Wednesday, March 23, 2011

ಬಾಲ್ಯ ಅದೆಷ್ಟು ಸುಂದರ ಅಲ್ವಾ..................?

ಚಿತ್ರ ಕೃಪೆ ದಿಗ್ವಾಸ್ ಹೆಗ್ಡೆ 

ಬಾಲ್ಯ ಅದೆಷ್ಟು ಸುಂದರ ಅಲ್ವಾ.....? ಮೇಲಿನ ಫೊಟೋ ನೋಡ್ತಾ ಇದ್ದಂತೆ ನನ್ನ ಮನಸ್ಸು ಬಾಲ್ಯದ ಬಾಲ ವನದಲ್ಲಿ ಒಂದು ಸುತ್ತು ವಿಹಾರಕ್ಕೆ  ಹೋಯ್ತು.ಇಷ್ಟೊತ್ತಿಗೆ ನಿಮ್ಮ ಮನಸ್ಸೂ ಬಾಲವನದಲ್ಲಿ ಪ್ರವೇಶ ಮಾಡಿ ಆಗಿರುತ್ತದೆ.ಬಾಲ್ಯದ  ನೆನಪುಗಳ ಪಳೆ ಉಳಿಕೆಗಳೇ ಹಾಗೆ. ಅದನ್ನ ಮನಸ್ಸಿನ ಮ್ಯೂಸಿಯಂನಲ್ಲಿ ಭದ್ರವಾಗಿರಿಸಿ ಅಪರೂಪಕ್ಕೂಮ್ಮೆ ಅಲ್ಲಿ ಒಂದು ಸುತ್ತು ಹೋಗಿ ಬರಬೇಕು ಅದರ ಮಜವೇ ಬೇರೆ....!

ಕೆಲವು ಬಾಲ್ಯದ ನೆನಪುಗಳು ಇಂದಿಗೂ ನವ ನವೀನ .ಅದು ಬಿಟ್ಟೆನೆಂದರೂ ಬಿಡದೆ ಜೊತೆಯಲ್ಲಿರುವ ನಮ್ಮ  ನೆರಳಿನಂತೆ.ಬಾಲವನದಲ್ಲಿ ನಮಗೆ ಆಡಲು ಪ್ರಕೃತಿಯಲ್ಲಿ ಎಂತೆಂತಹಾ ಸಾಧನಗಳಿದ್ದವು ನೆನಪಿದೆಯಾ? ಅದನ್ನು ಈಗಿನ ಕಾಲದಂತೆ ದುಡ್ಡುಕೊಟ್ಟು ತರಬೇಕಾಗಿರಲಿಲ್ಲ.ನಾವು ಸಣ್ಣವರಿರುವಾಗ ಪೀಪಿ (ಸೀಟಿ)ಅಂತ ಮಾಡ್ತಿದ್ದೆವು. ಅದು ಶಹನಾಯಿ ಇದೆಯಲ್ಲ  ಅದರಂತೆ ಊದಲು ಮಸ್ತ್ ಇರುತ್ತಿತ್ತು. ಪೀಪಿ ಮಾಡುವದು ಸಿಂಪಲ್ ಆಗಿತ್ತು. ಅರೆ ಬೆಳೆದ ಕುಂಟುನೇರಳೆ ಎಲೆಯನ್ನ ಸುತ್ತಿ ಅದರ ಒಂದು ತುದಿಯನ್ನ ಸ್ವಲ್ಪ ಒತ್ತಿ ಚಿಕ್ಕದು ಮಾಡಿದರೆ ಪೀಪಿ ರೆಡಿ. ಊದದ್ದೇ ಊದದ್ದು ನಮ್ಮದೇ ಸ್ವಂತ ಸ್ವರ. ಈಗಲೂ ನಾನು ಊರಿಗೆ ಹೋದಾಗ ಕುಂಟು ನೇರಳೆ ಎಲೆಯನ್ನ ಕಂಡರೆ ಕುಯ್ದು ಮೊದಲಿನ ತರಹ ಊದುತ್ತೇನೆ. ಆದರೆ ಮೊದಲಿನ  ತನ್ಮಯತೆ ಬರುವದಿಲ್ಲ. ಯಾರದರು ನೋಡಿಯಾರು ಅನ್ನುವ ಭಯ ಬೇರೆ.ಇನ್ನು ಹೊಳೆಯ ಅಂಚಿನಲ್ಲಿ ಬೆಳೆದುನಿಂತ ಹೊಳೆ ಬಿದುರನ್ನ ಕತ್ತರಿಸಿ ಮಧ್ಯದಲ್ಲಿ ತೂತುಮಾಡಿ ಕೊಳಲಿನಂತೆಯೆ ಊದುತ್ತಿದ್ದೆವು.ಸ್ವರಯಾವುದೋ ಲಯ ಯಾವುದೋ ಅದರೂ ಹೊಮ್ಮುತ್ತಿತ್ತು ನಾದ .....! 

