಂಗ ನಿಧಾನವಾಗಿ ಬಾಳೆಕೊನೆಯ ಮೇಲೆ ಬಂದು ಕುಳಿತು ಒಂದೊಂದೆ ಕಾಯನ್ನ ಕಿತ್ತು ನಿಧಾನವಾಗಿ ಸಿಪ್ಪೆಯನ್ನ ಸುಲಿದು ಬಾಯಿಗೆ ಇಳಿಬಿಟ್ಟಿತು. ಒಳಗಡೆ ಮಾಣಿ ಹೊರಗಡೆ ಮಂಗ ತಂತಮ್ಮ ಪಾಲಿನ ಭೂರಿ ಭೋಜನವನ್ನ ಮುಗಿಸುವದರಲ್ಲಿದ್ದರು. ಅಷ್ಟು ಹೊತ್ತಿಗೆ ಮಂಜಿಯ ಆಗಮನ ಅಲ್ಲಿಗಾಯಿತು. ಬೆಳೆಸಿಟ್ಟ ಬಾಳೆಕೊನೆಯನ್ನ ಮಂಗ ತಿನ್ನುತ್ತಿರುವದ ಕಂಡು ಓಡಿಸೋಣವೆಂದು ಕೂಗಿ ಕೊಂಡಳು. ಅಷ್ಟೊತ್ತಿಗೆ ಮಂಗ ತಾನು ಗೊನೆಯಲ್ಲಿ ಒಂದೂ ಕಾಯಿ ಬಿಡದೆ ಮುಗಿಸಿಯಾಗಿತ್ತು. ಮಂಜಿಯು ಕೂಗಿಕೊಳ್ಳೂವದ ಕೇಳೀ ಒಳಗಿದ್ದ ಮಾಣಿ ನಿಧಾನವಾಗಿ ಬಾಗಿಲ ತೆಗೆದು ಕೊಂಡು ಹೋರಗಡೆ ಬಂದ. ಮಂಜಿಯ ಮುಖವನ್ನು ನೋಡಿ ತಲೆತಗ್ಗಿಸಿ ಮನೆಕಡೆಗೆ ಶರವೇಗದಲ್ಲಿ ನಡೆದು ಬಿಟ್ಟ. ಒಳಗಡೆಯಿಂದ ಮಂಗಳ ತಾಯಿಯ ಮುಖವನ್ನ ನೋಡಲಾಗದೆ ನೆಲವನ್ನ ನೋಡ ತೊಡಗಿದಳು. ಮಂಜಿಗೆ ಅಂಗಳದಲ್ಲಿ ಇಷ್ಟುದಿನ ಕಷ್ಟಬಿಟ್ಟು ಬೆಳೆಸಿದ ಮಂಗ ತಿಂದು ಬಿಟ್ಟ ಬಾಳೆ,  ಮತ್ತು ಮಗಳು, ಇಬ್ಬರೂ ವಿಚಿತ್ರವಾಗಿ ಕಂಡವು.ಮಂಗ ಮತ್ತು ಮಾಣಿಯ ಸಾಮ್ಯತೆಯು ಅವಳಲ್ಲಿ ಯಾವುದೋ ಭಾವನೆಯನ್ನ ಮುಖದಲ್ಲಿ ಮೂಡಿಸಿದವು……… 

3 comments:

  1. ಚೆನ್ನಾಗಿದೆ ಕಥೆಯ ನಿರೂಪಣೆ...

    ReplyDelete
  2. sundara baraha antya blu bega mugisidantideyalla ?

    ReplyDelete
  3. ಚೆನ್ನಾಗಿದೆ ತುಂಬ ದೊಡ್ಡ ಕಥೆಯನ್ನು ಸರಳವಾಗಿ ಪೋಣಿಸಿದ್ದೀರ. ನಿಮ್ಮ ನಿರೂಪಣಾ ಶೈಲಿ ಕೂಡ ತುಂಬಾ ಚೆನ್ನಾಗಿದೆ.

    ReplyDelete