Monday, January 10, 2011

ಬಿಳಿಯಲುಂಗಿಯನುಟ್ಟು


ಬಿಳಿಯಲುಂಗಿಯನುಟ್ಟು

ಲುಂಗಿ ಇದು ಯಾವಾಗಲೂ ನನ್ನನ್ನ ಕಾಡುವ ವಿಷಯ. ನಮ್ಮಪ್ಪ ನಮ್ಮಜ್ಜ ಎಲ್ಲರೂ ಲುಂಗಿ ಸಂಸ್ಕೃತಿಯವರೆ.ಇಂದಿನ ಆಧುನಿಕ ಯುಗದಲ್ಲಿ ನಮ್ಮ ಜನರೇಷನ್ ನವರು ಲುಂಗಿ ಉಟ್ಟು ತಿರುಗಿದರೆ ಮಂಡೆ ಸರಿಯಿಲ್ಲದವನು ಅಂದುಕೊಂಡಾರು.ಈಗೀಗ ಚಡ್ಡಿಗಳು ಮತ್ತು ಜಿನ್ಸ್ ಪ್ಯಾಂಟ್ ಗಳ ಹಾವಳಿ.ಒಂದಂತೂ ನಿಜ. ನಮ್ಮ ಜನ ಆಧುನಿಕರು ಎಂದು ಹೇಳಿಕೊಳ್ಳುವದಕ್ಕೆ ಪ್ಯಾಂಟು  ಮತ್ತು ಚಡ್ಡಿಯ ಮೊರೆ ಹೋಗಿದ್ದಾರೆ.ಆವರಿಗೆ ಪ್ಯಾಂಟು ಮತ್ತು ಚಡ್ಡಿಯ ಬಿಟ್ಟು ಉಳಿದಿದ್ದರಲ್ಲಿ ಆಧುನಿಕತೆಯನ್ನ ಸಾಧಿಸುವ ಹಂಬಲವಿಲ್ಲ.ಅದರಲ್ಲಿ ನಮ್ಮ ಕನ್ಯಾಮಣಿಗಳ ಕೊಡುಗೆ ಅಪಾರ ! ಕಾರಣವಿಷ್ಟೆ. ನನ್ನ ಜೊತೆಗೆ ಬೆಳೆದ ಅದೆಷ್ಟೊ ಜನ ನನ್ನ ಸ್ನೇಹಿತರು ಊರಿಗೆ ಬಂದಾಗ  ಕೇರಿ ತಿರುಗುವದಕ್ಕೂ ಸಹ  ಜೋಗಳೆ ಚಡ್ಡಿ ಮತ್ತು ಪ್ಯಾಂಟನ್ನು  ಹಾಕಿಕೊಂಡುತಿರುಗುವರಿದ್ದಾರೆ. ಅವರಬಗ್ಗೆ  ಹುಡುಗಿಯರೆಲ್ಲಿ ಅನಾಗರಿಕ ಸಂಸ್ಕೃತಿಯವನು ಅಂತ ಭಾವಿಸಿ ಅನಾಧರಿಸಿ ಬಿಡ್ತಾರೋ ಅನ್ನೊ ಭಯ.ಹೌದು ಸ್ವಾಮೀ... ನನಗೆ ಲುಂಗಿ ಅಂದರೆ ಬಹಳ ಇಷ್ಟ. ನಾನ್ಯಾವಾಗಲೂ ಊರಿಗೆ ಹೋದಾಗ ಅಥವಾ ಮನೆಯಲ್ಲಿರುವಾಗ ಬಿಳಿ ಲುಂಗಿಯನ್ನೇ ಊಟ್ಟು ತಿರುಗುವದು. ಯಾಕೋ  ನನಗೆ  ಚಡ್ಡಿ ಅಂದರೆ ಅಲರ್ಜಿ.ಲುಂಗಿ ಉಟ್ಟು, ಅದನ್ನ  ಎತ್ತಿ ಕಟ್ಟಿ ಹೊರಟೆನೆಂದರೆ ಅದುವೆ ಆನಂದ.




