Friday, February 11, 2011

ಜೀವಾತ್ಮನಲ್ಲೇ ಅಡಗಿ ಕುಳಿತಿಹನು ಪರಮಾತ್ಮ




ನನ್ನ ಬಳಿ ಬಂದು ಬೇಡಿದ ಅಶಕ್ತರಿಗೆ ನಾನ್ಯವತ್ತೂ ನಾಸ್ತಿ ಅಂತ ಹೇಳಿದವನಲ್ಲ. ಹಾಗೆ ಅತಿ ಭಾವುಕತೆಯಿಂದ ಜೇಬಿನಲ್ಲಿ ಇದ್ದ ದುಡ್ಡೆಲ್ಲವನ್ನ ಬಾಚಿ ಕೊಟ್ಟವನೂ ಅಲ್ಲ.ಮತ್ತೆ ಮತ್ತೆ ಅವರ ಬಡತನವನ್ನೇ ನೆನೆದು ಜೀವನದ ಬಗ್ಗೆ ಅತಿಯಾಗಿ ಚಿಂತಿಸುವವನೂ  ಅಲ್ಲ. ಅದನ್ನೇ ನೆನೆದು ಈ ಜೀವನ ಎಷ್ಟು ದುಖಃಗಳಿಂದ ಕೂಡಿದೆ ಅಂತ ದುಖ್ಖಿಃಸುವವನೂ  ಅಲ್ಲ. ಅಲ್ಲಿಗೆ ಆ ವಿಷಯವನ್ನ ಮರೆತು ಬಿಡ್ತೇನೆ. ಹೀಗೆ ಯೋಚಿಸುತ್ತ ಕುಳಿತು ಕೊಂಡರೆ ನಮ್ಮ ಉಧರ ತುಂಬ ಬೇಕಲ್ಲ ಸ್ವಾಮೀ.ಆದರೂ ಒಂದೊಂದು ಸಾರಿ ಕೆಲವು ಘಟನೆಗಳು ಘಟನೆಗಳಿಂದ ಆಚೆಗೂ ನಮ್ಮನ್ನ ಚಿಂತಿಸುವಂತೆ ಮಾಡಿ ಬಿಡುತ್ತದೆ ಅಲ್ಲವೇ ? ಒಮ್ಮೊಮ್ಮೆ ಈ ಸಮಾಜದಲ್ಲಿ ಎಂತವನಿಗೂ ಕನಿಕರ ಬರುವ ಸನ್ನಿವೇಷ ಒದಗಿ ಬಂದು ಬಿಡ್ತದೆ. ಹಸಿವೇ ಹಾಗೆ ಅದು ಎಲ್ಲಿ ಅಂತಿಲ್ಲ ಎಲ್ಲಾದರೂ ನಮ್ಮನ್ನ ಕೈ ಒಡ್ಡಿ ನಿಲ್ಲುವಂತೆ ಮಾಡಿ ಬಿಡುತ್ತೆ . 

