Friday, May 6, 2011

ಒಂದು ಜೀವ ನಾಲ್ಕು ಭಾವ


ಗೆಳೆಯರೇ..... ಫೇಸ್ ಬುಕ್ ನಲ್ಲಿ ಗೆಳೆಯ ಪ್ರವೀಣ್ ಭಟ್  ಸಂಪ ಅವರು ಕೆಲವು ಚಿತ್ರಗಳನ್ನ ಹಾಕಿದ್ದರು. ಅದರಿಂದ ಆರಿಸಿ ಕೊಂಡ ಚಿತ್ರಕ್ಕೆ ಕವಿಗಳು ಮತ್ತು ಕವಯಿತ್ರಿಗಳಿಂದ, ಮುಪ್ಪಿನ ಮಗ್ಗುಲಿನ ಬಗ್ಗೆ  ನಾಲ್ಕು ಕವನಗಳು ಮೂಡಿಬಂದವು. ಬೇರೆಯವರನ್ನ ಯಾವಾಗಲೂ ಪ್ರೋತ್ಸಾಹಿಸುವ, ಗುರುತಿಸಿ ಬೆನ್ನುತಟ್ಟುವ ಪರಾಂಜಪೆಯವರು, ಹೂವಿನಂತಹ ಮನಸ್ಸಿನ ಅಕ್ಕ ವಾಣಿಶ್ರೀ ಭಟ್,  ಕವಿಮನಸಿನ ಕಪಟವಿಲ್ಲದ ಗೆಳೆಯ ಪ್ರವೀಣ್ ಭಟ್  ಸಂಪ. ಮತ್ತೆ ನಾನು ಇದಕ್ಕೆ ಕವನವನ್ನ ಬರೆದಿದ್ದೇವೆ.ಎಲ್ಲರ ಕವನವನ್ನ ಒಂದೇ ಸೂರಿನಲ್ಲಿ ಹಿಡಿದಿಡಬೇಕೆಂಬ ಕಾರಣದಿಂದ ನನ್ನ ಬ್ಲಾಗಿನಲ್ಲಿ ನಾಲ್ಕು ಕವನವನ್ನ ಪ್ರಕಟಿಸಿದ್ದೇನೆ. ಅಲ್ಲದೆ ನೆನಪಿನ ಸಾಲು 
( http://nenapinasalu.blogspot.com/ ) ನಲ್ಲಿಯೂ ಕೂಡ ಪ್ರತ್ಯೇಕವಾಗಿ ನೀವು ಓದಬಹುದು.
ಧನ್ಯವಾದಗಳು ಪ್ರೀತಿಯಿಂದ.


ಚಿತ್ರ  ಪ್ರವೀಣ್ ಭಟ್ ಸಂಪ
ನೆನಪೊಂದೇ ಹಸಿರು
ನೆನಪಿನಾಳದಲಿ ಅಡಗಿಹುದು ಆಹ್ಲಾದ ಭಾವ
ಪ್ರೀತಿಸುವವರಿಲ್ಲದೆ ಕುದಿಯುತಿದೆ ಮುದಿಜೀವ
ಬೋಳುಮರ ಚಿಗುರುವುದು ಪ್ರತಿ ವಸಂತದಲಿ
ಈ ಜೀವ ಎ೦ತು ಅರಳೀತು ಇಳಿವಯಸಿನಲಿ

ಬಾಲ್ಯದ ಹುಡುಗುತನ ಯೌವ್ವನದ ಪೊಗರು
ಇನಿಯನಿತ್ತ ಸವಿಮುತ್ತಿನ ನೆನಪ ಚಿಗುರು
ಬಾಳಿನುದ್ದ ಅನುಭವಿಸಿದ ಕಷ್ಟಗಳ ಒಗರು
ಪಡಿಮೂಡಿಸಿದೆ  ಕಣ್ಣ೦ಚಿನಲಿ ಹನಿ ಜಿಬುರು