ಮತ್ತೆ ಬೇಲಿಯ ಬದಿಯಲ್ಲಿ ಅಂಟುವಾಳ ಅನ್ನೋ ಬೇಸಿಗೆಯಲ್ಲಿ ನೀರಿಲ್ಲದೆ ಬದುಕಬಲ್ಲ ಗಿಡವೊಂದು ಇರುತ್ತಿತ್ತು. ಅದರ ಎಲೆಯ ಬುಡದಲ್ಲಿ ಉದ್ದುದ್ದ ದಂಟು.ಆ ದಂಟನ್ನು ಮುರಿದಾಗ ಮದ್ಯದಲ್ಲಿ ಮೇಣ ಸುರಿಯುತ್ತದೆ. ಸುರಿಯುವ ಮೇಣವನ್ನ ಬಾಯಿಂದ ಊದಿದಾಗ ಗುಳ್ಳೆಗಳ ಸಾಲು ಸಾಲೇ ಹೊರಹಮ್ಮುತ್ತಿತ್ತು. (bubble blower ತರಹ) ಗುಳ್ಳೆ ನಭೋಮಂಡಲದಲ್ಲಿ ವ್ಯಾಪಿಸಿದಕೂಡಲೆ ಅದೆಂತಹದೊ ಕುಶಿ. ಸಾಗವಾನಿ ಗಿಡದ ಎಳೆಯ  ಚಿಗುರನ್ನ ಅಂಗೈಲಿಟ್ಟು ತಿಕ್ಕಿ ಸ್ವಲ್ಪ ನೀರನ್ನ ಹಾಕಿದರೆ ಅಲ್ಲಿಗೆ ರಕ್ತದಂತಹ ಬಣ್ಣ ರೆಡಿ.ಅದನ್ನ ಕೈಗೆ ಮೈಗೆ ಹಚ್ಚಿಕೋಂಡು ರಕ್ತ ಸೋರುತ್ತಿದೆ ಅಂತ ಬೇರೆಯವರನ್ನ ನಂಬಿಸುತ್ತಿದ್ದೆವು. ಇನ್ನು ಕುಂಟುನೇರಳೆ ಮತ್ತು ದೊಡ್ಡ ನೇರಳೆ ಹಣ್ಣನ್ನ ಬಾಯಲ್ಲಿ ಹಾಕಿದ ಕೂಡಲೆ ನೀಲಿಯ ಬಣ್ಣದ ಮುಖ ನಮ್ಮದಾಗುತ್ತಿತ್ತು.

ಬಾಲ್ಯದ ನೆನಪುಗಳೇ ಹಾಗೆ. ಅದು ಕೆದಕಿತೆಂದರೆ ನಮ್ಮನ್ನ ಯಾವುದೋ ಲೋಕಕ್ಕೆ ಕರೆದು ಕೊಂಡು ಹೋಗುತ್ತದೆ.ಸುಡ್ಗಾಡ್ ಈ ಯವ್ವನ ಯಾಕಾದ್ರು ಬಂತೊ......? ಕಮೀಟ್ ಮೆಂಟ್ ಗಳು ಜಾಸ್ತಿ ಅಯ್ತು ಅನ್ಸೊಲ್ವಾ ....? ಬಾಲಕರಾದಾಗ ಏನಾದ್ರು ಕಮೀಟ್ಮೆಂಟ್ ಇತ್ತಾ....? ಇರ್ಲಿಲ್ಲ ಅಲ್ವಾ? ಇಂದು ಬೆಳ್ಗಾದ್ರೆ ಜವಾಬ್ದಾರಿ. ಅದು ಇದು ಅಂತ ನಮ್ಮನ್ನ ನಾವು ಸುದಾರ್ಸ್ಕೊಳ್ಳೊ ಹೊತ್ತಿಗೆ, ರಾತ್ರಿ ಹನ್ನೆರ್ಡಾಗಿ, ಮತ್ತೆ ಜವಾಬ್ದಾರಿ ನೆನ್ಪಾಗಿ ಬೆಳಿಗ್ಗೆ ಏಳಕ್ಕೆ ತಲೆಬಿಸಿಯಿಂದ ಏಲ್ಲಿಗೋ ಓಡ್ತಾ ಇರ್ತ್ತೀವಿ.