ಬಿಳಿಯಲುಂಗಿಯನುಟ್ಟು 
ಮೇಲೊಂದು ಅಂಗಿಯತೊಟ್ಟು
ಹಣೆಯಮಧ್ಯದಿ ಚಿಕ್ಕದೊಂದು ಬಟ್ಟು ಇಟ್ಟು 
ಶಲ್ಯವನು ಇಳಿಬಿಟ್ಟು ಹೊರಟರೆ ತಾ
ಹುಡುಗಿಯರು ಸುಸ್ತಾಗಿ ಬಿದ್ದು ಹೋಪರು ಅರೆಪ್ರಜ್ನಾ




ಸದ್ಯಕ್ಕೆ ಲುಂಗಿಗೆ ಪೈಪೋಟಿ ಕೊಡುತ್ತಿರುವರು ಪ್ಯಾಂಟು ಮತ್ತು ಚಡ್ಡಿಗಳು.ಕೆಲವರು ಖಾಲಿ ದಿನಗಳಲ್ಲಿ ಮನೆಯಲ್ಲಿರುವಾಗ ಮುಂಡು ಉಟ್ಟುಕೊಳ್ಳುವದುಂಟು. ಆದರೆ ಚಡ್ಡಿ ಹಾವಳಿಯಿಂದ ನಮ್ಮ ಲುಂಗಿಯನ್ನ ಕೇಳುವವರೇ ಇಲ್ಲವಾಗಿದೆ.ಕಾಟನ್ ಲುಂಗಿ ಬೇಸಿಗೆಯಲ್ಲಿ ಹೇಳಿ ಮಾಡಿಸಿದ ಎರ್ ಕಂಡೀಶನ್ ತರ. ಸ್ವಲ್ಪ ಶಕೆ ಹೆಚ್ಚಾದರೆ ಎತ್ತಿ ಕಟ್ಟಿ ಕೊಂಡರೆ ಮುಗಿಯಿತು. ಎಲ್ಲವು ನಿರಾಳ ಗಾಳಿಗೆ ಎಲ್ಲವು ತಂಪು ತಂಪು.ಚಳಿಗಾಲದಲ್ಲಂತೂ ಅದುವೆ ಸೋಪಾನ . ಇನ್ನು ಇಸ್ತ್ರಿ  ಮಾಡುವ ತೊಳೆಯುವ ಭಾಗಕ್ಕೆ ಬಂದರೆ ಲುಂಗಿಗೆ ಇಸ್ತ್ರಿ ಇಲ್ಲದೆಯೂ ಉಡಬಹುದು.ಒಂದುಸಾರಿ ನೀರಿನಲ್ಲಿ ಅದ್ದಿಸಿ ಮೇಲೆತ್ತಿ ಹಿಂಡಿದರೆ ಅಲ್ಲಿಗೆ ತೊಳೆಯುವ ಕಾರ್ಯಕ್ರಮವು ಫಿನಿಶ್.ಆದರೆ ಪ್ಯಾಂಟನ್ನ ತೊಳೆಯುವದು ಕಷ್ಟ .ಇಸ್ತ್ರಿ ಇಲ್ಲದೆ ಹಾಕಿಕೊಂಡರೆ  ಅಪಹಾಸ್ಯಕ್ಕೆ ಗುರಿಯಾಗುವದು ಖಂಡಿತಾ.ಚಡ್ಡಿಯು ಯಾವಾಗಲೂ ಮಣ್ಣಾಗದಿರದಂತೆ ದೇವರಲ್ಲಿ ವರಪಡೆದು ಕೊಂಡು ಬಂದದ್ದರಿಂದ ಅದಕ್ಕೆ ಗೊಬ್ಬು ವಾಸನೆಯು ಹೊಡೆಯಲಾರಂಭಿಸಿದ ಮೇಲೆಯೆ ನೀರ ಕಾಣಿಸುವದು.

ಚಡ್ಡಿ ಪ್ಯಾಂಟಿಗಿಂದಿಲ್ಲಿ ಮುಂಡು ದೋತಿಯೆ ಚಂದ 
ಹಾಳಾದ ಪಾಶ್ಚಾತ್ಯರ ಅನುಕರಣೆ ಸಲ್ಲ 
ಬಿಳಿ ಮುಂಡು ಬಿಳಿ ಪಂಜೆ ಭೂಷಣವು ನಮಗೆ 
ಲುಂಗಿಯಾಸೊಬಗಿದೋ ಬಲ್ಲವನೆ ಬಲ್ಲ