ಕೈಯ್ಯಲಿಡಿದ ಕೋಲದು  ಊರುಗೋಲಲ್ಲ
ಭಾರವಾದ ಮನಸಿಗೆ  ಸಾ೦ತ್ವನವೇ ಇಲ್ಲ
ಜೀವನಪೂರ್ತಿ ದುಡಿದರು ಮುಗಿಯಲಿಲ್ಲ ವ್ಯಾಜ್ಯ
ಮುದಿಜೀವ ಎಲ್ಲರಿಗೂ ಬೇಡವೆನಿಸಿದ ತ್ಯಾಜ್ಯ 

ಪ್ರೀತಿಯಿಂದ ಕೆಲಸದ ಒತ್ತಡಗಳ ನಡುವೆ  ಕ್ಷಣಾರ್ಧದಲ್ಲಿ ಬರೆದು ಕೊಟ್ಟಿದ್ದು (ಪರಾಂಜಪೆ ಸರ್ )

ಒಂಟಿ ಬಯಲು
ನೆತ್ತಿ ಸುಡುವ ಬಿಸಿಲಿನಲಿ
ನೆರಳ ಹುಡುಕಿಹ ಜೀವವೇ
ಕುಸಿದು ಕುಳಿತೇಯಾ ಬದುಕ ವಾಸ್ತವವ ನೆನೆದು..

ಹಸಿರಾದ ಪೈರು,ಮಾಗಿ ಸೊಂಪಾದ ಕಾಳು
ಜಳ್ಳಾಗಿ ಉರುಳಿ ಹಾರಿದವೇ
ವಿಧಿಯ ಕ್ರೌರ್ಯಕ್ಕೆ ತಲೆಬಾಗಿ ಮಣಿದು...

ಒಂಟಿ ಬಯಲಿನಲಿ,ಒಂಟಿ ಮರದ ಅಳಲು
ಸೋತ ರಟ್ಟೆಯ ಕಷ್ಟ  ಕೇಳುವವರಾರಿಲ್ಲ
ಹರಿದ ಕಣ್ಣೀರು,ಕರಗಿ ಸೊರಗಿ ಬೆವರಾಗಿ ಸುರಿದು....

ಮರುಗದಿರು ಜೀವವೇ,ಮತ್ತೆ ಚಿಗುರದು ಹುಲ್ಲು
ಸಾಗಿ ಸವೆಯಲೇ ಬೇಕು ಬದುಕ ದಾರಿ...
ಹುಟ್ಟಿಸಿದ ದೇವರು ಹುಲ್ಲನೀಯುವ ತನಕ
ಸಲ್ಲಬೇಕು ಬರಡು ಭೂಮಿಗೂ ನೀರು ನ್ಯಾಯದಲ್ಲಿ......

ಅಕ್ಕ ಪ್ರೀತಿಯಿಂದ ಬರೆದ ಸಾಲುಗಳು (ವಾಣಿಶ್ರೀ ಭಟ್ )

ಮುಪ್ಪು ಸಿಹಿಯಲ್ಲ ಉಪ್ಪು!

ರಟ್ಟೆ ಗಟ್ಟಿಯಿದ್ದಾಗ
ರೊಟ್ಟಿ ಬೇಕಷ್ಟು ತಟ್ಟಿದ್ದೆ
ಸುಟ್ಟಿದ್ದೆ..
ಅಲ್ಲಷ್ಟು,ಇಲ್ಲಷ್ಟು
ಕಷ್ಟವೆನಿಸಲಿಲ್ಲ ಎಳ್ಳಷ್ಟೂ..
ನೇಸರ ಮೂಡುವ ಮುನ್ನ
ಹುಟ್ಟಿ ..
ಅವ ಸತ್ತಮೇಲೂ ಬದುಕಿದ್ದೆ..

