Thursday, April 14, 2011

ಎರಡು ಚಿತ್ರ ನಾಲ್ಕು ಕವನ


ಮಧುವ ಹೀರುವ ದು೦ಬಿ ಹಾಡಿದೆ ಸಾರ್ಥಕತೆ ಸೊಲ್ಲ 

ಅಂದ ಚೆಂದದ ದಿರಿಸು ಧರಿಸಿ ಕನ್ನೆ ಕಾದಿಹಳು 
ಮದನನಾಗಮನಕೆ ಕಾದು ಚೆಲುವ ಸೂಸುವಳು
ಉನ್ಮತ್ತ ಚೆನ್ನಿಗ ಮಧುವ ಬಯಸಿ ಹಾರಿ ಬಂದಿಹನು 
ಕಾದು ಕುಳಿತಿಹ  ರತಿಯ ಒಡಲಲಿ ಮೆಲ್ಲ ಚುಂಬಿಪನು 

ಆವ  ಹೂವಿಗೆ ಆವ ದು೦ಬಿಯೊ ಯಾರು ತಾ ಬಲ್ಲ
ಪ್ರಕೃತಿ ಸೂತ್ರದ ನಿತ್ಯಅನುಭವ ಬದುಕಿಗದು ಬೆಲ್ಲ  
ಕುಸುಮ ಕೋಮಲ ಹೂವ ಭಾವಕೆ ಸಾಟಿಯೇ ಇಲ್ಲ 
ಮಧುವ ಹೀರುವ ದು೦ಬಿ ಹಾಡಿದೆ ಸಾರ್ಥಕತೆ ಸೊಲ್ಲ 

ಮಧುವ ಹೀರುತ ಮುದವ ಪಡೆದಿದೆ ದು೦ಬಿ ಹುರುಪಿನಲಿ  
ತನ್ನನರ್ಪಿಸಿ ಸುಖಿಸಿ ಹಿಗ್ಗಿದೆ ಹೂವು ನಲಿವಿನಲಿ 
ಮಧುವಿನ ಪಾತ್ರೆ ಸುಖದ ಜಾತ್ರೆ ಬಾಳಿಗಾಧಾರ
ಹೀರು ಬಯಕೆಯು ಹಿಡಿತವಿದ್ದರೆ  ಬಾಳೆ ಸವಿಸಾರ


ಮೇಲಿನ ಕವನವನ್ನ  ಪ್ರೀತಿಯಿಂದ ಪರಾಂಜಪೆ ಸರ್ ಬರೆದುಕೊಟ್ಟಿದ್ದು 
 ಚಿತ್ರ ಕೃಪೆ ಅಣ್ಣ ದಿಗ್ವಾಸ್ ಹೆಗ್ಡೆ
( http://chithrapata.blogspot.com/ )


ಅರಳಿ ಅರಳಿ ಸನಿಹ ಸೆಳೆದು

ಹಾರುತಾರುತ ಹೂವನರಸುವ ಚಿಟ್ಟೆ ಚಂದವ ನೋಡಿರಿ
ಮಧುವ ಹೀರುತ ಜಗವ ಮರೆತಿದೆ ಪಾನಮತ್ತ ಪತಂಗವು  
ಅರಳಿ ಅರಳಿ ಸನಿಹ ಸೆಳೆದು ಸವಿಯ ತೋರಿಪ ಹೂವನು
ಮುತ್ತ ಕೊಟ್ಟು ಒಡಲಹೊಕ್ಕು ಮಧುವ ಹೀರುತಲಿರ್ಪುದು

ಪುಷ್ಪ ವನದಲಿ ಅರಳಿ ನಿಂತಿಹ ಹೂವು ನಾಚುತ ಬಳುಕಿದೆ
ಚಿಟ್ಟೆ ತಾನು ವರಿಪ ನೆಪದಲಿ ಬಣ್ಣ ದಿರಿಸನು ಧರಿಸಿದೆ 
 ಜೇನ  ಕಡಲು ಹೂವಿನೊಡಲು ಪೂರ್ತಿ ಹೀರುವ ಬಯಕೆಯು 
ಮುಕ್ತವಾಗಿದೆ ಪುಷ್ಪಪಾತ್ರೆಯು ಸುರಿಸಿ ತನ್ನೆದೆ ಮಧುವನು 

