Monday, April 11, 2011

ಬೇಸಿಗೆಯ ದಾಹಕ್ಕೆ ಪಾನಕ......

 ಶೆಕೆ...! ಶೆಕೆ....! ಶೆಕೆ..........! ............. ಮನೆಯ ಎಲ್ಲಾ ಕಿಟಕಿ ತೆಗೆದು ಫ್ಯಾನ್ ಸ್ವಿಚ್ ಹಾಕಿ ಒಂಟಿ ಚಡ್ಡಿಮೇಲೆ ಕುಳಿತುಕೊಂಡ್ರೂ ಅದೇನೊ ಅಲವರಿಕೆ. ಮಧ್ಯಾಹ್ನದ ಟೈಂನಲ್ಲಿ ಏನಾದ್ರು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡ್ರೋ ಮುಗೀತ್ ಕಥೆ. ಅನಾನಸ್ ಜಾಮ್ ಆಗ್ಬಿಡ್ತೀವಿ. ದಾಹ....! ಎಸ್ಟು ನೀರು ಕುಡಿದ್ರೂ ಸಾಲದು. ಮನೆಯ ಮಿನರಲ್ ವಾಟರ್ ಕ್ಯಾನ್ ಸರಾಗವಾಗಿ ಒಂದರಮೇಲೊಂದರಂತೆ ಖಾಲಿ ಖಾಲಿ.....ಪಾಪ ನಮ್ಮ ಆಂಟಿಯಂದಿರ ಅತ್ತಿಗೆಯಂದಿರ ಕಥೆ ಇನ್ನು ಹ್ಯಾಗೋ ..? ಸಣ್ಣ ಅಡುಗೆಮನೆಯ ಉರಿವ ಯಬೆಂಕಿ ಹೈರಾಣಾಗಿಸಿರುತ್ತದೆ .... ಹೆ.....! ತತ್ತರಿಕಿ.....! ಬೋರ್ವೆಲ್ ವಾಟರ್ ಬರ್ತಾ ಇಲ್ಲ.ಟ್ಯಾಂಕರವನಿಗೆ  ಪೋನ್ ಮಾಡಿ ಎಸ್ಟೊತ್ತಾದ್ರೂ ಬಂದಿಲ್ಲ.. ಸಾಕೂ ಗುರೂ ಬೇಸಿಗೆ. ಸ್ವಲ್ಪ ಮಳೆರಾಯ ಕರುಣೆ ತೋರಪ್ಪಾ ತಂದೆ ಅಂತಿರುವ ಸಮಯದಲ್ಲಿ ಬೇಸಿಗೆಯ ರಜೆಯಾದ್ದರಿಂದ ಯಾರೋ ನೆಂಟರು ಬಂದ್ರು ಅಂತ  ಪಾನಕ ಮಾಡ್ಲಿಕ್ಕೆ ಅತ್ತಿಗೆ ಅಥವಾ ನಮ್ಮ ಆಂಟಿ ಒಳಗೆ ಓಡ್ತಾಳೆ .... ರಸ್ನಾ .....! ಫ್ರಿಜ್ ನಲ್ಲಿಟ್ಟ ಕೋಕಂ......!  ಮತ್ತೇನುಂಟು ಈ ಬೆಂಗಳೂರಲ್ಲಿ...? ಇವೆರಡು ಬಿಟ್ರೆ ಮತ್ತೆ ಅದೇ  ಕೊಕಕೋಲ, ಪೆಪ್ಸಿ ,ತಮ್ಸಪ್, ಉಹುಮ್ .............! ಆವರಿಸಿಕೊಂಡು ಬಿಟ್ಟಿದೆ ಹಾಳಾದ್ ಹೊಟ್ಟೆ ಕೆಡಿಸೋ ತಂಪು ಪಾನೀಯಗಳು. ಸುಂದರವಾಗಿ ಪ್ಯಾಕ್ ಮಾಡಿದ ಅಮುಲ್ ಮಜ್ಜಿಗೆ. ಅದಕ್ಕೆ ಕೊಳೆತು ಹೋಗದಿರಲೆಂದು ಮಿಕ್ಸ ಮಾಡಿದ ಕ್ಯಮಿಕಲ್.  ಕುಡಿಯುವದಕ್ಕೇನೊ ಮಜಾ ಇರುತ್ತೆ.ಅಮೇಲೆ ಒಳ್ಗಿಂದಾನೇ ಸಾಯ್ಸುತ್ತೆ .ನಮ್ಮ ಇಂತಿರ್ಪ ಬೇಸಿಗೆಯ ಕಾಲದಲ್ಲಿ ನೆನಪಾಗುತ್ತೆ ಅಲ್ವಾ ಊರಿನಲ್ಲಿ ಅಮ್ಮ ಮಾಡಿಕೊಡುವ ತರತರಹದ ಪಾನಕ....? ಆಹಾ......!  ಅದೆಂತಹ ರುಚಿ,ಅದೆಂತಹ ನ್ಯಾಚುರಲ್....  ಬಿಡಿ...! ಒನ್ಸಾರಿ ನೆನಪು ಮಾಡ್ಕಂಡ್ ಬಿಡೋಣ...ಕುಡ್ದಾಂಗೆ ಅನ್ಕೊಂಡು ಬಿಡೋಣ.. 