ಬಾಲ್ಯ ಅಂದರೆ  ಇನ್ನೂ ಬಿಚ್ಚಿಕೊಳ್ಳದ ಮೊಗ್ಗಿದ್ದಂತೆ . ಒಂದಿನ ನಮ್ಮಪ್ಪ ಹೇಳ್ತಿದ್ರು. ಇನ್ನೂ ನೆನಪಿದೆ. "ಮಗಾ ಈಗಿನ ಕಾಲದಂತೆ  ನಮಗೆ ಮಳೆಗಾಲದಲ್ಲಿ ಸೂಡಿಕೊಳ್ಳಲು ಛತ್ರಿ ಇರಲಿಲ್ಲಪ್ಪ. ಆಗ ನಾವು ಶಾಲೆಗೆ ಹೋಗುವಾಗ ತಾಳೆ ಎಲೆಯ ಕೊಪ್ಪೆ ಅಥವಾ ಕಂಬಳಿ ಸೂಡಿಕೊಂಡು  ಹೋಗಬೇಕಿತ್ತು ಗೊತ್ತಾ..? ಈಗ ನೋಡು ಛತ್ರಿ ಅಂತ ಬಂದಿದೆ" ಅಂತ. ನಮಗೆಲ್ಲ ಶಾಲೆಗೆ ಸೂಡಿಕೊಂಡು ಹೋಗಲು  ಉದ್ದ ಕಾವಿನ ಕೊಡೆಯನ್ನ ತಂದುಕೊಡುತ್ತಿದ್ದರು.ಆಗಿನ್ನೂ ಬಟನ್ ಛತ್ರಿಗಳ ಹಾವಳಿ ಇರಲಿಲ್ಲ. ಉದ್ದುದ್ದ ಕಾವಿನ ಕಪ್ಪು ಛತ್ರಿಯನ್ನ ಹಿಡಿದುಕೊಂಡು ಹೋಗುವದು ಮಜಾ ಇರ್ತಿತ್ತು.ಉದ್ದ ಕಾವಿನ ಛತ್ರಿಯ ಉಪಯೋಗ ಬಹಳ. ದಾರಿ ಮಧ್ಯದಲ್ಲಿ ಮುಳ್ಳುಹಣ್ಣು ಕುಯ್ಯಲು,ಗೇರುಹಣ್ಣು ಉದುರಿಸಲು, ಬಹುಮುಖ ಅನುಕೂಲವಿತ್ತು.ಶಾಲಾ ದಿನಗಳಲ್ಲಿ ಉದ್ದಕಾವಿನ ಛತ್ರಿಯು ಹೊಡೆದಾಟದ ಸಾಧನವಾಗಿಯೂ ಬಳಕೆಯಾಗುತ್ತಿತ್ತು.

ಛೆ....!. ಯಾಕಾದ್ರೂ ನಾವು ದೊಡ್ಡವರಾದ್ವಿ ಅನ್ಸುತ್ತೆ ......! ಕಾಲಿಹೊಡೆವ ಬ್ಯಾಂಕ್ ಅಕೊಂಟ್, ರಿಸರ್ವಿಗೆ ಬಂದ ಬೈಕ್ , ಕಟ್ಟಬೇಕಾದ EMI ,ಮುಗಿಸಲೇ ಬೆಕಾದ ಒಪ್ಪಿಕೋಂಡ ಕೆಲಸ, ಅರ್ಧ ನಿಂತ ಮನೆಯ ಪೇಂಟಿಂಗ್ ಕೆಲಸ,ರೀಚಾರ್ಜ್ ಬೇಡುತ್ತಿರುವ ಮೊಬೈಲ್ ,ಧರಿದ್ರ ಟಿ.ವಿ ತೋರಿಸುವ ಮೈನೆಸ್ ಬ್ಯಾಲೆನ್ಸ್. ತಿಂಗಳ ಕೊನೆಗೆ ಎಲ್ಲಿಂದಲೋ ಅಚ್ಚಾಗಿ ಬರುವ ಕರೆಂಟ್ ಬಿಲ್, ವಾಟರ್ ಬಿಲ್.ಅಡಿಗೆ ಮನೆಯಲ್ಲಿ ಖಾಲಿ ಹೊಡೆಯುವ  ಸಾಮಾನು ಡಬ್ಬ,ಇಂದೋ ನಾಳೆಗೋ ಮುಗಿದುಹೋಗುವ ಗ್ಯಾಸ್ ಡ್ರಮ್,ತೊಳೆಯದೇ ನೇತುಹಾಕಿರುವ ಬಟ್ಟೆಗಳ ರಾಶಿ,ನಿನ್ನೆ ಬೇಯಿಸಿ ಹೆಚ್ಚಾದ ಅನ್ನದ ಮುಗ್ಗಿದ ವಾಸನೆ.ಟೂತ್ ಪೇಸ್ಟ್ ಕಾಲಿಯಾದಮೇಲೂ ಉಧರ ಸೀಳಿದರೆ ಒಂಚೂರು ಫೇಸ್ಟ್ ಇರಬಹುದೆಂಬ ನಂಬಿಕೆ. ನಾಳೆ ಆಫೀಸಿಗೆ ಹೋಗಬೇಕೆಂದರೆ ಇವತ್ತೇ ಸಿದ್ದಮಾಡಿಟ್ಟೂಕೊಳ್ಳಬೇಕಾದ ಪ್ರೆಸೆಂಟೇಶನ್. ಇವೆಲ್ಲವನ್ನ ನಿರ್ವಹಿಸುವ ಒಂಚೂರು ಜರೂರತತ್ತಾದರೂ ಬಾಲ್ಯಕ್ಕಿತ್ತಾ ......? ಇಲ್ಲ ಅಲ್ವಾ....? ಅದ್ಕೆ ಬಾಲ್ಯ ಅಂದ್ರೆ ಗ್ರೇಟ್ ಅನಿಸಿಕೊಳ್ಳುತ್ತೆ.