ಯಾರಿಗು೦ಟು ಯಾರಿಗಿಲ್ಲ ಇ೦ಥ ಭಾಗ್ಯವು ಜಗದಲಿ 
ನಿರ್ಬಂಧವಿಲ್ಲದ ಮುಕ್ತ ನೀತಿಯು ಇಲ್ಲವ್ಯಾಕೆ ಮನುಜಗೆ 
ವಿವಿಧರುಚಿಯ ಗಂಧ ಹೀರುವ ಚಿಟ್ಟೆ ಭಾಗ್ಯವ ನೆನೆಯುತ 
ಕರುಬುವರು ಈ ಜಗದ ಯುವಕರು ನೆನೆದು ಏಕಪತ್ನೀವೃತ


*********************ಚಿತ್ರ ನೋಡಿ ಭಾವ ಮನನ 
ಮನಸಲೇನೋ ತಳಮಳ 
ನಾಳೆ ಎಂತೋ ಎ೦ಬ ಕಳವಳ 
ದಿಗ೦ತದತ್ತ ನೆಟ್ಟಿದೆ  ನೋಟ 
ಕಥೆಯ ಹೇಳುತಿದೆ ಕಣ್ಣ ಕೂಟ 

ಆಡಿ ನಲಿಯುವ ವಯಸಿದು
ಏತಕಿಷ್ಟು ಬಿಗಿ ಮೊಗ ??
ಮೊಗ್ಗು ನೀನು ಅರಳಬೇಕು 
ಬದುಕಲೆ೦ದೂ ಗೆಲ್ಲಬೇಕು 

ನಿನ್ನ ಮೊಗದ ಭಾವ ಚಿತ್ರ
ಸೆಳೆಯಿತೆನ್ನ ಸುಪ್ತ ಚಿತ್ತ 
ಚಿತ್ರ ನೋಡಿ ಭಾವ ಮನನ 
ಮೂಡಿತಲ್ಲೆ ಪುಟ್ಟ ಕವನ 


ಮೇಲಿನ ಕವನವನ್ನ ತುರ್ತಿನಲ್ಲಿ ಅಂದರೆ ನಿಮಿಷಾರ್ಧದಲ್ಲಿ ಬರೆದುಕೊಟ್ಟವರು ಪರಾಂಜಪೆ ಸರ್ ರವರು 
ಚಿತ್ರ ಕೃಪೆ ಗಣಪತಿ ಹೆಗ್ಡೆ (ಕಲಾವಿದ )
(  ttp://kalaavida-hegde.blogspot.com/ )


ನೆಟ್ಟದೃಷ್ಟಿಯು ಸೆಳೆವ ಕಂಗಳು

ನೆಟ್ಟದೃಷ್ಟಿಯು ಸೆಳೆವ ಕಂಗಳು ಗಮನ ವೆಲ್ಲಿದೆ ಬಾಲಕಿ
ಹೊಳೆವ ಕಂಗಳು ನೂರು ಕಥೆಯನು ಹೇಳುತಿರುವದು ನನ್ನಲಿ
ಬಾಲ್ಯ ಬದುಕದು ಬಹಳ ಕೌತುಕ ಜ್ಞಾನದಾಹವು ಸಹಜವು
ಮುದ್ದು ಮೊಗವದು ಬೆಣ್ಣೆಮುದ್ದೆಯು ತೊದಲು ನುಡಿದರೆ ಚಂದವು

ಸ್ನಿಗ್ಧ ಮುಖವದು ಕಪಟವಿಲ್ಲವು ಸಹಜ ಉಲಿವುದು ಪ್ರೀತಿಯು
ಈಗತಾನೆ ಅರಳಿನಿಂತಿಹ ಕೆಂಡಸಂಪಿಗೆ ಮುಖವದು
ಬಾಲ ಕಂಗಳು ಹೊಳೆವ ಹರಳದು ನೂರು ಕನಸದು ಬಂಧಿತ
ಚಂದ ಆನನ ಮುಗ್ಧ ಚಲುವೆಯೆ ವರ್ಣಿಸಲು ಪದ ಸಾಲದು

ಬೆಳೆವ ಬಾಲಿಕೆ ಮಾತು ಒಂದಿದೆ ನಿನ್ನ ಕಿವಿಯಲಿ ಹೇಳಲು
ಬಾಳಪಥವದು ಸವೆಸ ಬೇಕಿದೆ ಇನ್ನು ಮುಂದಕೆ ಚಂದದಿ
ಬುಡವು ಬಾಲ್ಯದಿ ಗಟ್ಟಿ ಆದರೆ ಪ್ರಭುದ್ಧ ಜೀವನ ಮುಂದಕೆ
ಓದುಬರಹ ಆಟ ಜೋತೆಯಲಿ ಜಗದ ಜ್ಞಾನವು ಬೆಳೆಯಲಿ

*****************************


9 comments:

 1. ವಾಹ್ !!! ಸುಂದರ ಕವನಗಳು.