ಕೆಲವು ನನಗೆ ಗೊತ್ತಿರುವ ಪಾನಕದ ವೆರೈಟಿಗಳನ್ನ ಇಲ್ಲಿ ನೆನಪು  ಮಾಡ್ತೇನೆ.ಮೊದಲಿಗೆ  ನಿಂಬು ಪಾನಕ ನಿಮ್ಗೆಲ್ಲಾ ಗೊತ್ತೆ ಇದೆ ಅದನ್ನ ಜೋನಿ ಬೆಲ್ಲ ಹಾಕಿ ಸ್ವಲ್ಪ ಮೆಣಸಿನ ಕಾಳು ಹಾಕಿ ಪಾನಕ ಮಾಡಿ ಕುಡಿದರೆ ಎಂತಾ ರುಚಿ ಅಂತೀರಿ ... ಸಕ್ರೆ ಅರೋಗ್ಯಕ್ಕೆ ಒಳ್ಳೆಯದಲ್ಲ. ಉದ್ದಿನ ಕಾಳಿನ ಪಾನ್ಕ ಕುಡಿಯದೆ ಸುಮಾರು ವರ್ಷ ಆಗಿಹೋಯ್ತು ಒಂದುಮುಷ್ಟಿ ಉದ್ದಿನಕಾಳನ್ನ ಹುರಿದು ಅದನ್ನ ರುಬ್ಬಿ ಬೆಲ್ಲ ಹಾಕಿ ಪಾನಕ ಮಾಡಿದರೆ ಅದೆಂತಹ ಘಮ ಘಮ ತಂಪು ತಂಪು...ಅದೇರೀತಿ ಪಚ್ಚಹಸರು (ಹೆಸರುಕಾಳು green gram) ಅದನ್ನೂ ಕೂಡ ಉದ್ದಿನ ಪಾನಕ ಮಾಡುವ ಮೆತೆಡ್ ನಲ್ಲಿ ಮಾಡಿದರೆ ಕುಡಿಯಲು ರುಚಿಕರ. ಯಳ್ಳು ಪಾನಕ ಮಾಡುವ ರೀತಿಯೂ ಇದೇತರಹದ್ದು. ಅವಲಕ್ಕಿ ಪಾನಕ ನೀವು ಕುಡಿದಿರ್ಲಿಕಿಲ್ಲ. ಅವಲಕ್ಕಿಯನ್ನ ನೆನೆ ಹಾಕಿ ಅದನ್ನ ಸ್ವಲ್ಪ ಕೈಯ್ಯಿಂದ ಗಿವುಚಿ ಬೆಲ್ಲ ಮತ್ತೆ ಕಾಯಿ ಹಾಲು ಅಥವಾ ಕಯಿತುರಿ ಮತ್ತೆ ಸ್ವಲ್ಪ ಯಾಲಕ್ಕಿ ಹಾಕಿ ಪಾನಕಾವಿಗಿಸಿದ್ರೆ ನಿಮ್ಗೆ ಎನರ್ಜಿಗೆ ಮತ್ತೇನೂ ಬೇಡ. ಮತ್ತೆ ಮೊಗೆಕಾಯಿ ಬೀಜ (ಮಂಗಳೂರು ಸೌತೆಕಾಯಿ) ಅದು ಬೇಸಿಗೆಯಲ್ಲಿ ಅಂಮೃತ ಇದ್ದಂತೆ ಅದರ ಸಂಗೃಹಿಸಿದ ಬೀಜವನ್ನ ಸ್ವಲ್ಪ ಹೊತ್ತು  ನೆನೆ ಹಾಕಿ ಅದನ್ನ ಚನ್ನಾಗಿ ರುಬ್ಬಿ ತದನಂತರ ಜಾಳಿಗೆಯಿಂದ ಸೋಸಿ  ಬೆಲ್ಲ ಅಥವಾ ಸಕ್ಕರೆ ಸೇರಿಸಿ ಹದಮಾಡಿ ಕುಡಿದರೆ ಅದರಷ್ಟು ತಂಪು  ರುಚಿ ಮತ್ತೆ ಆರೋಗ್ಯಕ್ಕೆ ಒಳಿತಾಗುವಂತಹದ್ದು ಯಾವುದೂ ಇಲ್ಲ.