ಅದು ವಸಂತ
ನೋಡಿದ್ದೆಲ್ಲಾ ಚಿಗುರು
ಬೆಳೆದಂತೆಲ್ಲಾ ಹಸಿರು
ಉಮೇದು ,ಉತ್ಸಾಹ ಉನ್ಮಾದ
ಕಾದು ಕರಗಿ ಬೆಂಡಾದರೂ
ಜಗಜಟ್ಟಿ
ತಣಿದಂತೆಲ್ಲಾ ಕಬ್ಬಿಣ
ಬಲು ಗಟ್ಟಿ..

ಕಾಲ ಕರಗಿ ಶಿಶಿರಾಗಮನ ಮುಪ್ಪಡರಿ
ಕಸುವಿನೆಲೆ ಉದುರಿ..
ದೇಹ ಮುದುರಿ..
ಕನಸು ಕಮರಿ..
ಇದು ಬಾಳು ಹಣ್ಣಾದ ಪರಿ

ಹೊಸ ಸೂರ್ಯ ಹುಟ್ಟಿದಂತೆಲ್ಲಾ
ಸಾವು ಹತ್ತಿರ
ಬೆಳಗು,ಮುಳುಗು ವ್ಯತ್ಯಾಸವೇನಿಲ್ಲ
ದೃಷ್ಠಿ ಬಹಳ ದೂರ
ಬಗ್ಗಿ ಕುಗ್ಗಿ ಬಾಗಿಹೋಗಿದೆ ಶರೀರ

ಊರಲೇ ಹರಿಯದ 
ದೇಹಕ್ಕೆ..
ಊರುಗೋಲೇ ಭಾರ !!

ಪ್ರೀತಿಯಿಂದ ಗೆಳೆಯ ಬರೆದದ್ದು (ಪ್ರವೀಣ್ ಭಟ್ ಸಂಪ)

ಮುದಿಯ ಜೀವ

ಮುದಿಯ ಜೀವ ಬೇಡುವದು ಆಸರೆಯ ಸಹಕಾರ
ಕೊನೆಯ ಗಳಿಗೆಗೆ  ಬೇಕು ಜೀವನಕೆ ಅಧಾರ
ಸಹಜ ಮೊಮ್ಮಕ್ಕಳ ಜೊತೆ  ಕಾಲಕಳೆಯುವದು 
ಸರಿಯಲ್ಲ ಮುಪ್ಪಿನಲಿ  ದುಡಿದು ತಿನ್ನುವದು 

ನಮ್ಮ ದೇಶದಜನಕೆ ತೆರೆದಿಲ್ಲ ಅವಕಾಶ 
ಬದುಕಬೇಕಾದರೆ ಪಡಬೇಕು ಆಯಾಸ
ಎಲ್ಲುಂಟು ವಿಮೆ ಬಾಂಡು ಉಳಿತಾಯ ಖಾತೆ 
ಬಡವರಿಗೆ ದಿನನಿತ್ಯ ಗ೦ಜಿಯದೇ ಚಿ೦ತೆ

ಗ್ರಾಮ್ಯವದು ಏಳಿಗೆಯಾದರೆ ದೇಶ ಉದ್ಧಾರ
ಗಾಂಧಿತಾತನ ಮಾತಿನಲ್ಲಡಗಿದೆ ಜೀವನ ಸಾರ
ಹಳ್ಳಿಯಲಿ ಪರದಾಡುವ ಮುದಿ ಜನರ  ನೋಡಿ
ಜನನಾಯಕರೆನಿಸಿಕೊಂಡವರು ಆ ಕಡೆ ಮುಖ ಮಾಡಿ

( ಮಹಾಬಲಗಿರಿ ಭಟ್ )

