Thursday, March 17, 2011

ಆಸ್ತಿಕನೋ ನಾಸ್ತಿಕನೊ.........?


ದೇವರಿದ್ದಾನೆಂದರೆ ಆಸ್ತಿಕನು ದೇವರಿಲ್ಲವೆಂದರವನು ನಾಸ್ತಿಕನು
ಇಬ್ಬರಿಗೂ ಗೊತ್ತಿಲ್ಲ ಇದೆ  ಇಲ್ಲವೆನ್ನುವ  ಸುಳಿವು 
ಪ್ರಶ್ನೆಯು ಏಳಬಹುದು ನಿಮಗೆ ನಾ ಅಸ್ತಿಕನೋ ನಾಸ್ತಿಕನೋ 
ನಾ ಆಸ್ತಿಕನೂ ಹೌದು ನಾಸ್ತಿಕನೂ ಹೌದು ಅಸ್ತಿಕಾನಾಸ್ತಿಕನು 

ಇದ್ದನೆನ್ನುವವಗೆ ತೋರಿಸುವದಕೆ ಕುರುಹಿಲ್ಲ
ಇಲ್ಲ ಎನ್ನುವವನಿಗೆ ಸಮರ್ಥಿಸುವ ಬಲವಿಲ್ಲ 
ಇದ್ದರೂ ಇಲ್ಲದಂತೆಯೆ ಇರುವ ದೇವನಿಗದು ಬೇಕಿಲ್ಲ
ಇಲ್ಲದಿದ್ದರೂ ಇದ್ದಂತಿರುವ ನಂಬಿಕೆಯು ಜಗಕೆಲ್ಲ 

ಅಣುರೇಣು ತೃಣಕಾಷ್ಟ ಚರಾಚರವಸ್ತುಗಳೆಲ್ಲ ದೇವರಂತೆ
ಮತ್ತೆ ಗುಡಿಯಾಕೆ ಮೂರ್ತಿಯಾಕೆ ಮತ್ಯಾಕೆ ಮಂತ್ರದ ಕಂತೆ
ಎಲ್ಲ ವ್ಯಾಪಾರದಹಿಂದೆ ಅಡಗಿಕುಳಿತಿರುವದು ಕಾಣದಾ ಕೈಯಂತೆ 
ಭಗವಂತನ ಸೃಷ್ಟಿ ಅಲ್ಲವಂತೆ  ಸ್ವಯಂ ನಿರ್ಮಿತ ವಸ್ತುಗಳಂತೆ 


 ಹೇಳಿಹರು ಪಂಡಿತರು ದೇಹವೇ ದೇಗುಲ ಜೀವವೆ ದೇವನು 
ಸೋಹ೦ಭಾವದಿ ಪೂಜಿಸು ತೊಡೆದು ಅಜ್ನಾನ ನಿರ್ಮಾಲ್ಯವನು 
ಇದೆಲ್ಲ ದ್ವಂದ್ವವ ಅರ್ಥೈಸಲಾಗದೆ ನಾನು ಸೋತೆ 
ಅದಕಾಗಿ ಆಸ್ತಿಕನಾಸ್ತಿಕ ಏರಡಾಗಿ ದ್ವಂದ್ವದಲಿ ಕುಳಿತೆ 


2 comments:

  1. ಮಹಾಬಲ...

    ಎಲ್ಲವೂ ನಂಬಿಕೆ... ವಿಶ್ವಾಸ...

    ಇದೆ ಎಂದರೆ ಇದೆ...

    ಇಲ್ಲಾ ಎಂದರೆ ಇಲ್ಲ...

    ನಾಸ್ತಿಕರೂ.. ಆಸ್ತಿಕರೂ ಇಬ್ಬರೂ ಖುಷಿಯಿಂದ ಇದ್ದಾರೆ..

    ಎಲ್ಲವೂ ನಂಬಿಕೆ...

    ಚಂದದ ಸಾಲುಗಳಿಗೆ ಅಭಿನಂದನೆಗಳು....

    ReplyDelete