Thursday, June 2, 2011

ಗಂಭೀರ ಆಗಿರೋದು ಅಂದ್ರೇನು ಗುರೂ ..... ?


ಹ್ವಾಯ್ ಸ್ವಲ್ಪ ಸುಮ್ನಿರ್ತ್ಯ ....... ಮಾತು ಹೆಚ್ಚಾಯ್ತು ನಿಂದು. ಅಂತ ಹೇಳುವಷ್ಟರ ಮಟ್ಟಿಗೆ ನನ್ನ ಮಾತು ಉದುರುತ್ತಲೇ ಇರುತ್ತದೆ. ಮೊನ್ನೆ ಒಂದಿನ ಊಟ ಮಾಡುವಾಗ ಗೆಳೆಯ ಅದ್ಯಾವುದೋ ವ್ಯಕ್ತಿಯ ಪರಿಚಯ ಇದೆಯಾ ಅಂತ ಕೇಳಿದ. ಇಲ್ಲ ಅಂತ ತಿಳಿಸಿದೆ.ಅವನು ಗೊತ್ತಿಲ್ವೇನೋ. ಹಲುಬುತ್ತಾನಲ್ಲ.(ವಾಚಾಳಿ) ಸ್ವಲ್ಪ ಮಾತು ಜಾಸ್ತಿ ಅಂದ. ಹಾಂ ....! ಈಗ ಗೊತ್ತಾಯ್ತು ಅಂದೆ. ಮುಖದಲ್ಲಿ ಮಂದಹಾಸವನ್ನ ತಂದುಕೊಳ್ಳುವ ಪ್ರಯತ್ನ ಮಾಡಿದೆ. ನನ್ನ ಮನಸ್ಸಿಗೆ ಆಲೋಚನೆ ಬರತೊಡಗಿತು. ನಾನೂ ಒಮ್ಮೊಮ್ಮೆ ಹೀಗೆ ಮಾತಾಡ್ತೇನೆ. ಪಕ್ಕದವರು ಸುಧೀರ್ಘವಾಗಿ ಕೇಳಿಸಿಕೊಳ್ಳುವ ತಾಳ್ಮೆ ಇದೆ ಅಂತಾದರೆ ಕುಯ್ತಾನೇ ಇರ್ತೇನೆ.ನನ್ನ ಬಗ್ಗೂ ನಾಳೆ ಎಲ್ಲಾದ್ರೂ ಯಾರಾದ್ರೂ ಪರಿಚಯ ಹೇಳ್ಬೇಕು ಅಂದ್ರೆ, ಇಂತಹದೇ ಗುರುತನ್ನ ಬಳಸಬಹುದೇ ?  ಅನ್ನುವ ಕಸಿವಿಸಿಯೂ ಆಯಿತು.
ಇಲ್ಲಪ್ಪ... ಎದುರುಗಡೆಯಲ್ಲಿ ಕುಳಿತವನಿಗೆ ದೀರ್ಘವಾಗಿ ಮಾತನಾಡಲು ಅವಕಾಶ ಮಾಡಿಕೊಡಬೇಕು. ಅವನು ಹೇಳಿದ ಮಾತಿನ ಮೇಲೆ ನನ್ನದೊಂದು ಚಿಕ್ಕ ಅಭಿಪ್ರಾಯ ಇರಬೇಕು ಅಂತ ಸಾವಿರ ಸಲ ನನಗೆ ನಾನೇ ಮಾತಿಗೆ ಬ್ರೇಕು ಹಾಕಿಕೊಂಡವ.ಅದರೂ ಒಮ್ಮೊಮ್ಮೆ ಖಾಸಾ ಖಾಸಾ ದೋಸ್ತರ ಮುಂದೆ ಲಗಾಮಿಲ್ಲದ ಕುದುರೆಯಂತೆ ಮಾತನಾಡುತ್ತಲೇ ಇರುತ್ತೇನೆ.