ಆಗ ನಾವು ಶಾಲೆಗೆ ಹೋಗುವಾಗ  ಈಗಿನ ತರಹ ಬಿಸಿ ಊಟದ ವ್ಯವಸ್ಥೆ ಇರಲಿಲ್ಲ.ನಮಗೆ ಆಗ ಉಪ್ಪಿಟ್ಟು ಅಂತ ಕೊಡ್ತಿದ್ರು(ಅನೇಕ ಪೌಷ್ಠಿಕ ಧಾನ್ಯಗಳ ಮಿಶ್ರಣ) ಅದನ್ನ ದಿನಾ ಸಾಯಂಕಾಲ ಶಾಲೆ ಬಿಡುವ ವೇಳೆಯಲ್ಲಿ ಒಂದೋಂದು ಹುಟ್ಟು ಕೊಡ್ತಿದ್ರು .ಕೆಲವು ಹುಡುಗ್ರು ಅದನ್ನ ಮನೆಗೆ ತೆಗೆದುಕೊಂಡು ಹೋಗಿ ರೊಟ್ಟಿಮಾಡಿ ತಿಂತಿದ್ರು.ಮತ್ತೆ ನನ್ನಂತ ಆಟಾವಳಿ ಹುಡ್ಗ್ರು  ಅದನ್ನ ಬಾಯಲ್ಲಿ ಹಾಕಿಕೋಂಡು ಉಸ್ಸಂತ ಊದಿ  ಗಾಳಿಯಲ್ಲಿ  ತೇಲಿ ಬಿಡುತ್ತಿದ್ದೆವು.  ಎಲ್ಲಾ ಕಡೆ ಧೂಮದಂತೆ  ಹಾರಾಡಿದಾಗ ಅದರಲ್ಲೇ ನಾವು ಖುಶಿ ಪಡ್ತಿದ್ದೆವು. ಶಾಲೆಯಿಂದ ಬರುವಾಗ ನೆಟ್ಟಗೆ ಮನೆಗೆ ಬರುವ ಚಾಳಿ ನಾವ್ಯಾವತ್ತೂ ಇಟ್ಟು ಕೊಂಡಿರಲಿಲ್ಲ.

ಇನ್ನು ಬೇಸಿಗೆಯ ರಜೆಯಲ್ಲಿ ಅಜ್ಜನ ಮನೆಗೆ ಹೋಗುವದು ಅನ್ನುವದು ಸಣ್ಣವರಿರುವಾಗ ಅದೊಂದು ಅಲಿಖಿತ ನಿಯಮವೇ ಆಗಿತ್ತು.ನನಗಂತೂ  ಹೊನ್ನಾವರದಿಂದ ಸಿರ್ಸಿ ತನಕ ಬಸ್ಸು ಪ್ರಯಾಣ ಮಾಡುವದೆಂದರೆ  ಅಂದಿನ ದಿನಗಳಲ್ಲಿ ಅದ್ಭುತವಾದ ಒಂದು ಉತ್ಸವವನ್ನ ನೆರವೇರಿಸಿದ ಸಂತೋಷವಾಗಿತ್ತು.ನಾವು  ದೊಡ್ಡವರಾದಮೇಲೆ ಅಜ್ಜನ ಮನೆಯಲ್ಲಿ ಸಾಲು ಸಾಲು ಅತ್ತೆಯರು ಬಂದರು.  ಈಗ ಅಜ್ಜ ಮತ್ತೆ ಅಜ್ಜಿ ಇಲ್ಲದ ಅಜ್ಜನಮನೆ ಉತ್ಸಾಹವನ್ನೇ ಕೊಡುವದಿಲ್ಲ.ಬೆಳೆದು ಕೆಲಸದಲ್ಲಿರುವ ಮಾವನ ಮಗ ಯಾಕೋ ನಮ್ಮನ್ನ  ದುಡ್ಡು ಮತ್ತು ಅಂತಸ್ಸಿಗನುಗುಣವಾಗಿ ಆಧರ ತೋರಿಸ್ತಾನೇನೋ ಅನ್ನುವ ಅಳುಕು ಮನಸ್ಸಿಗೆ.