ಗೆಳೆಯರೇ ನಿಮ್ಮ ಪ್ರೀತಿಗೆ ಚಿರಋಣಿ. ಕವನ ಶೀರ್ಷಿಕೆಯನ್ನ ಒಂದು ಜೀವ ನಾಲ್ಕು ಭಾವ ಅಂತ ಹೆಸರು ಕೊಟ್ಟಿದ್ದೆ.ಅದನ್ನ ಈಗ ಒಂದು ಚಿತ್ರ ನೂರು ಭಾವ ಅಂತ ಮಾಡಿದರೆ ಸಮಂಜಸವಾದೀತು :) ಕಾರಣವಿಷ್ಟೇ ನನ್ನ ಪ್ರೀತಿಯ ಗೆಳೆಯರೆಲ್ಲ ಮೆಚ್ಚುಗೆಯಿಂದ ಪ್ರೀತಿಯಿಂದ ಮತ್ತೊಂದಿಷ್ಟು  ಕವನವನ್ನ ಕಳುಹಿಸಿ ಕೊಟ್ಟಿದ್ದಾರೆ. ಕವನ ಮತ್ತು ಫೋಟೊಗಳನ್ನ ನೋಡಿ ತಂಗಿ ನಾಗಶ್ರೀ ಉಪಾಧ್ಯಾಯ,ಒಂದು ಕವನವನ್ನ ಮೇಲ್ ಮಾಡಿದ್ದಾಳೆ. ಅದನ್ನ ಇಲ್ಲಿ ಪ್ರಕಟಿಸಿದ್ದೇನೆ. ಮತ್ತೆ  ದಿಲೀಪ್ ಹೆಗಡೆಯವರು ಕೂಡ ತಮ್ಮ ಉತ್ತಮ ಕವನವನ್ನ ಕಾಮೆಂಟಿನ ರೂಪದಲ್ಲಿ ಹಾಕಿದ್ದಾರೆ. ಅದನ್ನೂ ಕೂಡ ಇಲ್ಲಿ ಪ್ರಕಟಿಸಿದ್ದೇನೆ. ಅನಾಮಿಕ ಕವಿಯೊಬ್ಬರು ಪ್ರೀತಿಯಿಂದ ಕವನವನ್ನ ಇ- ಮೇಲ್ ಮುಖಾಂತರ  ಕಳುಹಿಸಿ ಕೊಟ್ಟಿದ್ದಾರೆ.ಅದನ್ನು ಸಹ ಇಲ್ಲಿ ಪ್ರಕಟಿಸಲಾಗಿದೆ.
ಧನ್ಯವಾದಗಳು ಪ್ರೀತಿಯಿಂದ.


ಮುಪ್ಪು ಅಡರಿದ ಮೇಲೆ .........


ಬಿಸಿಲಿನ ಜಳಕ್ಕೆ ತಲೆ ಕೊಟ್ಟು
ಜೀವನ ಕನಸನ್ನು ಹತ್ತಿಯ ಸೀರೆಯಲ್ಲಿ ಮಡಚಿಟ್ಟು
ಉಳುವ ಭೂಮಿಲಿ  ಕುಳಿತು
ಯೋಚನೆಯ ಪ್ರಪಾತದಲ್ಲಿ ಬೆವೆತು 
ಜಾರಿದ ಬದುಕಿನ ಪುಟವನ್ನು ತಿರುವಿದಾಗ
ಕಳೆದ ಆದಿನಗಳನ್ನ ಮುಪ್ಪು ಲೆಕ್ಕಚಾರ ಹಾಕಿದೆ//


ಹೇಗಿತ್ತು ಆ ನಮ್ಮ ಯವ್ವನದ  ಕಾಲ
ಸುಖ ದುಃಖದಲ್ಲೂ ಇತ್ತೊಂದು ತಾಳ ಮೇಳ
ಪರಿವೆಯೇ ಇಲ್ಲದೆ ಕಳೆದ ಆ ದಿನದಲ್ಲಿ
ಹೊಂದಿಕೆಯೇ ನಮ್ಮ ಒಲವಿನ ಪ್ರೀತಿಯ ದಾಳ //