ಬಣ್ಣ ಲುಂಗಯಾ ಒಲವಿನ ಬಣ್ಣ 

ಲುಂಗಿಯ ಬಣ್ಣ ನಾನಾ ರೀತಿಯದ್ದು. ಕೆಲವರು ಅಚ್ಚ ಬಿಳಿ ಲುಂಗಿಯ ತೊಟ್ಟರೆ ಮತ್ತೆ ಕೆಲ ಹುಡುಗರು ಬಣ್ಣ ಬಣ್ಣದ ಕಾಟನ್  ಲುಂಗಿಯ ಧರಿಸುವವರಿದ್ದಾರೆ. ಮತ್ತೆ ಕೆಲವರು ಕೇಸರಿ ಬಣ್ಣದ ಲುಂಗಿ ಉಟ್ಟು ತಿರುಗಿದರೆ,ಅಯ್ಯಪ್ಪ ಸ್ವಾಮಿಯ ಭಕ್ತರು ಕಪ್ಪು ಲುಂಗಿಯನ್ನ ತೊಡುವ ರಿವಾಜ್ ಉಂಟು.ಇನ್ನು ಸಾಹೇಬ್ರ ಮಕ್ಕಳ ಲುಂಗಿಯಂತೂ ಬೇರೆಯದೆ ಚಂದ. ಬಿಳಿ ಲುಂಗಿಯ ಮೇಲೆ ಬೂದುಬಣ್ಣದ ಗೆರೆ ಗೆರೆಯ ಸೆಂಟಿನಲಿ ಅದ್ದಿ ತೆಗೆದಿಹ  ಲುಂಗಿ ಅವರದ್ದು. ಅಚ್ಚ ಕೆಂಪು ಲುಂಗಿಯ ಧರಿಸುವವರು ಓಂಶಕ್ತಿ ಬಳಗದವರು.ಮತ್ತೆ ಸನ್ಯಾಸಿಗಳದ್ದು ಕಾವಿ ಬಣ್ಣದ್ದು. ಮತ್ತೆ ಕೆಲವರು ಪಂಚೆ, ದೋತ್ರ, ಕಚ್ಚೆ ಪಂಜಿಯ ಉಡುವವರು, ಅವೆಲ್ಲವೂ ಬಿಳಿಯ ಬಣ್ಣದವುಗಳು

ದೇಶ ಭಾಷೆಯ ಮೀರಿ ಜಾತಿ ಧರ್ಮವ ತೊಡೆದು

ಇನ್ನು ಲುಂಗಿ ಉಡುವವರು ನಮ್ಮ ದೇಶದಲ್ಲೊಂದೆ ಅಲ್ಲ ಪಕ್ಕದ ಶ್ರೀಲಂಕಾ,ನೇಪಾಳ,ಬಾಂಗ್ಲಾ,ಬರ್ಮಾ,ಇಂಡೋನೇಶಿಯಾ,ಮಲೆಶಿಯಾ,ಅರಬ್ ಕಂಟ್ರಿ ಗಳಲ್ಲಿ ಕಾಣಬಹುದು. ಆದರೆ ಅಮೇರಿಕಾ ಇಂಗ್ಲೆಂಡ್ ದೇಶದವರು ಲುಂಗಿ ಉಟ್ಟ ಕುರುಹುಗಳಿಲ್ಲ.ಆದರೆ ನಮ್ಮ ನೆರೆ ರಾಜ್ಯ ಕೆರಳದಲ್ಲಿ ಲುಂಗಿ ಉಡದೆ ಇರುವರೆ ಇಲ್ಲ. ಮಲಯಾಳಿ ಹೆಂಗಸರು ಸೀರೆಯನ್ನ ಲುಂಗಿಯಂತೆಯೇ ಉಡುತ್ತಾರೆ. ಅವರಿಗೆ ಲುಂಗಿ ಅಂದರೆ ಅಂತಹಾ ವ್ಯಾಮೋಹ. ನಮ್ಮ ದೇಶದಲ್ಲಿ ಲುಂಗಿ ಉಡುವವರ ಸಂಖ್ಯೆ ಬಹುಶಹ ಕೇರಳದಲ್ಲಿ ಹೆಚ್ಚಾಗಿರಬಹುದು.ಬೆಂಗಳೂರಿನಲ್ಲಿರುವ ಕುಟ್ಟಿಗಳೇನು ಅದಕ್ಕೆ ವಿರುದ್ದರಲ್ಲ. ಅವರು ಲುಂಗಿಯಿಂದಲೆ ತಮ್ಮ ಮಳಿಯಾಳಿ ಐಡೆಂಟಿಟಿಯನ್ನ ಪ್ರದರ್ಶಿಸುತ್ತಿರುತ್ತಾರೆ.