ಇನ್ನೂ ನೆನಪಾಗುವ ಅನೆಕ ವಿಷಯಗಳುಂಟು,ಮುಂದೊಂದಿನ ಸವಿಸ್ತಾರವಾಗಿ ಮಾತಾಡೋಣ.ಯಾಕೋ ಉದ್ದುದ್ದ ಬರೆಯುತ್ತಿದ್ದರೆ ನಿಮಗೂ ಬೇಸರ  ಆಗಬಹುದು. ಮುಂದೊಂದಿನ ಆ ಬಾಲ್ಯದ  ಆಟದ ಬಗ್ಗೆ, ನಾವು ತೋಟದಲ್ಲಿ ಆಡುತ್ತಿರುವ ಯಕ್ಷಗಾನದ ಬಗ್ಗೆ, ಮತ್ತೆ ಮಳೆಗಾಲದಲ್ಲಿ ನಾವು ಕಟ್ಟುವ ಡ್ಯಾಂಮ್ ಬಗ್ಗೆ, ಹೊಳೆ ಹಳ್ಳ ಭಾವಿಯಲ್ಲಿ ಈಸಾಡಿ ಹೊಡ್ತತಿಂದಿದ್ದನ್ನ.ಬಾಯಿಚಪಲಕ್ಕೆ ಶಾಲೆಗೆ ತೆಗೆದುಕೊಂಡು  ಹೋಗುತ್ತಿದ್ದ ತಿಂಡಿ ಮತ್ತು ಅದರ ರಸವತ್ತಾದ ಕಥೆಯನ್ನ.ಹುಡುಗಾಟದಲ್ಲಿ ಮಾಡಿದ ಕಳುವಿನ ಬಗ್ಗೆ , ಹಾಣೆಗೆಂಡೆ ಮುಂತಾದ  ಆಟಗಳನ್ನಾಡಿ ಹಣೆ ಒಡೆದುಕೊಂಡು ಬ್ಯಾಂಡೇಜ್ ಹಾಕಿಕೊಂಡಿದ್ದರಬಗ್ಗೆ,  ಆಗ ನಾವು ಹಿಡಿದು ಸಾಕುತ್ತಿರುವ ಬಗೆ ಬಗೆಯ ಪಕ್ಷಿಯ ಬಗ್ಗೆ, ಹುಳ ಹಪ್ಪಡೆಯ ಬಗ್ಗೆ,ಪ್ರಾಣಿಗಳ ಬಗ್ಗೆ,ಬ್ಯಾಣ ಬೆಟ್ಟದಲ್ಲಿ ಸುತ್ತಿ ಕುಯ್ದುಕೊಂಡು ಬರುವ ಪರಿಗೆ ಹಣ್ಣು,ಮುಳ್ಳಣ್ಣು ಸಂಪಿಗೆಯ ಹಣ್ಣು,ಮಾಲೆ ಹಣ್ಣು(ದಾಸವಾಳ ಹಣ್ಣು)ಬಿಕ್ಕೆ ಹಣ್ಣು,ರಂಜಲೆ ಹಣ್ಣು,ಪ್ಯಾರಲೆ ಹಣ್ಣು,ಜಂಬೆ ಹಣ್ಣು,ಬಿಳಿ ಮುಳ್ಳುಹಣ್ಣು,ನೇರಳೆ ಹಣ್ಣು, ಕದ್ದು ತಿನ್ನುವ ಏಳೆನೀರು, ಮತ್ತೆ ಹಸಿ ಗೇರು ಬೀಜವನ್ನ ಸುಲಿದು ಸುಟ್ಟುಕೋಳ್ಳುತ್ತಿರುವ ಕೈಗಳ ಬಗ್ಗೆ, ಮಳೆಗಾಲದಲ್ಲಿ  ಬಗೆಬಗೆಯ ಮೀನು,ಏಡಿ,ಆಮೆ, ಹಿಡಿಯುವ ಸಾಹಸದ ಕಥೆ, ಮುಂಗಾರಿನಲ್ಲಿ ಹಾರಾಡುವ ಮಿಂಚುಳ್ಳಿಯನ್ನ ಹಿಡಿದು ಗಾಜಿನ ಡಬ್ಬದಲ್ಲಿ ಹಾಕಿ ರಾತ್ರಿಯಲ್ಲಿ ಲೈಟಿನಂತೆ ತೂಗುಹಾಕುವ ಕ್ರಮ,ಬೇಸಿಗೆಯಲ್ಲಿ  ಮಾವಿನ ಹಣ್ಣಿಗೋಸ್ಕರ ಮಾವಿನ ಮರದ ಕೆಳಗೆ ನಡೆಯುತ್ತಿದ್ದ ಹೊಡೆದಾಟದಬಗ್ಗೆ.ಇನ್ನು ಅಡ್ಡ ಹೆಸರು ಉದ್ದಹೆಸರಿನ ಬಗ್ಗೆ ನಡೆಯುವ ವಾಗ್ವಾದ ಮತ್ತು ಅದಕಾಗಿ ಮಾಸ್ತರರಹತ್ತಿರ ತಿಂದ ಒದೆಗಳ ಬಗ್ಗೆ,ಬಾಡಿಗೆಯ ಸೈಕಲ್ ಬಗ್ಗೆ,ಪಲ್ಟಿಗಾಡಿಯಬಗ್ಗೆ,ಟಾಯರ್ ರೇಸಿನ ಬಗ್ಗೆ,  ಬಾಲ್ಯದ ಬಿಟ್ಟೆನೆಂದರೂ ಬಿಡದೆ ಕಾಡುವ ನೆನಪುಗಾಳನ್ನ ಮುಂದೊಂದು ದಿನ ಬರೆಯುತ್ತೇನೆ. ಇವತ್ತಿಗೆ ಸಾಕು ಬಾಲ್ಯದ ನೆನಪು. ಮುಂದೊಂದಿನ ಮತ್ತೆ ನೆನ್ಪುಮಾಡ್ಕೊಳ್ಳೋಣ. ಸಾರಿ ಮೈಡಿಯರ್ ಬ್ರದರ್ಸ್ ಎಂಡ್  ಸಿಸ್ಟರ್ಸ್ ಕಳೆದುಹೋದ  ಬಾಲ್ಯವನ್ನ ನೆನಪಿಸಿ ನಿಮ್ಮನ್ನ ಮತ್ತೆ ನಾನು ವಾಸ್ತವೀಕತೆಗೆ ಕರೆತರ್ತಾ ಇದ್ದೇನೆ. ಮತ್ತೆ ಸುತ್ತಿಕೊಳ್ಳತೊಡಗುತ್ತದೆ ಕಮೀಟ್ ಮೆಂಟ್ ಗಳು,  ಜವಾಬ್ದಾರಿಗಳು, ನೆನ್ಪು ಮಾಡ್ಕೊಳ್ಳಿ ಒಲೆಯ ಮೇಲೆ ಇಟ್ಟ ಕುಕ್ಕರ್ ಎರಡು ಸೀಟಿ ಹೊಡೆಯಿತೋ ಮೂರೋ ಎಂದು.ಅಣ್ಣಂದಿರಾ ಮತ್ತೆ  ಈಗಲೇ ತೆಗೆದಿಟ್ಕೊಳ್ಳಿ ನಾಳೆ ಕಟ್ಟಬೇಕಾದ ಯುಟಿಲಿಟಿ ಬಿಲ್ಲುಗಳನ್ನ......!