ಯೌವನದ ಕ್ಷಣವನ್ನು ನೆನೆಸಿ ನೆನೆಯುವುದರಲ್ಲಿ
ಇರುವುದು ಏನೋ  ಆನಂದ
ಕೊರೆಯೋ ಮನದಲ್ಲೂ ಅರಳುವುದು
ಬದುಕ ಬೇಕೆಂಬ ಛಲದ ಸೌಗಂಧ //


ತಂಗಿಯ ಪ್ರೀತಿಯ ಬರಹ (ನಾಗಶ್ರೀ ಉಪಾಧ್ಯಾಯ )

ಜೀವನ ಎಂದರೆ ಮಗೂ, ತಿಂಗಳ ಕೊನೆಯ ಸಂಬಳದ ಚೆಕ್ಕಲ್ಲ...

ಇಷ್ಟವಾದರೆ ಲೈಕ್ ಮೇಲೊಂದು ಕ್ಲಿಕ್ಕು
ಸಮಯ ಇದ್ರೆ ಸ್ಮೈಲಿ ಜೊತೆ ಒಂದು ಕಾಮೆಂಟು
ಜೀವನ ಅಂದರೆ ಮಗೂ.. 
ಜಾಲದಿ ಬೆಸೆವ ಫೇಸ್ ಬುಕ್ಕಲ್ಲ...

ಇಷ್ಟವೋ-ಕಷ್ಟವೋ.. ಹೊಟ್ಟೆ ಹೊರೆಯಲು ಕೆಲಸ
ಅವರಿವರ ಆಜ್ಞೆಗೆ ಹೊರಬೇಕು ಹೊಲಸ
ಜೀವನ ಎಂದರೆ ಮಗೂ..
ತಿಂಗಳ ಕೊನೆಯ ಸಂಬಳದ ಚೆಕ್ಕಲ್ಲ...


ನಾಲ್ಕೇ ದಿನದ ಈ ನಂಟು..
ಬಂದವರು ಹೋಗಲೇಬೇಕು..
ಅವನು ಬರೆಸಿಕೊಂಡ ಅಗ್ರೀಮೆಂಟು...
ಹುಟ್ಟು ಸಾವಿನ ನಡುವೆ ಅದೆಷ್ಟೋ ಸೆಂಟಿಮೆಂಟು 
ಜೀವನ ಅಂದರೆ ಮಗೂ...
ಬರೀ ಮುಖದ ಮೇಲಿನ ಸುಕ್ಕಲ್ಲ.

ಪ್ರೀತಿಯಿಂದ ಕಾಮೆಂಟಿನ ರೂಪದಲ್ಲಿ ಕವನಿಸಿದ್ದು (ದಿಲೀಪ್ ಹೆಗಡೆ )

ನೆನಪೆ೦ಬುದು ಮಧುರ ಯಾತನೆ

ಇಳಿವಯಸೆ೦ಬ ಕವಲುದಾರಿಯಲ್ಲಿ
ನಿನ್ನದು ನಿರೀಕ್ಷೆ-ಪ್ರತೀಕ್ಷೆಗಳ ದೀಕ್ಷೆ 
ಬದುಕದೆಷ್ಟು ದಯನೀಯ ಅಧ್ಯಾಯ
ನಿನಗೆ ದಕ್ಕಿದ್ದು ಮಾತ್ರ ಇನ್ನಿಲ್ಲದ ಶಿಕ್ಷೆ

 ಕಳೆದು ಹೋದ ಮಳೆಗಾಲ ಗಳೆಷ್ಟೋ ಗೊತ್ತಿಲ್ಲ
ಬಸಿರೊಡೆದ ಕರುಳಕುಡಿಗಳ ಲೆಕ್ಕವಿಟ್ಟವರಿಲ್ಲ  
ಅದೆಷ್ಟು ಬಾರಿ ಕಟ್ಟೆಯೊಡೆಯಿತು ಭೋರ್ಗರೆವ  ದುಃಖ
ಬಿದಿಗೆಯ ಚ೦ದ್ರನ೦ತೆ ಬ೦ದುಹೋಯ್ತೇ ಸುಖ  