ಲುಂಗಿ ಚಿಂದಿಯಾದರೂ ಉಪಯೋಗವಿದೆ 

ಲುಂಗಿಯ ಉಪಯೋಗ ಮತ್ತು ಅದರ ಬಳಕೆ ಅಪಾರ,  ಅರ್ಜೆಂಟ್ ಆಗಿ ಯಾವುದೋ ಊರಲ್ಲಿ ತಂಗಬೇಕಾಯಿತು ಅಂತಿಟ್ಟುಕೊಳ್ಳಿ. ಬ್ಯಾಗಿನಲ್ಲಿ ಒಂದು ಲುಂಗಿಯಿದೆ ಅಂತಾದರೆ ಅದನ್ನೆ ಹಾಸಿ ಅಥವಾ ಹೊದೆದು ರಾತ್ರಿ ಕಳೆಯ ಬಹುದು . ಆದ್ರೆ  ಒಂದು ಚಡ್ಡಿ ಮತ್ತು ಪ್ಯಾಂಟಿನಿಂದ ಅದು ಸಾಧ್ಯವಿಲ್ಲ,ಕೆಲವೊಮ್ಮೆ ಮೈ ಒರೆಸಿಕೊಳ್ಳಲು ಟವೆಲ್ಲಿನ ಜಾಗದಲ್ಲಿ ಬಳಸಬಹುದು.ಮತ್ತೆ ಹಳ್ಳಿ ಕಡೆ ಕೆಲವರು ಚೀಲ ಮರೆತು ಅಂಗಡಿಗೆ ಹೋದಾಗ ತಮ್ಮ ಮುಂಡಿನಲ್ಲಿಯೇ ದಿನಸಿಗಳನ್ನ ಕಟ್ಟಿಕೊಂಡು ಬರುವದುಂಟು .ಮತ್ತೆ ಕೆಲವರು ಪುಸ್ತಕದ ಗಂಟು ಕಟ್ಟಲು, ಇನ್ನು ಕೆಲವರು ಕಿಟಕಿಯ ಪರೆದೆಯಾಗಿ,ಮತ್ತೆ ಕೆಲವರು ಏನನ್ನೊ ಮರೆಮಾಚಲು,ಸರಕ್ಕನೆ ಹರಿದು ಬ್ಯಾಂಡೆಜಾಗಿಸಲು.ಒರೆಸುವ ತುಂಡಾಗಿಸಿ.ಮತ್ತೆ ಕೆಲವರು ಹಗ್ಗ ಸಿಕ್ಕದಿದ್ದಾಗ ಮುಂಡಿನಲ್ಲಿಯೆ ಕೊರಳ ಬಿಗಿದು ಕೊಳ್ಳುವವರು ಇದ್ದಾರೆ.ಆದರೆ ಸಾಯುವವನಿಗೆ ಪ್ಯಾಂಟು ಇನ್ನು ಏಲ್ಲಿಯೂ ಹಗ್ಗವಾಗಿ ಉರುಳಾದ ದಾಖಲೆ ಸಿಕ್ಕಿಲ್ಲ!!. ಲುಂಗಿ ಒಂದು ಕಡೆ ಕೊಳೆಯಾದರೆ  ಮತ್ತೊಂದು ಕಡೆ ತಿರುಗಿಸಿ ಉಡಬಹುದು. ಮತ್ತೆ ಪ್ಯಾಂಟನ್ನ ಹಾಗೆ ತಿರುಗಿಸಿ ಏರಿಸಿಕೊಳ್ಳಲಾಗುವದಿಲ್ಲ.ಇನ್ನು ಹಾರ್ಡ್ ವೇರ್ ಶಾಪ್ ಗಳಲ್ಲಿ  ಹರಿದು ಹೋದ ಕಾಟನ್ ದೋತಿಗೆ ಭಯಂಕರ ಬೇಡಿಕೆಯುಂಟು.