ನಾನು ಕೆಲವು ಮನೆಗಳಲ್ಲಿ ಗಮನಿಸಿದ್ದೇನೆ. ಒಬ್ಬ ಹಿರಿಯ ವ್ಯಕ್ತಿ ಇರುತ್ತಾನೆ.ಅವನು ಅಣ್ಣನೋ ಅಪ್ಪನೋ ಅಜ್ಜನೋ,ಯಾರೋ ಆಗಿರುತ್ತಾರೆ. ಅವರು ಮನೆಯಲ್ಲಿ ಇದ್ದಾರೆಂದರೆ ಸೂಜಿ ಕೂಡ ಬಿದ್ದರೆ ಶಬ್ಧ ಬರುವಷ್ಟು ನಿಶ್ಶಬ್ಧವಿರುತ್ತದೆ ವಾತಾವರಣ. ಮಕ್ಕಳು ಅವರ ಮುಂದೆ ಮಾತಾಡುವುದು ಇರಲಿ, ಅತ್ತಿಂದಿತ್ತ ಇತ್ತಿಂದತ್ತ ಓಡಾಡಲೂ ಹೆದರುತ್ತಾರೆ.ಹೆಂಗಸರು ಅಡಿಗೆಮನೆಯಲ್ಲಿ ಹಾಡು ಹೇಳಿಕೊಳ್ಳುವದಕ್ಕೂ ಹೆದರ್ತಾರೆ. ಅವನು ಹೆಚ್ಚು ಮಾತನಾಡುವದಿಲ್ಲ.ಒಂದು ಎರಡು ಮೂರಕ್ಕೆ ಮುಕ್ತಾಯ.ಅದೂಕೂಡ ಆಜ್ಞೆಯ ರೂಪದಲ್ಲಿರುತ್ತದೆ. ಕೆಲವು ಸಲ ಕಣ್ಣಿನ ಸನ್ನೆಯಲ್ಲಿಯೇ ಮಾತು ಮುಕ್ತಾಯವಾಗಿರುತ್ತದೆ.
ಒಂದು ಹಿಡಿ ನಗು, ಒಂದು ಜೋಕ್ಸ್, ಒಂದು ಗುನುಗುಡುವ ಹಾಡು, ಸ್ಪೂರ್ತಿ ತುಂಬುವಂತಹ ಮಾತು, ಅಕ್ಕರೆಯ ನುಡಿ,ಉಹೂಂ...! ಅದ್ಯಾವುದೂ ಅಲ್ಲಿರುವದಿಲ್ಲ. ಅಲ್ಲಿ ಘನ ಗಂಭೀರ, ಅದ್ಯಾವುದೋ ಲ್ಯಾಬಿನಲ್ಲಿ ವಿಜ್ಞಾನಿ ಓರ್ವ ಸಂಶೋಧನೆಯಲ್ಲಿ ತೊಡಗಿರುವಂತಹ ಸಂದರ್ಭ ಅಂತ ಭಾಸವಗದೇ ಇರಲಾರದು. ಅಂತಹವರ ಮನೆಗೆ ಹೋದಾಗ ನಾನು ಸುಮ್ಮನೆ ಕುಳಿತೆದ್ದು ಬಂದಿದ್ದಿದೆ. ಪಟ ಪಟ ಅಂತ ಎರಡು ಮಾತಾಡಿ ಒಂದು ಜೋಕ್ಸು ಹೇಳಿ. ಒಂದೆರಡು ಹಾಸ್ಯದ ಮಾತಾಡಿ ಬಾಯ್ತುಂಬಾ ನಕ್ಬುಟ್ಟು. ದೇಶ ಕಾಲ, ನುಡಿ, ಬಾಷೆ, ಪಕ್ಕದ್ಮನೆ ಮಾಣಿ, ಕೂಸು, ಕೇರಿ, ಬೀದಿ, ನಾಟಕ, ಯಕ್ಷಗಾನ, ತಾಳಮದ್ದಲೆ, ಸಂಗೀತ, ಸಿನಿಮಾ, ಅದು ಇದೂ ಚೂರು ಪಾರು ಅಂತ ಮಾತು ಬಿಚ್ಚಬೇಕು ಅಂತ ಹೋದವನು, ಅಥವಾ ಅದನ್ನೇ ಮಾಡುವ ಶುದ್ಧ ತಲೆಹರಟೆಯಂತಹ ನನ್ನಂತವನೂ ಕೂಡ ಚಹಾ ಕಪ್ಪನ್ನ ಕುಡಿದು ಕೆಳಗಿಡುವಾಗ ಶಬ್ಧವಾದೀತು ಅಂತ ನಿಧಾನಕ್ಕೆ ಇಟ್ಟು, ಹಾಗಾದ್ರೆ ಬರ್ತೇನೆ ಅಂತ ವಿನಯದಿಂದ ನಾಜೂಕಾಗಿ ಹೇಳಿಬಂದ ನಿದರ್ಶನವೂ ಇದೆ. ಆಗೆಲ್ಲ ನನಗೆ ಕಾಡುವ ವಿಷಯ ಏನು ಅಂದ್ರೆ ಜೀವನದಲ್ಲಿ ಗಂಭೀರ ಆಗಿ ಇರಬೇಕಾ ..? ನಮ್ಮವರೊಟ್ಟಿಗೆ ಒಂದು ತುಂಬು ನಗುವಿಲ್ಲದೆ,ಹರಟೆ ಇಲ್ಲದೇ, ಒಂದು ಜೋಕ್ಸ್ ಇಲ್ಲದೆ, ಹುಸಿ ಜಗಳ ವಿಲ್ಲದೆ,ಗಲಾಟೆ ಇಲ್ಲದೆ,ಸಾತ್ವಿಕವಾದ ಗೇಲಿ ಇಲ್ಲದೆ, ಚಿಕ್ಕದೊಂದು ಗುನುಗುವ ಹಾಡಿಲ್ಲದೆ, ಜೀವನವನ್ನ ಮುಗಿಸಬೇಕಾ ಅನ್ನುವ ಯೋಚನೆ ಕಾಡುತ್ತಲೇ ಇರುತ್ತದೆ.