14 comments:

  1. ಬಾಲ್ಯದ ನೆನಪು, ಅದೆ೦ದಿದ್ದರೂ ಹಸಿರು. ನಿಮ್ಮ ಬಾಲ್ಯದ ತು೦ಟಾಟದ ಕ್ಷಣಗಳನ್ನು ಮೆಲುಕು ಹಾಕುತ್ತ ನನ್ನ ಬಾಲ್ಯವನ್ನೂ ನೆನಪಿಸಿದಿರಿ. ಜೊತೆಜೊತೆಗೆ ಕಟು ವಾಸ್ತವದ ಒಗ್ಗರಣೆ ಬೇರೆ. ಹೌದು ಬಾಲ್ಯದ ನೆನಪಿಗೆ ಮುದಗೊಳ್ಳುತ್ತ, ಕಟ್ಟಬೇಕಿರುವ ಯುಟಿಲಿಟಿ ಬಿಲ್ಡಿ೦ಗಿನಷ್ಟು ಎತ್ತರದ ಯುಟಿಲಿಟಿ ಬಿಲ್ಲುಗಳನ್ನು ಎತ್ತಬೇಕಿದೆ. ಚೆನ್ನಾಗಿದೆ ಬರಹ.

    ReplyDelete
  2. ಮಧುರವಾದ ಬಾಲ್ಯದ ಬಗೆಗೆ ಮಧುರವಾದ ಬರಹ. ಮಡಚಲು ಬಾರದ ಈ ತಾಳೆ ಎಲೆಗಳ ಛತ್ರಿಯನ್ನು ನಾನೂ ಸಹ ಬಳಸುತ್ತಿದ್ದದ್ದು ನೆನಪಾಯಿತು.

    ReplyDelete
  3. ಧನ್ಯವಾದಗಳು PARAANJAPE ಸರ್

    ಬಾಲ್ಯದ ನೆನಪು
    ಮನದ ಮೂಲೆಯಲ್ಲಿ ಹಸಿರಾಗಿ
    ಅದೆಷ್ಟು ಸಂತೋಷವನ್ನ ಕರುಣಿಸುತ್ತದೆ ಅಲ್ಲವೇ ....?
    ಈ ಪ್ಯಾಟೆಯಲ್ಲಿ ದಿನ ಬೆಳಗಾದರೆ
    ಅದೇ ರಸ್ತೆ ಅದೇ ಬಿಲ್ಡಿಂಗ್ ಮತ್ತದೆ ಪಾರ್ಕು
    ಇಲ್ಲೆಲ್ಲೂ ಬಾಲ್ಯದ ಆ ಕುರುಹುಗಳನ್ನ ಕಾಣಲು ಸಾಧ್ಯವೇ
    ಇಲ್ಲವೇನೊ ಎಂಬಂತ ಪರಿಸರ.................
    ನಿಜ್ವಾಗ್ಲು ಬೇಜಾರಾಗುತ್ತೆ ಅಲ್ವ...!