ಕಟ್ಟಿದರೆ ಲುಂಗಿಯಾದೆ ಸೆಕ್ಕಿದರೆ ಪಂಚೆಯಾದೆ....
ಹಾಗೆ ಹಾಸಿದರೆ ಹಾಸಿಗೆಗೆ ಮೇಲು ಹೊದಿಕೆಯಾದೆ
ಹೊದ್ದರೆ ಚಾದರ , ಹರಿದರೆ ಒರೆಸುವ ತುಂಡಾದೆ 
ನೀವಾರಿಗಾದಿರೋ ಎಲೆ ಪ್ಯಾಂಟು ಚಡ್ಡಿಗಳಿರಾ.....


ಸದ್ಯಕ್ಕೆ ನಮ್ಮಲ್ಲಿ  ಲುಂಗಿ ಒಂದನ್ನೆ ಅಧಿಕೃತವಾಗಿ ಬಳಸುತ್ತಿರುವವರು,ಪುರೋಹಿತರು  (ದಕ್ಷಿಣ ಭಾರತದಲ್ಲಿ ಮಾತ್ರ )ಪೂಜೆಮಾಡುವಾಗ ಅಥವಾ ಪೂಜಾ ಕಾರ್ಯಗಳಿಗೆ ಹೋಗುವಾಗ. ನಮ್ಮಪ್ಪನ ತಲೆಮಾರಿನ ೫೦ % ಜನ (ಭಾರತದಲ್ಲಿ). ಭಾಗವತರು ಮತ್ತು ಹಿಮ್ಮೇಳದವರು  ಯಕ್ಷಗಾನದಲ್ಲಿ ಇನ್ನು ಪ್ಯಾಂಟು ಧರಿಸಿದ ದಾಖಲೆಗಳಿಲ್ಲ .ಅಯ್ಯಪ್ಪ ಸ್ವಾಮಿ ಭಕ್ತರು ಇನ್ನೂ ಕಪ್ಪು ಲುಂಗಿಯ ಬದಲಾಗಿ ಪ್ಯಾಂಟು ಬಳಸಿದ ನೆನಪಿಲ್ಲ.ಇನ್ನು ಸ್ವಾಮೀಜಿಗಳು ಕಾವಿಯ ಮುಂಡು ಅಥವಾ ಲುಂಗಿಯ ಬದಲು ಕಾವಿ ಪ್ಯಾಂಟು ಹಾಕಿದವರಿಲ್ಲ.ಚಿತ್ರ ಪಟಗಳಲ್ಲಿರುವ ಮತ್ತು ಮೂರ್ತಿ ರೂಪದಲ್ಲಿರುವ ಮುಕ್ಕೋಟಿ ದೇವತೆಗಳು ಪ್ಯಾಂಟು ಹಾಕಿದ ಚಿತ್ರಗಳಿಲ್ಲ.ರಾಜಕಾರಣಿಗಳಲ್ಲಿ ಜೀವನವಿಡೀ ಲುಂಗಿ ಮತ್ತು ದೋತ್ರ ವನ್ನ ಮಾತ್ರ ಉಡುವವರು ಹಲವರಿದ್ದಾರೆ. ಅದರಲ್ಲಿ ನಮ್ಮ ದ್ಯಾವೆ ಗೌಡರದ್ದು ಭೀಷ್ಮಪಿತಾಮಹನ ಸ್ಥಾನ .