ಜೀವನದಲ್ಲಿ ವಾಚಾಳಿತನ, ಪಟ್ ಪಟಾ ಅಂತ  ಮಾತಾಡುವದು,ಬೇಕಾದಲ್ಲಿ ಮಾತ್ರ ಸಮಯಕ್ಕೆ ಸಂದರ್ಭಕ್ಕೆ ತಕ್ಕಹಾಗೆ ಹಿತವಾಗಿ ಮಿತವಾಗಿ ಮಾತಾಡುವವರನ್ನ ಹತ್ತು ಹಲವು ಬಗೆಯವರನ್ನ ನಾವು ಕಾಣುತ್ತೇವೆ. ರೇಗಾಡುವವರನ್ನ, ಸಿಡುಕಿನವರು,ತಮ್ಮಲ್ಲೆ ಗೊಣಗುಡುವವರು,ತೊದಲುವವರು,ತಡಬಡಿಸುವವರು, ತಡಕಾಡುವವರು, ಮಾತಿನ ಮಧ್ಯದಲ್ಲಿ ಬಾಯಿ ಹಾಕಿ ಗಬಕ್ಕನೆ ಕಚ್ಚಿಬಿಡುವವರು, ಕಾಲೆಳೆಯುತ್ತಲೇ ಮಾತನಾಡುವವರು, ಯಾವಾಗಲೂ ಕೊಂಕು ನುಡಿ ಬೀರುವರನ್ನ, ಕರುಣಾರಸ ಪ್ರಾಧಾನ್ಯ ಮಾತುಗಾರರನ್ನ,  ಬುದ್ಧಿಯನ್ನ ಉಪಯೋಗಿಸಿ ಆಡುವಂತಹ ಬುದ್ಧಿವಂತ  ಮಾತುಗಾರರು, ಮತ್ತೆ ಕೆಲವರು ವಿಷಯಜ್ಞಾನ ಘನ ಗಂಭೀರ ಆಳ ನುಡಿಗಳಿಂದ ಶೋಭಿಪರನ್ನ, ಕೆಲವರು ಬಡಾಯಿಗಳು, ಕೊಚ್ಚಿ ಕೊಚ್ಚಿ ಗುಡ್ಡೆಹಾಕುವವರು,ವಾದಿಸುವವರು, ಎದುರು ನುಡಿಯುವವರು, ಹಾಡುವಂತೆ ಉಲಿಯುವವರು, ನುಲಿಯುವವರು, ಕಿವಿಕಚ್ಚಿ ಪಿಸುಗುಟ್ಟುವವರು,ಸ್ಪ್ಲಿಂಕ್ಲರ್ ನ್ನ ಬಾಯಿಗೆ ಜೋಡಿಸಿಕೊಂಡು ಮಾತನಾಡುವವರು,ಹುಂಬ ನುಡಿಯವರು,ಬಣ್ಣ ಬಣ್ಣದ ಮಾತನಾಡುವವರು, ಚಾಡಿ ಹೇಳುವವರು, ಭಗವದ್ಗೀತೆಯ ವಾಕ್ಯವನ್ನ ಧರಿಸಿ ಸತ್ಯಂಬ್ರೂಯಾತ್ ಪ್ರಿಯಂ ಬ್ರೂಯಾತ್.