    ReplyDelete
  4. sunaath sir.... ಧನ್ಯವಾದ

    ನನ್ನ ಬಾಲ್ಯದ ದಿನಗಳಲ್ಲಿ ನಾನು ತಾಳೆ ಎಲೆಯ ಛತ್ರಿಯನ್ನ ನೋಡಿದ್ದೆ... ಅದರೆ ಬಳಸಿರಲಿಲ್ಲ ..... ನಾನು ಸುಮಾರು ಐದು ಆರು ವರ್ಷ ಚಿಕ್ಕವನಿರುವಾಗ ಹಂಚಿನ ಬದಲು ಮಳೆಗಾಲದ ಆರಂಭದಲ್ಲಿ ತಾಳೆ ಎಲೆಯನ್ನ ನಮ್ಮ ಮನೆಯ ಚಾವಣಿಗೆ ಹೊದೆಸುತ್ತಿದ್ದರು. ಆಮೇಲೆ ಹಂಚಿನ ಮನೆ ಬಂತು.ಈಗಂತೂ ಎಲ್ಲೆಲ್ಲೂ RCC ಮನೆಗಳದ್ದೇ ಕಾರುಬಾರು.....

    ReplyDelete
  5. ಮಹಾಬಲಗಿರಿ, ಬಾಲ್ಯದ ನೆನಪೇ ಹಾಗೆ ಒಂದಿಲ್ಲೊಮ್ಮೆ ಪ್ರತಿಯೊಬ್ಬರನ್ನು ಕಾಡಿಸುತ್ತೆ.
    ಇದನ್ನ ಓದಿ ನಾನು ನನ್ನ ಬಾಲ್ಯದ ನೆನಪನ್ನ ಮೆಲಕು ಹಾಕ್ತ ಇದ್ದಿ :)

    ReplyDelete
  6. ಪ್ರೀತಿಯ ಗಣಪತಿ (ಕಲಾವಿದ)

    ಬಾಲ್ಯದ ನೆನಪೇ ಹಾಗೆ .......... ಇಷ್ಟು ಬೇಗ ಬಾಲ್ಯ ಕಳೆಯಬಾರದಿತ್ತು ಅನ್ಸುತ್ತೆ.....
    ಆಗ ಚಡ್ಡಿಹಾಕಿಕೊಂಡು ಎಲ್ಲಿಂದರಲ್ಲಿ ಸುತ್ತುತ್ತಾ
    ಪ್ರಕೃತಿಯಲ್ಲಿ ನಲಿಯುತ್ತ ನಮ್ಮದೇ ಲೋಕದಲ್ಲಿ ಇರ್ತಿದ್ದೆವಲ್ಲ................
    ಈಗ ಕಾಂಕ್ರಿಟ್ ಕಾಡಿನಲ್ಲಿ ಅದಕ್ಕೆ ಆಸ್ಪದವೇ ಇಲ್ವೆನೋ
    ಅನ್ನುವತರ ನಾವು ಜವಾಬ್ದಾರಿಗಳನ್ನ ಮೈಮೇಲೆ ಎಳೆದುಕೊಂಡುಬಿಟ್ಟಿದ್ದೇವೆ ಅಲ್ಲವೇ........................

    ReplyDelete
  7. nijavaaglu haLeya nenapannu kedakida lekhana...

    tumbaa chennaagi barediddiri bhatre...

    ReplyDelete
  8. ಈಗಿನ ಮಕ್ಕಳ ಬಾಲ್ಯ ನೋಡಿದರೆ ನಮ್ಮ ಬಾಲ್ಯ ಎಷ್ಟು ಸರಳ ಸುಂದರವಿತ್ತು. ಆಟವೆಂದರೆ ನಿಜವಾದ, ಮೈ ಕೈ ತರಚಿಕೊಳ್ಳುತ್ತ, ಏಳುತ್ತ ಬೀಳುತ್ತ, ಮರ ಹತ್ತುತ್ತ, ನೀರಲ್ಲಿ ಆಡುತ್ತ ಬೆಳೆದವರು ನಾವು. ಈಗ ನಗರ ಬಿಡಿ, ಹಳ್ಳಿಗಳಲ್ಲೂ ದೊಡ್ಡವರು, ಚಿಕ್ಕವರು ಟಿವಿ, ಮೊಬೈಲ್, ಕಂಪ್ಯೂಟರ್ ದಾಸರಾಗಿಬಿಟ್ಟಿದ್ದಾರೆ. 'ಬಟನ್ ಒತ್ತುವುದೇ' ಈಗ ಮುಖ್ಯ ಕಾರ್ಯ ಎಲ್ಲರಲ್ಲೂ. ಬೇಸಿಗೆ ಶಿಬಿರ (summer camp) ಹೇಗೇ ಇದ್ದರೂ, ಅಜ್ಜನ ಮನೆ ಮಜಾ ಕೊಡುವುದೇ ಇಲ್ಲ. ಯಾಕಾದರೂ ದೊಡ್ಡವರಾದೆವೋ ಎನಿಸುತ್ತದೆ

    ReplyDelete
  9. ಇಲ್ಲ ಇಲ್ಲ !!! ನನ್ನ ಪಾಲಿಗಂತೂ ಯೌವನವೇ ಸುಂದರ!!! ಬಾಲ್ಯ ಒಂದು ಅನುಭವವಷ್ಟೇ!!! ಸುಂದರ ಯೌವ್ವನ!!!