ಲುಂಗಿಯಾ ದಾಯಾದರಿವರು
ಈ ಲುಂಗಿ ಮತ್ತು ಮುಂಡಿಗೆ ಹತ್ತಿರವಾದ ಉಡುಗೆ ಅಂದರೆ.ದೋತಿ. ಮತ್ತು ಪಂಚೆ,ಮತ್ತು ಕೌಪೀನ.ದೋತಿ ಅಥವಾ   ದೋತ್ರ ಉಡುಗೆ ಸ್ವಲ್ಪ ದುಬಾರಿಯಾದದ್ದು. ಮತ್ತೆ ಪಂಚೆಯ ವಿಷಯಕ್ಕೆ ಬಂದರೆ ಅದು ಮುಂಡು ಅಥವಾ ದೋತಿಗಿಂತ ಸ್ವಲ್ಪ ಬಿನ್ನ ನಮ್ಮ ಗಾಂಧೀ ತಾತ ಉಟ್ಟ್ಕೊತ್ತಿದ್ನಲ್ಲ ಅದು ಪಂಚೆ.ನಮ್ಮಲ್ಲಿ ಇನ್ನೂ ಹಳಬರು ಪಂಚೆ ಉಡುವದನ್ನ ಸಮಾಜದಲ್ಲಿ ಕಾಣಬಹುದು( ಅದು ಹಿಂದು ಜನರಲ್ಲಿ ಮಾತ್ರ ).ಇನ್ನು ಕೌಪೀನ (ಲಂಗೋಟಿ) ಅದು ಉತ್ತರದಲ್ಲಿ ನಾಗಾ ಸನ್ಯಾಸಿಗಳ ಉಡುಪಾಗಿ ಉಳಿದಿದೆ.ಆದರೂ ಈಗಲೂ ಕೌಪೀನವ ಧರಿಸಿ ಅದರ ಮೇಲೆ ಲುಂಗಿ ಅಥವಾ ಪಂಜಿ ಉಡುವವರಿದ್ದಾರೆ.ಅವರು ಯಾವಾಗಲೂ ಚಡ್ಡಿ ಮತ್ತು ಪ್ಯಾಂಟನ್ನ ಧಿಕ್ಕರಿಸಿದವರು .ನಾವೆಲ್ಲ ಉಭಯ ವಾಸಿಗಳು ಎಷ್ಟೇ ಚಡ್ಡಿಯನ್ನ ದೂರಿದರೂ ಮುಂಡಿನೊಳಗಡೆ ಅದನ್ನ ಧರಿಸಿಯೇ ತಿರುಗುವವರು

ಕಷ್ಟವ್ಯಾಕೆ ಸ್ವಾಮೀ................
ದೋತಿ  ಪಂಚೆ ಮತ್ತು ಮುಂಡು ಉಡುವದು ಕಷ್ಟ ಅಂತ ಹೇಳುವ ಜನರಿದ್ದಾರೆ . ನನ್ನ ಲೆಕ್ಕದಲ್ಲಿ ಅದು ಸುಲಭ. ಪ್ಯಾಂಟು ಪೀಸನು ತಂದು ಅಳೆತೆಗೆ ಹೊಲಿದು ಅದನ್ನ ಸಿಕ್ಕಿಸಿ ಕೊಳ್ಳುವದಕ್ಕಿಂತ ಅಥವಾ ಅಳತೆಗೆ ತಕ್ಕ ಪ್ಯಾಂಟ ಹುಡುಕುವದಕ್ಕಿಂತ. ಲುಂಗಿ ಉಡುವದೇ ಸುಲಭ. ಪಂಚೆ ಮತ್ತು ದೋತಿ ಉಟ್ಟಿಕೊಳ್ಳುವದು ಕೆಲವುದಿನ ಕಷ್ಟವಾಗಬಹುದು ಆದರೆ ರೂಢಿ ಆಯಿತೆಂದರೆ ಅದು ಅತಿಸುಲಭ .ಮಧ್ಯದಲ್ಲಿ ಬಿಚ್ಚುಕೊಳ್ಳುವದೆಂಬ ಭಯವಿದ್ದವರು  ಸೊಂಟಕ್ಕೆ ಒಂದು ಬೆಲ್ಟನ್ನ ಸುತ್ತಿಕೊಂಡರೆ ನಿರಾಳ.ಈಗಂತೂ ದೋತಿ ರೆಡೀಮೆಡ್ ಬಂದಿದೆ ಬಿಡಿ

ಬಟ್ಟೆಯನು ಆಡ್ಡ ಸುತ್ತಿದರದು ಲುಂಗಿ
ಅಡ್ಡ ಉಟ್ಟು ಆಮೇಲೆ ಒಂದು ತುದಿಯನು ಹಿಂದೆ ಸೆಕ್ಕಿಸಿದರದುವೆ ಪಂಜಿ
ನೆರಿಗೆ ನೆರಿಗೆಯ ಗೊಳಿಸಿ ಉದ್ದ ಬಿಟ್ಟರೆ ಅದುವೆ ದೋತಿ
ಹಿಂದೆ ಮುಂದೆರಡು ಕಡೆ ಸಮನಾಗಿ ಸೆಕ್ಕಿಸಿದರದು  ಕೌಪೀನ(ಕಚ್ಚೆ)
ಗೊತ್ತಾಗದಿದ್ದರೆ ಬಲ್ಲವರಿಂದ ತಿಳಿದುಡುವದ ಕಲಿಯೊ ಯಮ್ಮೆ ತಮ್ಮಾ