                                               ಮೊನ್ನೆ  ಕೆಲಸದ ನಿಮಿತ್ತ  ದೇವಸ್ಥಾನದ ಹತ್ತಿರ ಯಾರಿಗೋ ಕಾಯ್ತಾ ಇದ್ದೆ. ಪಾಪ ನನ್ನ ಬಳಿ ಒಬ್ಬ ಮುದುಕ ಬಂದು ಕೈ ಒಡ್ಡಿದ.  ನಾನು ಜೇಬಿನಲ್ಲಿರುವ ಎರಡು ರೂಪಾಯಿಯನ್ನ ತೆಗೆದು ಅವನ ಕೈಗಿರಿಸಿದೆ.ಹಾಗೆ ಒಮ್ಮೆ ಅವನನ್ನ ದಿಟ್ಟಿಸಿದೆ. ಪಾಪ ಇನ್ನು ಕೆಲವು ವರ್ಷವಾದರೂ ಈ ಜೀವನ  ಬಂಡಿಯನ್ನ ಅವನು ಹೀಗೆ ಎಳೆಯಲೇ ಬೇಕು, ಒಂದೇ ಕಾಲು, ಅದಕ್ಕೆ ಆಧಾರವಾಗಿ ಒಂದು ಊರುಗೋಲು. ಅದನ್ನ ಕೊಂಕುಳಲ್ಲಿ ಸಿಕ್ಕಿಸಿ ಕೊಂಡಿದ್ದಾನೆ. ನನ್ನ ಹತ್ತಿರ ದುಡ್ಡನ್ನ ಇಸಿದುಕೊಂಡು ಹಣೆಗೊಮ್ಮೆ ಒತ್ತಿಕೊಂಡ. ಅದು ಅವನು ಕೃತಜ್ಞತೆಯನ್ನ ಸೂಚಿಸುವ ಪರಿ ಇರಬೇಕು. ಹಾಗೆ ಸುಮ್ಮನೆ ನಾನು  ನಿಂತುಕೊಂಡೆ.  ಅವನು ಅಲ್ಲಿ ನಿಂತುಕೊಂಡ ಎಲ್ಲರ ಹತ್ತಿರ ಕೈ ಒಡ್ಡುವದು ಸಾಮಾನ್ಯವಾಗಿತ್ತು. ಎಲ್ಲರೂ ಒಂದೋ ಎರಡೋ ಇಲ್ಲ ಎಂಟಾಣಿ ಪಾವಲಿಯನ್ನೋ ಅವನ ಕೈ ಗಿತ್ತರು. ಹಾಗೆ ಅಲ್ಲಿಗೆ ಚಕ್ಕನೆ ಒಂದು ಕಾರು ಬಂದು ನಿಂತಿತು.ಅದರೊಳಗಿಂದ ಓರ್ವ ರೇಶಿಮೆ ಸೀರೆಯುಟ್ಟ ಹೆಂಗಸೊಬ್ಬಳು ಬೆಳ್ಳಿಯ ಬಟ್ಟಲಲ್ಲಿ ದೇವರಿಗೆ ಪೂಜೆ ಮಾಡಲು ಪುಜಾ ಸಮಗ್ರಿಯವನ್ನ ಹಿಡಿದು ಕೆಳಗೆ ಇಳಿದಳು. ನಮ್ಮ ಬಳಿ ಬೇಡುತ್ತಿದ್ದ  ಮುದುಕ ಕಾರಿನಲ್ಲಿ ಆಸ್ತಿಕರು ಇಳಿಯುತ್ತ ಇದ್ದಾರೆ ಯಂಬ ಸುಳಿವಿನಿಂದಾಗಿ ಆ ಹೆಂಗಸಿನತ್ತ ಕಾಲನ್ನ ಎಳೆದು ಕೊಳ್ಳುತ್ತಾ ಅವಳ ಬಳಿ ಸಾರಿದ. ಕೈ ಒಡ್ಡಿದ. ಆದರೆ ಆ ಮಹಾ ಸಿಡುಕಿ ತಾಯಿ ಒಂದು ರುಪಾಯಿ ಕೊಡುವದು ಬೇಡ ಬೈಗುಳದ ಸುರಿಮಳೆ ಗೈದು ಬಿಟ್ಟಳು.ಅವನಿಗಾದರೋ ಆಸೆ,ಪಾಪ ಏನು ಮಾಡ್ತಾನೆ ದೇವರನ್ನ ಕಣುವದಕ್ಕೆ ಬಂದವರು ದೊಡ್ದವರು,ಅವರು  ಚಿಲ್ಲರೆಯನ್ನ ಬಿಟ್ಟು ನೋಟು ಕೊಡ್ತಾರೆ ಅಂತ ಅವನ ಭಾವನೆ ಆಗಿರ್ಬೇಕು. ಆ ಮಹಾತಾಯಿಯ ಬೈಗುಳವನ್ನ ಕೇಳಿ ಸ್ವಲ್ಪವೂ ಬೇಸರಿಸದೆ ಅವನು ಮುಂದೆ ನಡೆದ.  ಮತ್ತೆ ಇನ್ನಾರದೋ ಬಳಿಗೆ ಹೋಗಿ ಕೈ ಒಡ್ಡಿದ. ಇದನ್ನ ನೋಡುತ್ತಿದ್ದ ನನಗೆ ಒಮ್ಮೆ ಈ ಘಟನೆ ಯಾಕೋ ಜೀವನದ ದ್ವಂಧ್ವದ ಮುಖವಾಡವನ್ನ ಪರಿಚಯಿಸಿದಂತಾಯ್ತು.

ಅಕ್ಕಾ ರೇಶಿಮೆಯ ಸೀರೆಯುಟ್ಟು  
ಬೆಳ್ಳಿ ಬಟ್ಟಲಲಿ ತಾಂಬೂಲವಿಟ್ಟು 
ತಿನ್ನದಾ ದೇವರಿಗೆ ನೈವೇದ್ಯಕ್ಕಿಡುವದ ಬದಿಗಿಟ್ಟು  
 ಒಮ್ಮೆ ಹೊಟ್ಟೆಗಿಲ್ಲದವರಿಗೆ ನೋಡು ಎಡೆಇಟ್ಟು

ಜಗದ ಕರುಣಾಕರ ಮನುಜರನು ಭುವಿಗೆ ಇಳಿಬಿಟ್ಟ 
ಜಗದ ಜನರಿಗೆ ಹಸಿವಿಟ್ಟ ಆಹಾರವನೂ ಇಟ್ಟ 
ಆದರೆ ಇದ್ದವರಿಗೆ ಹಂಚಿತಿಂಬ ಬುದ್ಧಿಯ ಸ್ವಲ್ಪ ಕಡಿಮೆ ಕೊಟ್ಟ
ಆದರೂ ಅಲ್ಲಲ್ಲಿ ಕೆಲವೊಂದಿಷ್ಟು ಉಧಾರಿಗಳನಿಟ್ಟ 