ನ ಬ್ರೂಯಾತ್ ಸತ್ಯಮ ಪ್ರಿಯಂ ಎಂದು ಮಾತನಾಡುವವರು, ಸಭೆಯಲ್ಲಿ ಬಾಗಿಸಿ ಗುಣಿಸಿ ಕೂಡಿಸಿ ಅಳೆದು ತೂಗಿ ಮಾತನಾಡುವವರು, ಜಗಳವನ್ನೇ ಮಾಡುವವರು,ಕೆಟ್ಟದ್ದನ್ನೇ ಮಾತನಾಡುವವರು, ಅಪಶಕುನ ನುಡಿಯುವವರು, ದುಖಃದ ಮಾತನ್ನೇ ಮುಂದುಮಾಡಿ ಮಾತನಾಡುವವರು, ಬಲದಿ ಮತ್ತಿನಲಿ ಘರ್ಜಿಸುವವರು, ನಡೆವಂತೆ ನುಡಿಯುವವರು, ಹಿತಭಾಶಿಗಳು, ಮಿತಭಾಷಿಗಳು. ವೇದಾಂತ ಮಾತನಾಡುವವರು, ಪಟ್ಟಿಮಾಡಲು ಹೋದರೆ ಉದ್ದವಾದೀತು.
ಹೌದು ಗುರೂ ಇದೆಲ್ಲವೂ ಮಾತಿನ ವೈಖರಿ. ಇದರಲ್ಲಿ ಯಾವ ಬಗೆಯನ್ನ ನೀವು ಅನುಸರಿಸಿ ಮಾತಾಡ್ತೀರೋ ಜನರು ನಿಮ್ಮನ್ನ ಹಾಗೆಯೇ ಗುರುತಿಸುತ್ತಾರೆ. ಉದಾಹರಣೆಗೆ ವೇದಾಂತವನ್ನೇ ಮಾತನಾಡುವವರಾದರೆ, ಹೇ...! ಅವನಾ ವೇದಾಂತಿ ಕಾಣೊ ಅನ್ನುವ ಗುರುತಿನಿಂದ ಗುರುತಿಸುತ್ತಾರೆ. ಮುಂದಿನದು ತಾಳೆ ಹಾಕಿಕೊಳ್ಳುವದು ನಿಮಗೆ ಬಿಟ್ಟದ್ದು, ಅದೆಲ್ಲಾ ಓಕೆ ಗುರು ಆದ್ರೆ ಜೀವನದಲ್ಲಿ ಗಂಭೀರ ಆಗಿರಬೇಕಾ ಅನ್ನುವ ಪ್ರಶ್ನೆಗೆ ನಾನು ಇನ್ನೂ ಉತ್ತರ ಹುಡುಕುತ್ತಾ ಇದ್ದೇನೆ. ನಮ್ಮವರೊಟ್ಟಿಗೆ ಒಂದು ತುಂಬು ನಗುವಿಲ್ಲದೆ, ಹರಟೆ ಇಲ್ಲದೇ, ಒಂದು ಜೋಕ್ಸ್ ಇಲ್ಲದೆ, ಹುಸಿ ಜಗಳ ವಿಲ್ಲದೆ, ಗಲಾಟೆ ಇಲ್ಲದೆ, ಸಾತ್ವಿಕವಾದ ಗೇಲಿ ಇಲ್ಲದೆ, ಚಿಕ್ಕದೊಂದು ಗುನುಗುವ ಹಾಡಿಲ್ಲದೆ ಬದ್ಕೋಕಾಗುತ್ತಾ ಅಂತ ಪ್ರಶ್ನೆ ನಂದು. ಹಾಗೆ ಬದುಕಿದ್ರೆ ಹಲುಬುತ್ತಾನೆ (ವಾಚಾಳಿ) ಅಂದುಕೋಳ್ತಾರಾ ಅನ್ನೋ ಭಯ ನನಗೆ. ನಂಗಂತೂ ಗೊತ್ತಿಲ್ಲ. ಗೊತ್ತಿದ್ರೆ ಉತ್ರಾ ಹೇಳಿ ಪ್ಲೀಸ್.
 (ಚಿತ್ರ ಕೃಪೆ ಅಂತರ್ಜಾಲದಲ್ಲಿ ಜಾಲಾಡಿದಾಗ ಸಿಕ್ತು ಗುರೊ...)