ಆಶಾಭಾವನೆ
೧) ಮುಂದೊಂದು ದಿನ ಲುಂಗಿ ಸಂಘ ಆಗೆ ಆಗ್ತದೆ.ಅಲ್ಲಿ ನಮ್ಮಂತ ಲುಂಗಿ ಉಡುವವರಿಗೆ ಮನ್ನಣೆ ಸಿಕ್ತದೆ
೨) ಮುಂದಿನ ಸರ್ಕಾರ್ದವ್ರು ನಮ್ಗೆಲ್ಲಾ ಲುಂಗಿ ಹಂಚುವ ದಿನ ಬಂದೆ ಬರ್ತದೆ......
೩) ಸರ್ಕಾರಿ ಕಛೇರಿಗೆ ಬರುವ ಗಂಡಸರಿಗೆ.. ಮೇಲಿನ ಹುದ್ದೆಯಲ್ಲಿರುವವರಿಗೆ ದೋತಿಯೂ.... ಮತ್ತೆ ಕೆಳ ದರ್ಜೆ ನೌಕರರಿಗೆ ಮುಂಡು ಅಥವಾ ಲುಂಗಿ ಖಡ್ಡಾಯ................ 

ಮುಗಿಸವ ಮುನ್ನ 

ಲುಂಗಿಗೆ ಮುಂಡಿಗೆ ಜಯವಾಗಲಿ, 
ಬಳಸುವವರು ಹೆಚ್ಚಾಗಲಿ,
ವಿಷಯ ಹೌದೆನ್ನಿಸಿದರೆ 
ಮುಂಡಿಗೆ ಲುಂಗಿಗೆ  ಪಂಜೆಗೆ 
ಕೌಪೀನಕೆ ಸೇರಿ ಒಂದು ಜಯವೆನ್ನಿರಿ






***************************************



11 comments:

  1. very funny...ಕಟ್ಟಿದರೆ ಲುಂಗಿಯಾದೆ ಸೆಕ್ಕಿದರೆ ಪಂಚೆಯಾದೆ....
    ಹಾಗೆ ಹಾಸಿದರೆ ಹಾಸಿಗೆಗೆ ಮೇಲು ಹೊದಿಕೆಯಾದೆ
    ಹೊದ್ದರೆ ಚಾದರ , ಹರಿದರೆ ಒರೆಸುವ ತುಂಡಾದೆ
    ನೀವಾರಿಗಾದಿರೋ ಎಲೆ ಪ್ಯಾಂಟು ಚಡ್ಡಿಗಳಿರಾ.....
    ಸಾಲುಗಳು ಇಷ್ಟವಾಯಿತು

    ReplyDelete
  2. @ದಿಗ್ವಾಸ್ ಹೆಗಡೆಯವರೆ ಧನ್ಯವಾದಗಾಳು,ಮತ್ತು ಸ್ವಾಗತವು.
    ಲುಂಗಿಗೆ ಮುಂಡಿಗೆ ಜಯವಾಗಲಿ,
    ಬಳಸುವವರು ಹೆಚ್ಚಾಗಲಿ,

    ರಜನಿಕಾಂತ್ ಜೋಕ್ಸ್ ರವರೆ ತಮಗೆ ಧನ್ಯವಾದ ಮೆಚ್ಚಿದ್ದಕ್ಕೆ,
    ಆಗಾಗ ನಮ್ಮ ರೈಲಲ್ಲಿ ಪ್ರಯಾಣ ಮಾಡ್ತಾ ಇರಿ

    ReplyDelete
  3. ನಾನು ಹತ್ತನೆ ತರಗತಿ ಪಾಸಾದ ಮೇಲೆ ಮನೆಯಲ್ಲಿ ಲುಂಗಿ ಉಡುತ್ತೇನೆ ಎಂದು ಘೋಷಿಸಿದೆ..
    ಅಂದರೆ ಅಲ್ಲಿವರೆಗೆ ಚಡ್ಡಿ ಹಾಕ್ಕೊತ್ತಿದ್ದೆ..