 ಇನ್ನು ಮಂಗಳೂರು ಸವತೆಜಾತಿಯ ಇಬ್ಬುಡ್ಡಲ ಹಣ್ಣು (ಅದ್ಕೆ ಏನಂತಾರೋ ನನಗೆ ಗೊತ್ತಿಲ್ಲ)(ಸಿಹಿಸೌತೆ ಅನ್ನಬಹುದು  ಅಂತ ಊಹೆ  ) ಚನ್ನಾಗಿ ಬಲಿತ ಹಣ್ಣನ್ನು ಗಿವುಚಿ ಬೆಲ್ಲ ಹಾಕಿದ್ರೆ  ಫಿನಿಶ್..! ಅಲ್ಲಿಗೆ ಇಬ್ಬುಡ್ಡಲ ಹಣ್ಣಿನ ಪಾನಕ ರೆಡಿ,.ಹಣ್ಣಿನ ರಾಜ ಮಾವಿನ ಹಣ್ಣಿನ ಪಾನಕಕ್ಕೆ ಬರೋಣ ಜೀರಿಗೆ ಹುಳಿಮಾವಿನ ಹಣ್ಣನ್ನ ಹಾಗೆ ಸುಮ್ಮನೆ ನೀರಲ್ಲಿ ಗಿವುಚಿ ಬೆಲ್ಲ ಹಾಕಿ ಅಥವಾ ಸಕ್ಕರೆ ಹಾಕಿ ಪಾನಕ ಮಾಡಿದರೆ ಆಹಾ ರುಚಿಯೋ ರುಚಿ.. ನಾವು ಕುಡಿತೇವಲ್ಲ ಸ್ಲೈಸ್ ಅದನ್ನ ಮೀರಿಸುತ್ತದೆ.ಇನ್ನು ಯಾವಾಗಲೋ ಮಾಡಿದ ಕೋಕಂನ್ನ ಗ್ಲಾಸಿಗೆ ಬಗ್ಗಿಸುವದಕ್ಕಿಂತ ಫ್ರೆಶ್ ಅದ ಪುನರ್ಪುಳಿ ಯನ್ನ (ಮುರುಗಲ ) ಬೀಜ ಸಹಿತ ನೀರಿನಲ್ಲಿ ಹತ್ತು ನಿಮಷ ನೆನೆಸಿಟ್ಟು ಅದಕ್ಕೆ ಸಕ್ಕರೆ ಅಥವಾ ಬೆಲ್ಲ ಸೇರಿಸಿದರೆ ಮುರುಗಲ ಹಣ್ಣಿನ ಪಾನಕ ರೆಡಿ.ಮತ್ತೆ ಅದರಲ್ಲಿ ಇನ್ನೊಂದು ತರಹ ಬಿಳಿ ಪುನರ್ಪುಳಿ ಅಂತ ಇರುತ್ತದೆ ಅದು ಸಿಕ್ಕುವದು ಸ್ವಲ್ಪ ಕಷ್ಟ ಅದನ್ನ ಬೆಳೆಯುವವರು ಕಡಿಮೆ. ಅದರ ಪಾನಕವು ಆರೋಗ್ಯಕ್ಕೆ ಉತ್ತಮವಾದದ್ದು.ಹಿಸ್ಬಲ್ ಬೀಜ ಅಥವಾ ತಂಪು ಬೀಜದ ಪಾನಕದ ವಾಡಿಕೆಯೂ ಉಂಟು. ಮತ್ತೆ ದಾಸವಾಳ ಹೂವಿನ ಪಾನಕವೂ ಅಷ್ಟೇನು ಚಲಾವಣೆಯಲ್ಲಿಲ್ಲದಿದ್ದರೂ ಒಮ್ಮೆ ಕುಡಿದ ದಾಖಲೆ ಉಂಟು. ಇನ್ನು ರಾಗಿಯನ್ನ ಚನ್ನಾಗಿ ಹುರಿದು ರುಬ್ಬಿ ಬೆಲ್ಲ ಹಾಕಿದರೆ ರಾಗಿ ಪಾನಕ ರೇಡಿ.ಮಿತ್ರ ಗಣಪತಿಯವರು ಪಾನಕದ ಬಗ್ಗೆ ಕೇಳಿದಾಗ  ಮಜ್ಜಿಗೆ ಹುಲ್ಲಿನ ಪಾನಕದ ವಿಷಯ ಹೇಳಿದ. ಮಜ್ಜಿಗೆ ಹುಲ್ಲಿನ ಪಾನಕ (lemongrass) ಇದನ್ನ  ಮಾಡುವ ವಿದಾನ ಹೀಗಿದೆ. ಮಜ್ಜಿಗೆಗೆ ಸ್ವಲ್ಪ" ಮಜ್ಜಿಗೆ ಹುಲ್ಲನ್ನ" ರುಬ್ಬಿ ಹಾಕಿ ಬೆಲ್ಲ ಸೇರಿಸಿದರೆ ಲೆಮೆಗ್ರಾಸ್ ಪಾನಕ ರೆಡಿ. ಇನ್ನು ಬೇಸಿಗೆಯಲ್ಲಿ ಮಹಾ ಚೈತನ್ಯ ನೀಡುವ ಮಸಾಲ ಮಜ್ಜಿಗೆ ಇದು ಪಾನಕದ ಜಾತಿಗೇ ಸೇರಿಸಬಹುದಾಗಿದೆ.