  ReplyDelete
 2. ನಾಗಶ್ರೀ ಧನ್ಯವಾದ
  ಅದೆಲ್ಲವೂ ಕೆಲಸದ ಒತ್ತಡದ ನಡುವೆ ಅರ್ಜೆಂಟಿನಲ್ಲಿ ಬರೆದದ್ದು
  ಹಾಗೆ ಪರಾಂಜಪೆಯವರೂ ಕೂಡ ಬಿಡುವಿಲ್ಲದ ಕಾರ್ಯದ
  ಒತ್ತಡದ ನಡುವೆಯೇ ಪ್ರೀತಿಯಿಂದ ಕವನ ಬರೆದು ಕೊಟ್ಟಿದ್ದಾರೆ

  ಮೆಚ್ಚಿದ್ದಕ್ಕೆ ಧನ್ಯವಾದ

  ReplyDelete
 3. ಗಣಪತಿ ನಿನ್ನ ಮತ್ತು ದಿಗ್ವಾಸ್ ಅಣ್ಣಯ್ಯನ ಅಂದದ ಚಿತ್ರದ ಮುಂದೆ
  ಮಾತು ಅಥವಾ ಕವಿತೆ ಸೋಲುತ್ತದೆ

  ನಿಮ್ಮ ಸಹಕಾರಕ್ಕೆ ಚಿರರುಣಿ

  ReplyDelete
 4. ಪ್ರೀತಿಯ ಮಹಬಲ...

  ನಿಮ್ಮ ಕಾವ್ಯದ..
  ಕಾವ್ಯ ಶೈಲಿಯ ಅಭಿಮಾನಿ ನಾನು..
  ನೀವು ಮತ್ತು ಪರಾಂಜಪೆಯವರ ಪ್ರತಿಭೆಗೆ ಮೂಕನಾಗಿದ್ದೇನೆ..

  ಜೈ ಜೈ ಜೈ ಹೋ !!

  ReplyDelete
 5. ಧನ್ಯವಾದ ಪ್ರಕಾಶಣ್ಣ ನಿನ್ನ ಪ್ರೋತ್ಸಾಹದ ನುಡಿಗಳಿಗೆ

  ಜೈ ಹೋ

  ReplyDelete
 6. ಮಹಾಬಲಗಿರಿ ಭಟ್ಟರೆ..ಅದ್ಭುತ ಕವನಗಳು...ಚಿತ್ರಪಟ ಕಾವ್ಯಕನ್ನಿಕೆಯಡಿಯಲ್ಲಿ ಒ೦ದೆರಡು ದಿನ ಬಿಟ್ಟು ಇಡುವೆ...

  ReplyDelete
 7. ಮಹಾಬಲ ಭಟ್ಟರೇ, ಪರಾಂಜಪೆಯವರ ಗರಡಿಯಲ್ಲಿ ಮಹಾಬಲಗಿರಿ ಬೆಳೆಯಲಿ ಎಂದು ಹಾರೈಸುತ್ತೇನೆ, ಕೆಲಸದ ಒತ್ತಡಗಳು ಅತಿಯಾಗಿವೆ, ದಿನಾಲೂ ಬರೆಯುತ್ತಿದ್ದವ ೨-೩ ದಿನಗಳಿಗೊಮ್ಮೆ ಬರೆಯಬೇಕಾಗಿದೆ ಹೀಗಾಗಿ ಎಲ್ಲಾ ಬ್ಲಾಗುಗಳಿಗೂ ಭೇಟಿ ಕೊಡುವುದು ಬಾಕಿ ಉಳಿದಿದೆ-ಅರ್ಥವಾಗಿರಬಹುದಲ್ಲವೇ ? ಶುಭಕೋರುತ್ತೇನೆ.

  ReplyDelete
 8. ವಾವ್...ಚಂದದ ಕವನಗಳು..ಸುಂದರ ಚಿತ್ರಗಳು.

  ReplyDelete