    ReplyDelete
  10. @ ದಿನಕರ ಸರ್ -ಧನ್ಯವಾದ ಹಳೆಯ ನೆನೆಪುಗಳೇ ಹಾಗಲ್ಲವೇ ಬಾಲ್ಯದ ನೆನಪಿನ ಬುತ್ತಿಯಲ್ಲಿ ಎಂತಹ ಸುಮಧುರ ಘಟನಾವಳಿಗಳು ಬಚ್ಚಿಕೊಂಡಿದೆ . ಯಾಕೋ ಒಮ್ಮೊಮ್ಮೆ ನೆನೆಪಾದಾಗ ಅದರಿಂದ ಉಂಟಾಗುವ ಸಂತೋಷ ಅನುಭವಿಸಲು ಚನ್ನಾಗಿರುತ್ತದೆ ಅಲ್ಲವೇ.............?

    @ ದೀಪಸ್ಮಿತಾ -ನೀವು ಹೇಳಿದಂತೆ ಆಗ ನಾವು ಅನುಭವಿಸಿದ ಬಾಲ್ಯ ಇದೆಯಲ್ಲ ಅದು ಯಾವ ಶಡ್ಯುಲ್ ನಲ್ಲಿ ಬಂದಿಸಿ ನಮ್ಮ ಸ್ವಾತಂತ್ರ್ಯ ವನ್ನ ಕಸಿದುಕೊಂಡಿರಲಿಲ್ಲ.ಆದರೆ ಈಗಿನ ಮಕ್ಕಳ ಬಾಲ್ಯ ಯಾಕೋ ಸೀಮಿತ ಚಟುವಟಿಕೆ ಮತ್ತು ಚೌಕಟ್ಟಿನಲ್ಲಿ ಬಂಧಿತವಾಗಿದೆಯೇನೊ ಅನ್ನುವ ಯೋಚನೆ ಬರುತ್ತದೆ. ನಿಮ್ಮ ಅನುಭವವನ್ನ ಹಂಚಿಕೋಂಡಿದ್ದಕ್ಕೆ ಧನ್ಯವಾದ

    @ ಸುಬ್ರಮಣ್ಯ ಮಾಚಿಕೊಪ್ಪ-: ಧನ್ಯವಾದ ನೀವು ಹೇಳಿದಂತೆ ನಾನು ಬಾಲ್ಯ ಒಂದೇ ಸುಂದರ ಎನ್ನಲಾರೆ ಯವ್ವನವೂ ಸುಂದರ ಆದರೆ ಬಾಲ್ಯದಲ್ಲಿ ನವು ಅನುಭವಿಸಿದ ಆ ಮುಕ್ತತೆ ಇದೆಯಲ್ಲ ಅದನ್ನ ಯವ್ವನದಲ್ಲಿ ನಾವು ಕಾಣಲಾರೆವು.

    @ ವಾಣಿ ಅಕ್ಕ- ಧನ್ಯವಾದ ಬಾಲ್ಯದ ನೆನಪಿನ ತರಂಗಗಳು ಎಳೆಯೆಳೆಯಾಗಿ ಬಿಚ್ಚಿಕೊಳ್ಳತೊಡಗಿದರೆ ಅದರಿಂದ ಉಂಟಾಗುವ ಸಂತೋಷಕ್ಕೆ ಮಿತಿ ಇಲ್ಲ ಅಲ್ಲವೇ........

    ReplyDelete
  11. very nice adhara madhu vadhoonaam endaagabeku

    ReplyDelete
  12. ಧನ್ಯವಾದಗಳು ಅನಾಮಿಕರೆ .....ಕ್ಷಮಿಸಿ.... ತಪ್ಪನ್ನ ತಿದ್ದಿದ್ದೇನೆ

    ReplyDelete
  13. ಮಹಾಬಲರೇ, ಭಳಾರೆ..ಬಹಳ ಛಂದ್ ಬರೆದ್ರಿ..ಬಾಲ್ಯಕ್ಕೆ ಹೋಯ್ತು ನನ್ನ ಮನಸ್ಸು ಸುಮಾರು ವರ್ಷ ಹಿಂದಕ್ಕೆ ಆ ಊರು ಆ ತೋಪು ಆ ಮಾವು ಆ ಬಿದ್ದ ನೋವು//.. ಎಲ್ಲಾ ನೆನಪಾಯ್ತು ನಿಮ್ಮ ಲೇಖನ ಓದಿ...

    ReplyDelete