10 comments:

  1. ಮಹಾಬಲರೇ, ಗಾಂಭೀರ್ಯ ಇದ್ದಕಡೆ ಬಹುಶಃ ನಗು, ಕೀಟಲೆ, ತಮಾಶೆ ಎಣ್ನೆ ಸೀಗೇಕಾಯಿ....ಮನಸು ಮುದಗೊಳ್ಳಬೇಕಾದರೆ ನಗು ತಮಾಶೆ ಬೇಕು..ಆದ್ರೆ ಹಿತ ಮಿತ ಮತ್ತು ಇತರರಿಗೆ ತೊಂದರೆ ಆಗದಂತಿರಬೇಕು.....ಕೆಲವು ಪರಸ್ಥಿತಿಗಳೇ ಗಂಭೀರವಾಗಿರುತ್ತವೆ ಅಲ್ಲಿ..ಸಂದರ್ಭಕ್ಕೆ ತಕ್ಕಂತಿರಬೇಕು...ಜೋಕ್ ಎಲ್ಲಾರೂ ಹಂಚಿಕೊಂಡು ನಗುವಾಗ ಗಂಭೀರವಾಗಿದ್ದರೆ ಅದೇ ಜೋಕಾಗಬಹುದು...ಹಹಹಹ...
    ಚನ್ನಾಗಿದೆ ಮಂಥನ..ಕಥನ...

    ReplyDelete
  2. maatina bagegalanna super agi vivarane maadidde.. naavu maatada shyli modlinda belskand bandiddu.adanna alisaaki bereyade reetiyanna alavadisikollad kashta.. so henge maatadli, mansinda maataadavu, bereyavke kirikiri agdodang matadavu.

    ReplyDelete
  3. Nice article mahabala bhatre... well narrated...

    ReplyDelete
  4. ಮಹಾಬಲ..

    ಜೀವನ ಹೇಗಿದ್ದರೂ ಕಳೆದು ಹೋಗುತ್ತದೆ... ಗಂಭೀರವಾಗಿರಿ... ಮಾತಾಡ್ತಾ ಇರಿ..
    ಅದು ತನ್ನ ಪಾಡಿಗೆ ನಡಿತಾ ಇರ್ತದೆ..

    ನಗುತ್ತ, ಮಾತಾಡ್ತಾ ಇದ್ದರೆ ಒಳ್ಳೆಯದು ಅಲ್ಲವೆ?

    ಇನ್ನೊಂದು.. ಮಾತು..

    ನೀವು ವಾಚಾಳಿಯಾಗಿದ್ದರೆ... ಗಂಭೀರವಾಗಿರಲು ಸಾಧ್ಯವೇ ಇಲ್ಲ...
    ಹಾಗೇಯೇ ಗಂಭೀರವಾಗಿದ್ದವರು ವಾಚಾಳಿಯಾಗಲು ಸಾಧ್ಯವಿಲ್ಲ...

    ಇದೆಲ್ಲ ಒಳಗಿನ ಬಣ್ಣ ಸ್ವಾಮಿ...
    ಸ್ವಲ್ಪ ಷೇಡ್ ಬದಲಿಸ ಬಹುದೇ ಹೊರತು ಮೂಲ ಬಣ್ಣ ಬದಲಾಯಿಸುವದು ಸಾಧ್ಯವೇ ಇಲ್ಲ...

    ಚಂದದ ಲೇಖನಕ್ಕೆ ಅಭಿನಂದನೆಗಳು..

    ReplyDelete
  5. ಮಹಾಬಲರೆ,
    ನಗುವೇ ಜೀವನ;ಒಣಗಾಂಭೀರ್ಯವೇ ಮೃತ್ಯು ಎನ್ನುವದನ್ನು ಚೆನ್ನಾಗಿ ತಿಳಿಸಿದ್ದೀರಿ.

    ReplyDelete
  6. ಯಾರು ಹೆಂಗಾದ್ರೂ ಇರ್ಲಿ .......... ಉರೋರ ವಿಷ್ಯ ನಮಗ್ಯಾಕೆ...
    ನೀನ್ ಮಾತ್ರ ಹೀಗೆ ಬರಿತಾ ಇರು ಗುರು ..............
    "ಸಮಯಕ್ಕೆ ತಕ್ಕ ಸ್ವಾಭಾವಿಕಥೆ ಇದ್ದ್ರೆ ಅಷ್ಟೇ ಸಾಕು......."

    Nice writeup... :)

    ReplyDelete
  7. ಗಂಭೀರವಾಗಿರುವವರಿಗೆ ಜನರು ಹೆದರುತ್ತಾರೆಯೇ ಹೊರತು ಇಷ್ಟಪಡುವುದಿಲ್ಲ ಆದ್ದರಿಂದ ನೀವು ನಿಮ್ಮ ಹಾಗೆಯೇ ಮಾತನಾಡುತ್ತಿರಿ.. ಒಳ್ಳೆಯ ಬರಹ.

    ReplyDelete
  8. ಮಾತು ಬಲ್ಲವನಿಗೆ ಜಗಳವಿಲ್ಲ ಅಷ್ಟೆ :) ಚೆನ್ನಾಗಿದೆ ..

    ReplyDelete