    ಲುಂಗಿ ಉಡುವದೆಂದರೆ ಸಮಾನ್ಯವೆ?

    ಆ ಸಂಭ್ರಮ.. ಸಡಗರ...!
    ರಾತ್ರಿ ನಿದ್ದೆಯಲ್ಲೂ ಲುಂಗಿ ಕಟ್ಟಿಕೊಳ್ಳುವ ಕನಸೇ ಬೀಳುತ್ತಿತ್ತು..!

    ಮತ್ತೆ ಹಳೆಯ ನೆನಪೆಲ್ಲ ಹಸಿರಾಗಿಸಿದ್ದೀರಿ.. ಅಭಿನಂದನೆಗಳು...

    ReplyDelete
  4. LUNGI BAGGENU ONDU LEKHANA BAREYABAHUDE.. SUNDARA VAAGIDE..

    nanna blogigomme banni

    ReplyDelete
  5. @ಪ್ರಕಾಶಣ್ಣಯ್ಯ ಧನ್ಯವಾದ....

    ಲುಂಗಿಯಾಸೊಬಗಿದೋ ಬಲ್ಲವನೆ ಬಲ್ಲ..............

    ಅಲ್ಲವೇ .....................................

    @ವಾಣಿಯಕ್ಕ ಧನ್ಯವಾದ
    ನಿಮ್ಮ blog ಗೆ ಬಂದಿದ್ದೇನೆ.......

    ಮನಸಿನ ಭಾವನೆಯ ಚಿತ್ತಾರ ಬಿಡಿಸಲು
    ಮಾತಿಗಿಂತ ಬರಹವೇ ಉತ್ತಮ ಎನ್ನುವುದು ನನ್ನ ಭಾವನೆ......
    (http://vanishrihs.blogspot.com/)

    ನಿಜವಾಗಲೂ ಸತ್ಯವಾದ ಮಾತನ್ನ ಹೇಳಿದ್ದೀರಿ

    ReplyDelete
  6. Mablanna, istalla helo neevu lungi udooro? pant hakoro? athava chaddigalo?????????????...
    Confusion marayre..........

    ReplyDelete
  7. Anonymous ರವರೇ (ತಮ್ಮಾ) Confusion ಯಾಕೆ ? ಸರಿಯಾಗಿ ಇನ್ನೊಮ್ಮೆ ಓದಿ... ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ... ಅದರೂ ಮತ್ತೆ ನಾನು ಉತ್ತರಿಸಿದರೆ ಪುನರುಕ್ತ ದೋಷ ನನ್ನನ್ನ ಸುತ್ತಿಕೊಳ್ಳುತ್ತದೆ....ಅಲ್ಲವೇ

    ReplyDelete
  8. ಭಟ್ರೇ ಲುಂಗಿ ಪುರಾಣ ಚೆನ್ನಾಗಿದೆ.

    ReplyDelete
  9. ಚೆನ್ನಾಗಿ ಬರೆದಿದ್ದೀರಿ. ಈಗಿನ ಕಾಲದಲ್ಲಿ ಪಂಚೆ ಉಟ್ಟುಕೊಂಡು ಊಟಕ್ಕೆ ಕುಳಿತುಕೊಳ್ಳಲು ನೂರಾರು ಪ್ರಶ್ನೆಗಳು. ಅದಕ್ಕೆ ಉತ್ತರಿಸಲು ಸರಿಯಾದ ಉತ್ತರವಿರದೆ ನಮ್ಮ ತರಹವನ್ನು ಬಿಡದೆ ಪಾಶ್ಚಾತ್ಯರ ಅನುಕರಣೆಯಿಂದ ಹೆಣಗಾಡಬೇಕಾಗಿದ್ದೆ.
    ಯಾಕೆ ಊಟಕ್ಕೆ ಕುಳಿತಾಗ ಅಂಗಿ ಬಿಚ್ಚಿ ಪಂಚೆ-ಶಲ್ಯ ಉಟ್ಟುಕೊಳ್ಳುತ್ತಾರೆ.ಇದಕ್ಕೆ ಉತ್ತರ ಗೊತ್ತಿದ್ದರೆ ದಯವಿಟ್ಟು ತಿಳಿಸಿ.

    ReplyDelete