ಗದ್ದೆಯ ಬದುವಲಿ ನೆನಪಿನ ಸ೦ಚಿಯನು ಬಿಚ್ಚಿ
ಏನನೋ ಮೆಲುಕು ಹಾಕುತಿಹೆಯಲ್ಲ ಅಜ್ಜಿ
ನೆನಪು ಮಾತ್ರ  ಮಧುರ ವಾಸ್ತವ ಘನಘೋರ
ಆಗಿರಬೇಕು ನಿನಗೆ ಇದರ ಸಾಕ್ಷಾತ್ಕಾರ

ಪ್ರೀತಿಯಿಂದ ಇಮೇಲ್ ಮಾಡಿದವರು (ಅನಾಮಿಕ ಕವಿಗಳು )



ಜಿ.ಜಿ ಶಾಸ್ತ್ರಿ ಯವರು ಕರಾವಳಿ ರೈಲಿನಲ್ಲಿ ಗೆಳೆಯರು ಬರೆದ ಕವನವನ್ನ ನೋಡಿ ಹೀಗೆ ಪ್ರತಿಕ್ರೀಯಿಸಿದ್ದಾರೆ. ಇಂಗ್ಲೀಷ್ ಲಿಪಿಯಲ್ಲಿರುವದನ್ನ  ಕನ್ನಡದಲ್ಲಿ ಟೈಪಿಸಿ ಹಾಕಿ ಎಂದು ಪ್ರೀತಿಯಿಂದ ಹಾರೈಸಿ ಚಿಕ್ಕ ಕವನವನ್ನ ಕಳುಹಿಸಿ ಕೊಟ್ಟಿದ್ದಾರೆ. ಅವರಿಗೆ ಪ್ರೀತಿಯ ಪೂರ್ವಕ ಧನ್ಯವಾದಗಳು.

ನಿಜಕೂ ತುಂಬಾ ಸೊಗಸು 
ಹಾಡಿನ ಬಂಡಿಯ ಓಟವು
ಹೊಸ ಹೊಸ ಭೋಗಿಯ  ರೈಲು
ಹೊಸ ಹೊಸ ಹಾಡಿನ ಹೊಯಿಲು


ದೂರದ ತೀರದ ದಾರಿ 
ಸಾಗಲಿ ನಮ್ಮಯ ಪಯಣ 
ಭಾವದ ಹಳಿಗಳ ಮೇಲೆ 
ಬೆಸೆಯಲಿ ಸ್ನೇಹದ ಬಂಧ



10 comments:

  1. ನಾಲ್ಕು ಕವಿಗಳ ಈ ಕವನಗಳು ಅವರ ವಿಭಿನ್ನ ದೃಷ್ಟಿಯನ್ನು, ವಿಭಿನ್ನ ಶೈಲಿಯನ್ನು ಸಮರ್ಥವಾಗಿ ತೋರಿಸುತ್ತಿವೆ. ಈ ಪ್ರಯತ್ನಕ್ಕೆ ನನ್ನ hats off!

    ReplyDelete
  2. good poems sir.this is an achivement itself

    ReplyDelete
  3. ವಾಹ್..
    ಒಳ್ಳೇ ಪ್ರಯತ್ನ,ಕವನ ಬರೆದದ್ದೂ ಬರೆಸಿದ್ದೂ

    ReplyDelete
  4. ಎಲ್ಲವೂ ಅದ್ಭುತವಾಗಿವೆ..
    ನನ್ನದೂ ಒಂದು ಚಿಕ್ಕ ಪ್ರಯತ್ನ..



    ಇಷ್ಟವಾದರೆ ಲೈಕ್ ಮೇಲೊಂದು ಕ್ಲಿಕ್ಕು
    ಸಮಯ ಇದ್ರೆ ಸ್ಮೈಲಿ ಜೊತೆ ಒಂದು ಕಮೆಂಟು
    ಜೀವನ ಅಂದರೆ ಮಗೂ..
    ಜಾಲದಿ ಬೆಸೆವ ಫೇಸ್ ಬುಕ್ಕಲ್ಲ...