ಇನ್ನು ಮುಖ್ಯವಾಗಿ ರಾಮನ ನವಮಿಗೆ ಮಾಡುವಂತಹ ಪಾನಕವನ್ನ ಬೆಲ್ಲ, ಶುಂಟಿ, ಹುಣಿಸೇಹುಳಿ ರಸ ಸೇರಿಸಿ  ಪಾನಕ ಮಾಡುತ್ತಾರೆ. ಉಳಿದ ಹಣ್ಣಿನ ಜೂಸ್ ಅಂತೂ ನಿಮಗೆ ಗೊತ್ತೇ ಇದೆ ಜ್ಯೂಸ್ ಮತ್ತೆ ಪಾನಕಕ್ಕೆ ಸ್ವಲ್ಪ ವ್ಯತ್ಯಾಸವಿದೆ... ಪಾನಕ ಜರೂರತ್ತಿನಲ್ಲಿ ಬೆಲ್ಲ ಅಥವಾ ಸಕ್ಕರೆಯೊಡನೆ ತಯಾರಾಗುವಂತದ್ದು. ಇನ್ನು ಜೂಸ್/ ಹಣ್ಣಿನ ರಸ ಪಾನಕಕ್ಕಿಂತ ಸ್ವಲ್ಪ ಭಿನ್ನ ಅಂತ ಹೇಳಬಹುದು. ನೆನಪಾಗದೇ ಉಳಿದಿರುವ ಹತ್ತು ಹಲವು ಬಗೆಯ ಪಾನಕಗಳುಂಟು... ನಿಮಗೇನಾದರು ನೆನಪಾದರೆ ನನಗೂ ಹೇಳಿ.

*****************

6 comments:

  1. ಪಾನಕ ಕುಡಿದು ಹೊಟ್ಟೆ ತಣ್ಣಗಾಯ್ತು...:)

    ReplyDelete
  2. ನಮ್ಮ ಬಾಯಲ್ಲಿ ನೀರು ತರಿಸಿ....
    ಮನಸ್ಸಲ್ಲೇ ತಂಪಾಗಿರಿಸಿದ ನಿಮಗೆ ವಂದನೆಗಳು..

    ಹಾಳು ಪೆಪ್ಸಿ, ಕೋಲಾಗಿಂತ ಇವು ಆರೋಗ್ಯಕ್ಕೂ ಒಳ್ಳೆಯದು...

    ReplyDelete
  3. ಪಾನಕ ಕುಡಿದು ಖುಷಿ ಆಯ್ತು..ನಮ್ಮೂರಲ್ಲೂ ಇದೆಲ್ಲಾ ಮಾಡ್ತಾರೆ .

    ReplyDelete
  4. good one :)

    I have listed few here :

    http://archana-hebbar.blogspot.com/2011/03/blog-post_18.html

    ReplyDelete
  5. Bhatre,

    Lekhanada moolaka ella paanakagalannu kudisi manassannu tampagisiddiri...Thank u...

    ReplyDelete
  6. ಏಯ್ ತಮ್ಮಾ ಅವಲಕ್ಕಿ ಪಾನ್ಕ ಬಿಟ್ಟಿಕಿದ್ಯಲ

    ReplyDelete