ಭಜಿಪ ಮನುಜಗೆ ಹಲವು ದೇವರು, 
ನೂರಾರು ಮತ ಅದರೊಳಗೂ ಒಳಪಂತ
ಆದರೆ ಹಸಿವು ಎಲ್ಲರಿಗೂ ಒಂದೆ
ಜೀವಾತ್ಮನಲ್ಲೇ ಅಡಗಿ ಕುಳಿತಿಹನು ಪರಮಾತ್ಮ 

ಮಾತಿಗೆ ವ್ಯಾಕರಣ ಪಾಪ ತೊಳೆಯುವದಕೆ ಗೋಕರ್ಣ
ದಿನಕೊಂದು ವೃತ, ಜಪಿಸುವದಕೆ ಮಂತ್ರ, 
ಕೈಮುಗಿಯುವದಕೆ ದೇಗುಲ,ಮದರಸಾ ಚರ್ಚುಗಳು,
ಮಂದಿರ,ಇದೆಲ್ಲವೂ ಹೊಟ್ಟೆತುಂಬಿದವಗೆ ಕಾಣಣ್ಣ
ಹಸಿವಾದವಗೆ ಅನ್ನ ಮತ್ತೆಲ್ಲವೂ  ಗೌಣ 

ಹುಟ್ಟಿಸಿದ ಶಿವ ಹುಲ್ಲು ಮೇಯಿಸಲಾರ ಹೇಳುವದಕೆ ಚಂದ 
ಹೊಟ್ಟೆಗೆ ಹಿಟ್ಟಿಲ್ಲದೆ ಜಗದಲಿ ಸತ್ತವರು ಲೆಕ್ಕದಲಿ ಇಲ್ಲ 
ಕಡುಬಡವರಿಗೆ ಒಂದಿಷ್ಟು ಉಣುವುದಕೆ ಕೊಡಿ 
ಇಲ್ಲಿ ಕೂಡಿಟ್ಟು ತೆಗೆದುಕೊಂಡು ಹೋದವರ್ಯಾರಿಲ್ಲ ಬಿಡಿ



ಚಿತ್ರ @1 ಕಳಕಳಿಯಿಂದ ದಿಗ್ವಾಸ್ ಹೆಗಡೆಯವರು  ಕಳುಹಿಸಿ ಕೊಟ್ಟಿದ್ದು (http://chithrapata.blogspot.com)


5 comments:

  1. ಭಟ್ಟರೆ,
    ಕವನ ಹಾಗು ಅದರ ಹಿಂದಿರುವ ವಿಚಾರ ಚೆನ್ನಾಗಿವೆ.
    ’ದುಡ್ಡಿದ್ದವರಿಗೆ ದಯವೇ ಇಲ್ಲ.’ಎನ್ನುವ ಬೇಂದ್ರೆ ವಾಕ್ಯ ನೆನಪಿಗೆ ಬರುತ್ತದೆ.

    ReplyDelete
  2. @ದಿಗ್ವಾಸ್ ಅಣ್ಣಯ್ಯ ಧನ್ಯವಾದ.. ಮಹಾಕಾಶದಲ್ಲಿ ಮಶಕನಾದ ನನ್ನ್ ಬ್ಲಾಗಿಗೆ ಚಿತ್ರವನ್ನ ಕರುಣಿಸಿದ್ದಕ್ಕೆ ಕೃತಜ್ನನಾಗಿದ್ದೇನೆ.

    @ಚುಕ್ಕಿ ಚಿತ್ತಾರ ಮೇಡಂ ನಿಮ್ಮ ಪ್ರೀತಿಯ ಮಾತಿಗೆ ಧನ್ಯವಾದ

    @ಸುನಾಥ್ ಸರ್ ಕಾಲಿಲ್ಲದವನಿಗೆ ಉರುಗೋಲು ಕೊಟ್ಟಂತೆ ನಿಮ್ಮ ಪ್ರೋತ್ಸಾಹದ ಮಾತುಗಳು ನನ್ನ ತೋದಲು ನುಡಿಗಳಿಗೆ ಶಕ್ತಿಯನ್ನ ತುಂಬುತ್ತದೆ.

    @ದಿನಕರ ಮೊಗೆರರೇ ನಿಮ್ಮ... ಇದೂ ಒಂದು ಬದುಕು....! ಓದಿ ತುಂಬಾ ವ್ಯಥೆ ಆಯ್ತು. ತುಂಬಾ ಚನ್ನಾಗಿ ಬಡವರ ಬದುಕಿನ ಬವಣೆಗಳನ್ನ ಹಿಡಿದಿಟ್ಟಿದ್ದೀರಿ ಧನ್ಯವಾದ

    ReplyDelete
  3. chennagide.... hige bareyuttiri..

    ReplyDelete