    ಇಷ್ಟವೋ-ಕಷ್ಟವೋ.. ಹೊಟ್ಟೆ ಹೊರೆಯಲು ಕೆಲಸ
    ಅವರಿವರ ಆಜ್ಞೆಗೆ ಹೊರಬೇಕು ಹೊಲಸ
    ಜೀವನ ಎಂದರೆ ಮಗೂ..
    ತಿಂಗಳ ಕೊನೆಯ ಸಂಬಳದ ಚೆಕ್ಕಲ್ಲ...

    ನಾಲ್ಕೇ ದಿನದ ಈ ನಂಟು..
    ಬಂದವರು ಹೋಗಲೇಬೇಕು..
    ಅವನು ಬರೆಸಿಕೊಂಡ ಅಗ್ರೀಮೆಂಟು...
    ಹುಟ್ಟು ಸಾವಿನ ನಡುವೆ ಅದೆಷ್ಟೋ ಸೆಂಟಿಮೆಂಟು
    ಜೀವನ ಅಂದರೆ ಮಗೂ...
    ಬರೀ ಮುಖದ ಮೇಲಿನ ಸುಕ್ಕಲ್ಲ...

    ReplyDelete
  5. blogna lekhanagalu, haadugalu tumba chennagide, karaavali teeradalli betta-gudda-suranga maargagalalli saaguva railu maarga nijakku tumbaa sundara, ee sundara parisaradalli saaguttiruva karavali railu, satvayutavaada haligala mele hosa hosa bhogigalannu koodikondu saaguvaaga maargaduddakku sundaravaada haadugala sille haakutta saaguttiddare prayaanisalu yaaru tane manassu baruvudilla, naanantu inde ticket padediddene.

    nannadondu chikka haadu-

    nijakku tumbaa sogasu
    haadina bandiya otavu
    hosa hosa bhogiya railu,
    hosa hosa haadina hoyilu

    doorada teerada daari,
    saagali nammaya payana
    Bhhavada haligala mele
    beseyali snehada bandha.

    ReplyDelete
  6. ondakkinta ondu arthapoornavaagide.onde dhaanyadalli tayaarisida bagebageya bhakshya bahala svaadishtavagide.tayaarisidavarellarigoo haaguu,unabadisida nimmaguu abhinandanegalu.

    ReplyDelete
  7. ಅಂತೂ ನಮ್ಮೂರಿನ ನಾಗಿ ಭಾರಿ ಪ್ರಸಿದ್ದಿಗೆ ಬಂದಂತಾಯ್ತು :)

    ReplyDelete
  8. ನಿಮ್ಮೆಲ್ಲರ ಕವನಗಳನ್ನು ಓದಿದೆ. ಪೈಪೋಟಿಗೆ ಇಳಿದಿರುವಂತೆ ಒಂದಕ್ಕಿಂತ ಇನ್ನೊಂದು ಸೊಗಸಾಗಿ ಮೂಡಿಬಂದಿವೆ. ಜೀವನ ಚಕ್ರದ ಇಳಿ ಸಂಜೆಯ ಚಿತ್ರಣ ಪರಿಣಾಮಕಾರಿಯಾಗಿ ಅನಾವರಣಗೊಂಡಿದೆ.
    ಒಳ್ಳೆ ಪ್ರಯತ್ನ. ಎಲ್ಲರಿಗೂ ಅಭಿನಂದನೆಗಳು.
    ಹೀಗೆ ವಿವಿಧ ಪ್ರಯೋಗಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮೆಲ್ಲರಿಂದ ವಿಭಿನ್ನ, ವಿನೂತನ ಬರಹಗಳು ಬರಲೆಂಬ ಹಾರೈಕೆ.

    ReplyDelete